ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಪ್ರವಾಹ, ಅತಿವೃಷ್ಟಿಗೆ ಸೊರಗಿದ ವ್ಯಾಪಾರ

ಕುಂಬಾರರ ಬಾಳಲ್ಲಿ ಕಾಣದ ಬೆಳಕು, ಹಣತೆ ಮಾರಾಟವೂ ಕುಸಿತ
Last Updated 13 ನವೆಂಬರ್ 2020, 1:29 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಉಂಟಾದ ಪ್ರವಾಹ, ಅತಿವೃಷ್ಟಿಯಿಂದ ದೀಪಾವಳಿ ಖರೀದಿ ವಹಿವಾಟು ಇಳಿಕೆಯಾಗಿದೆ.

ಮುಂಗಾರು ಆರಂಭದಿಂದಲೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಹೆಸರು ಬೆಳೆ ಬಂಪರ್ ಬರುವ ನಿರೀಕ್ಷೆ ಇತ್ತು. ಆದರೆ, ಅಧಿಕ ಮಳೆ ಬಂದು ಎಲ್ಲ ನಾಶವಾಗಿತ್ತು. ಆ ನಂತರ ಕೃಷ್ಣಾ, ಭೀಮಾ ನದಿ ತೀರದ ರೈತರು ಹತ್ತಿ, ಭತ್ತ ಬೆಳೆದಿದ್ದರು. ಆದರೆ, ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಪ್ರವಾಹದಿಂದ ಬಿತ್ತಿದ ಬೆಳೆ ಎಲ್ಲ ನಾಶವಾಗಿದೆ. ಇದು ಈಗ ದೀಪಾವಳಿ ಖರೀದಿ ಮೇಲೆಯೂ ಪ್ರಭಾವ ಬಿದ್ದಿದೆ.

ಕೈಯಲ್ಲಿ ಹಣವಿಲ್ಲ:ಗ್ರಾಮೀಣ ಭಾಗ ದಿಂದ ನಗರ ಪ್ರದೇಶಗಳಿಗೆ ಬಂದು ಖರೀದಿ ಮಾಡುವವರು ಬಹುತೇಕ ರೈತರೇ ಆಗಿದ್ದಾರೆ. ಈಗ ರೈತರ ಕೈಯಲ್ಲಿ ಹಣವಿಲ್ಲ. ಇದರಿಂದ ವ್ಯಾಪಾರ ವಹಿವಾಟಿನ ಮೇಲೆ ಪ್ರಭಾವ ಬೀರಿದೆ.

ನಗರದ ಗಾಂಧಿ ವೃತ್ತದ ಮಾರುಕಟ್ಟೆಯಲ್ಲಿ ಜನಸಂದಣಿಯೇ ಕಾಣುತ್ತಿಲ್ಲ. ಹೆಚ್ಚಾಗಿಹಣತೆಗಳು ಮಾತ್ರ ಕಾಣಸಿಗುತ್ತವೆ. ಆಕಾಶ ಬುಟ್ಟಿಗಳು ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿ ಮಾರಾಟಕ್ಕೆ ಇಡಲಾಗಿದೆ.

ನಗರದ ಗಾಂಧಿ ವೃತ್ತದಲ್ಲಿ ಕುಂಬಾರ ಸಮುದಾಯದ ಮಹಿಳೆಯರು ಹಣತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ವ್ಯಾಪಾರವೇ ಆಗುತ್ತಿಲ್ಲ ಎಂದು ಆಳಲು ತೋಡಿಕೊಂಡರು.

ಹಣತೆಯಲ್ಲಿ ವಿವಿಧ ಆಕಾರಗಳಿದ್ದು, ಅವುಗಳಿಗೆ ತಕ್ಕಂತೆ ದರ ನಿಗದಿ ಮಾಡಿದ್ದಾರೆ. ಚಿಕ್ಕ ಗಾತ್ರ ಹಣತೆ ₹ 5, ಮಧ್ಯಮ ಗಾತ್ರದ ₹ 10, ದೊಡ್ಡ ಗಾತ್ರದ ಅಲಂಕಾರವುಳ್ಳ ಹಣತೆಗೆ ₹ 20 ದರವಿದೆ.

‘ಬೆಳಿಗ್ಗೆಯಿಂದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ, ₹ 200 ವ್ಯಾಪಾರವೂ ಆಗಿಲ್ಲ. ಅಲಂಕಾರವುಳ್ಳ ಹಣತೆಗಳನ್ನು ಸೊಲ್ಲಾಪುರದಿಂದ ತಂದಿದ್ದೇವೆ’ ಎನ್ನುತ್ತಾರೆ ವ್ಯಾಪಾರಿ ಲಕ್ಷ್ಮಿ ಕುಂಬಾರ.

ಆಕಾಶ ಬುಟ್ಟಿಗಳಿಗೆ ಹೆಚ್ಚಿನದರ ಇದೆ. ₹ 100 ರಿಂದ ₹ 200 ತನಕ ದರ ನಿಗದಿ ಪಡಿಸಲಾಗಿದೆ. ಆದರೆ, ಗ್ರಾಹಕರು ಮಾತ್ರ ಬರುತ್ತಿಲ್ಲ ಎಂದು ವ್ಯಾಪಾರಿಗಳು ತಿಳಿಸಿದರು.

ಕುಂಬಾರರ ಬದುಕಲ್ಲಿ ಕತ್ತಲು: ಕೊರೊನಾ ಲಾಕ್‌ಡೌನ್‌ ಮಧ್ಯೆ ಯುಗಾದಿ ಹಬ್ಬದ ಬೇವಿನ ಗಡಿಗೆಗಳು ವ್ಯಾಪಾರ ಇಲ್ಲದೆ ತೀರಾ ಸಂಕಷ್ಟವನ್ನು ಕುಂಬಾರರ ಕುಟುಂಬಗಳು ಅನುಭವಿಸಿದ್ದವು. ಈಗ ಭೀಮಾ ನದಿ ಪ್ರವಾಹದಿಂದ ಕುಂಬಾರರ ಬದುಕು ಕೊಚ್ಚಿಹೋಗಿದೆ. ದೀಪಾವಳಿ ಹಬ್ಬಕ್ಕೆ ತಯಾರಿಸಿದ ಹಣತೆಗಳು ನದಿ ನೀರಿನಲ್ಲಿ ಕೊಚ್ಚಿಹೋಗಿವೆ. ನಾಯ್ಕಲ್ ಗ್ರಾಮದ 5 - 6 ಕುಟುಂಬದವರು ದೀಪಾವಳಿಗಾಗಿ ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಅವರೆಲ್ಲರ ಸ್ಥಿತಿ ಶೋಚನೀಯವಾಗಿದೆ.

ಕುಂಬಾರರು ಕುಲ ಕಸುಬು ಕುಂಬಾರಿಕೆ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಾರೆ. ಇದೇ ವೃತ್ತಿಯಿಂದ ಯಾವ ಸಂಪಾದನೆಯೂ ಆಗುತ್ತಿಲ್ಲ.

’ಮಣ್ಣಿನ ಸಾಮಾಗ್ರಿಗಳ ಬಳಕೆ ಇರುವ ಟಿಗ್ರಿ ಸಹಿತ ಹಾಳಾಗಿದೆ. ಇದನ್ನು ತರಲು ಸುಮಾರು ₹ 20 ಸಾವಿರ ಹಣ ಬೇಕಾಗುತ್ತದೆ. ಕುಂಬಾರು ಕುಂಬಾರಿಕೆ ಮಾಡದೆ ಕೈ ಚೆಲ್ಲಿ ಕುಳಿತಿವೆ. ಕುಂಬಾರರ ಜೀವನ ದುಸ್ತರವಾಗಿದೆ’ ಎನ್ನುತ್ತಾರೆ ಇಲ್ಲಿನ ಕುಂಬಾರರು.

ಭೀಮಾ ನದಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿ, ಮನೆಗಳು ಜಲಾವೃತಗೊಂಡು ಹಣತೆಗಳು, ಮಡಿಕೆ ಕುಡಿಕೆಗಳು, ಕಟ್ಟಿಗೆಗಳು ಎಲ್ಲವೋ ಭೀಮೆ ಪಾಲಾಗಿ ಕೊಚ್ಚಿಹೋಗಿವೆ. ದೀಪಾವಳಿ ಕುಂಬಾರರ ಬದುಕಲ್ಲಿ ಕತ್ತಲೆ ಆವರಿಸಿದೆ.

***

ಎರಡು ದಿನಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಹಣತೆ ಕೇಳುವವರು ಇಲ್ಲ. ಇದರಿಂದ ಈ ವರ್ಷ ಅಳಿದುಳಿದ ಹಣತೆಗಳು ಹೇಗೆ ಮಾರಾಟ ಮಾಡುವುದು
- ಶಾಂತಮ್ಮ ಕುಂಬಾರ, ಹಣತೆ ವ್ಯಾ‍ಪಾರಿ

***

ಮನೆ ಮಂದಿ ಎಲ್ಲಾ ಸೇರಿ ದುಡಿದು ಸಂಗ್ರಹ ಮಾಡಿದ ಹಣತೆಗಳು ಎಲ್ಲವೂ ಭೀಮಾ ನದಿ ಪಾಲಾಗಿವೆ. ಕುಂಬಾರರ ಬದುಕಲ್ಲಿ ಕತ್ತಲು ಆವರಿಸಿದೆ
- ಹಣಮಂತ ಕುಂಬಾರ ನಾಯ್ಕಲ್ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT