ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ ತಾಲ್ಲೂಕಿಗೆ ದೂರವಾದ ಅಗ್ನಿ ಶಾಮಕ ಠಾಣೆ

Published 17 ಮೇ 2024, 6:01 IST
Last Updated 17 ಮೇ 2024, 6:01 IST
ಅಕ್ಷರ ಗಾತ್ರ

ಹುಣಸಗಿ: ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಹಾಗೂ ತಾಲ್ಲೂಕು ಕೇಂದ್ರವಾದ ಹುಣಸಗಿ ಪಟ್ಟಣದಲ್ಲಿ ಸಾರ್ವಜನಿಕ ತುರ್ತು ಸೇವೆಗಳಲ್ಲಿ ಒಂದಾಗಿರುವ ಅಗ್ನಿ ಶಾಮಕ ಠಾಣೆ ಅಗತ್ಯವಿದೆ. ಈ ಭಾಗದ ಜನರ ದಶಕಗಳ ಬೇಡಿಕೆಗಳಲ್ಲಿ ಇದೂ ಒಂದಾಗಿದೆ.

‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಭತ್ತ ಬೆಳೆಯುವ ಪ್ರಮುಖ ತಾಲ್ಲೂಕುಗಳಲ್ಲಿ ಹುಣಸಗಿ ಕೂಡ ಒಂದು. ಬಹುತೇಕ ನೀರಾವರಿ ಕೃಷಿ ಭೂಮಿಯನ್ನು ಹೊಂದಿದೆ. ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಗ್ನಿ ಅವಘಡಗಳು ಈ ಭಾಗದಲ್ಲಿ ಸಂಭವಿಸುತ್ತವೆ. ಆದರೆ ಸುರಪುರದಿಂದ ಅಗ್ನಿ ಶಾಮಕ ಸಿಬ್ಬಂದಿ ತಮ್ಮ ವಾಹನದೊಂದಿಗೆ ಬರುವಷ್ಟರಲ್ಲಿಯೇ ಹಾನಿಯ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಹುಣಸಗಿ ಪಟ್ಟಣದಲ್ಲಿಯೇ ಅಗ್ನಿ ಶಾಮಕ ದಳ ಇದ್ದಲ್ಲಿ ಹೆಚ್ಚಿನ ಪ್ರಮಾಣದ ಹಾನಿ ತಪ್ಪಿಸಬಹುದಾಗಿದೆ’ ಎಂದು ಪಟ್ಟಣದ ಬಸವರಾಜ ಮೇಲಿನಮನಿ ಹಾಗೂ ವೆಂಕಟೇಶ ಅರಳಿಗಿಡದ ಹೇಳಿದರು.

‘ಬೇಸಿಗೆ ಹಾಗೂ ಪ್ರವಾಹ ಸಂದರ್ಭದಲ್ಲಿ ಕಳೆದ ವರ್ಷ 30 ಹಾಗೂ ಪ್ರಸಕ್ತ ವರ್ಷದಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ಹುಣಸಗಿ ತಾಲ್ಲೂಕಿನಲ್ಲಿಯೇ ಸಂಭವಿಸಿವೆ. ಆದರೆ ಒಂದೇ ಅಗ್ನಿ ಶಾಮಕ ವಾಹನವಿದ್ದು, ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ತಕ್ಷಣಕ್ಕೆ ಸ್ಪಂದಿಸಲು ಪಕ್ಕದ ಸುತ್ತಮುತ್ತಲಿನ ತಾಲ್ಲೂಕಿನ ನೆರವು ಪಡೆಯುತ್ತಿದ್ದೇವೆ’ ಎಂದು ಸುರಪುರ ಅಗ್ನಿ ಶಾಮಕ ಠಾಣಾಧಿಕಾರಿ ಪ್ರಮೋದ ವಾಲಿ ಹೇಳಿದರು.

‘ಹುಣಸಗಿ ತಾಲ್ಲೂಕಿನ ಎರಡು ಹೋಬಳಿ ಕೇಂದ್ರಗಳಲ್ಲಿ ಒಟ್ಟು 83 ಹಳ್ಳಿಗಳು ಹಾಗೂ 40 ಕ್ಕೂ ಹೆಚ್ಚು ತಾಂಡಾಗಳು ಬರುತ್ತವೆ. ಸುರಪುರದಿಂದ ನಾರಾಯಣಪುರ ಭಾಗಕ್ಕೆ ಸುಮಾರು 75 ಕಿ.ಮೀ ದೂರ ಇರುವುದರಿಂದಾಗಿ ಕೊಡೇಕಲ್ಲ ಹಾಗೂ ನಾರಾಯಣಪುರ ಭಾಗದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ತಕ್ಷಣಕ್ಕೆ ಸ್ಪಂದಿಸುವುದು ಕಷ್ಟ. ಆದ್ದರಿಂದ ತಾಲ್ಲೂಕು ಕೇಂದ್ರವಾಗಿರುವ ಹುಣಸಗಿಯಲ್ಲಿಯೇ ಆರಂಭವಾದಲ್ಲಿ ಸಾರ್ವಜನಿಕವಾಗಿ ಹೆಚ್ಚು ಉಪಯುಕ್ತವಾಗಲಿದೆ’ ಎಂದು ಕೊಡೇಕಲ್ಲ ಗ್ರಾಮದ ರಮೇಶ ಬಿರಾದಾರ ಹಾಗೂ ಜೋಗುಂಡಬಾವಿ ಗ್ರಾಮದ ಸ್ನೇಹ ಚಿರಾಯು ಬಳಗದ ಬಸವರಾಜ ಮಾಮನಿ ಅಭಿಪ್ರಾಯ ವ್ಯಕ್ತಪಡಿಸಿದರು.

‘ದನ–ಕರುಗಳಿಗೆ ಅಗತ್ಯವಿರುವ ಮೇವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೇವು. ಕಳೆದ ಎರಡು ದಿನಗಳ ಹಿಂದೆ ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಅಂದಾಜು 30 ಟ್ರ್ಯಾಕ್ಟರ್‌ನಷ್ಟು ಮೇವು ಆಕಸ್ಮಿಕ ಬೆಂಕಿಗೆ ಆಹುತಿಯಾಯಿತು. ಸುರಪುರದಿಂದ ಅಗ್ನಿ ಶಾಮಕ ದಳ ಬರುವಷ್ಟರಲ್ಲಿ ಬಹುತೇಕ ಸುಟ್ಟು ಹೋಗಿತ್ತು’ ಎಂದು ರೈತರಾದ ಮಹಾಂತೇಶ ಯಾಳಗಿ ಹಾಗೂ ಚನ್ನಪ್ಪ ಹೊಸಮನಿ ನೊಂದು ನುಡಿದರು.

‘ಪ್ರಸಕ್ತ ವರ್ಷದಲ್ಲಿ ಕೊಡೇಕಲ್ಲ, ಹುಲಿಕೇರಿ, ನಾರಾಯಣಪುರ ಬಳಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಪಕ್ಕದ ವಿಜಯಪುರ ಜಿಲ್ಲೆಯ ತಾಳಿಕೋಟೆಯಿಂದ ಅಗ್ನಿ ಶಾಮಕ ವಾಹನ ಆಗಮಿಸಿತ್ತು’ ಎಂದು ಕೊಡೇಕಲ್ಲ ಉಪ ತಹಶೀಲ್ದಾರ್ ಕಲ್ಲಪ್ಪ ಜಂಜಿನಗಡ್ಡಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT