ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಭಾರತ್‌ ನಿಲುಗಡೆಗೆ ಒತ್ತಾಯ

ಇಬ್ಬರು ಸಂಸದರ ವಿರುದ್ಧ ಜಿಲ್ಲೆಯ ಜನತೆ ಆಕ್ರೋಶ
Published 10 ಮಾರ್ಚ್ 2024, 15:40 IST
Last Updated 10 ಮಾರ್ಚ್ 2024, 15:40 IST
ಅಕ್ಷರ ಗಾತ್ರ

ಯಾದಗಿರಿ: ಮಾರ್ಚ್‌ 12ರಂದು ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್‌ (22232) ರೈಲು ಆರಂಭವಾಗಿದ್ದು, ಯಾದಗಿರಿಯಲ್ಲಿ ನಿಲುಗಡೆ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

ಗುಂತಕಲ್‌ ವಿಭಾಗದಲ್ಲೇ ಅತಿಹೆಚ್ಚು ಆದಾಯ ನೀಡುತ್ತಿರುವ ಯಾದಗಿರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ರೈಲು ನಿಲುಗಡೆ ಮಾಡದಿರುವುದರಿಂದ ಇಬ್ಬರು ಸಂಸದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಕಲಬುರಗಿ ಸಂಸದ ಡಾ.ಉಮೇಶ ಜಾಧವ, ರಾಜ್ಯಸಭಾ ಸದಸ್ಯರು ಆದ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಈ ಭಾಗವನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಕನ್ನಡ ‍ಪರ ಸಂಘಟನೆಗಳ ಕಾರ್ಯಕರ್ತರು ದೂರಿದ್ದಾರೆ.

‘ಜಿಲ್ಲೆಯಾಗಿ ಸುಮಾರು 14 ವರ್ಷಗಳಾಗುತ್ತಿದ್ದರೂ ರೈಲ್ವೆ ಇಲಾಖೆ ಮೂಲ ಸೌಕರ್ಯ ಹೊಂದಿಲ್ಲ. ಹೀಗಾಗಿ ವಂದೇ ಭಾರತ್‌ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ಭೀಮು ನಾಯಕ ಆಗ್ರಹಿಸಿದ್ದಾರೆ.

‘ಈಗಾಗಲೇ ಕೇಂದ್ರ ಸರ್ಕಾರ ಹಿಂದುಳಿದ ಜಿಲ್ಲೆಯೆಂದು ಘೋಷಿಸಿದೆ. ಇಲ್ಲಿವರೆಗೆ ರಾಜಧಾನಿ, ಕನ್ಯಾಕುಮಾರಿ ಎಕ್ಸ್‌ಪ್ರೆಸ್, ಶತಾಬ್ಧಿ, ಯಶವಂತಪುರ-ಅಹಮದಾಬಾದ್, ಯಶವಂತಪುರ-ಗೋರಖಪುರ, ಯಶವಂತಪುರದಿಂದ ಉತ್ತರ ಭಾರತದ ಕಡೆಗೆ ಬಹುತೇಕ ಪ್ರಮುಖ ರೈಲುಗಳು ನಿಲುಗಡೆಯಾಗಬೇಕಿದ್ದು, ಕೂಡಲೇ ಎಲ್ಲಾ ರೀತಿಯ ಸ್ಪೆಷಲ್ ರೈಲು, ಸೂಪರ್ ಫಾಸ್ಟ್ ರೈಲುಗಳು, ವಾರದ ರೈಲುಗಳು ಮತ್ತು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿರುವ ಸಿಕಂದರಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲ್ಲಿಸಲೇಬೇಕು’ ಎಂದು ಒತ್ತಾಯಿಸಿದ್ದಾರೆ.

‘ವಂದೇ ಭಾರತ್ ರೈಲು ನಿಲ್ಲಿಸಿದರೆ ಜನರಿಗೆ ಬಹಳ ಅನುಕೂಲ ಆಗುತ್ತದೆ. ಒಂದು ವೇಳೆ ರೈಲು ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲ್ಲಿಸದೆ ಹೋದರೆ ಕರವೇ ಜಿಲ್ಲಾ ಘಟಕದ ವತಿಯಿಂದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘ಯಾದಗಿರಿಯಲ್ಲಿ ವಂದೇ ಭಾರತ್‌ ರೈಲು ನಿಲ್ಲಿಸಬೇಕು. ಇಲ್ಲವಾದಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಗುವುದು’ಎಂದು ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ ಹೇಳಿಕೆ ನೀಡಿದ್ದಾರೆ.

‘ಕೇಂದ್ರ ಸರ್ಕಾರ ಕಲಬುರಗಿಯಿಂದ ಬೆಂಗಳೂರಿಗೆ ನೂತನ ವಂದೇ ಭಾರತ್‌ ರೈಲು ಲೋಕಾರ್ಪಣೆ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ. ಆದರೆ, ಕರ್ನಾಟಕದಲ್ಲಿ ಅತಿ ಹೆಚ್ಚು ಜಿಲ್ಲೆಯಿಂದ ಬೆಂಗಳೂರು ಸೇರಿದಂತೆ ಎಲ್ಲಾ ಕಡೆಗಳಲ್ಲಿ ನಮ್ಮ ಕಾರ್ಮಿಕರು ವಲಸೆ ಹೋಗುತ್ತಾರೆ. ಅಲ್ಲದೆ ಇಲ್ಲಿಂದ ಸಾಕಷ್ಟು ಜನ ಬೆಂಗಳೂರಿಗೆ ದಿನನಿತ್ಯ ತೆರಳುವುದರಿಂದ ಕೆಲವೊಂದು ರೈಲುಗಳು ನಿಲ್ಲುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎಲ್ಲ ರೈಲುಗಳನ್ನು ಇಲ್ಲಿ ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ತೆರಳುವುದರಿಂದ ಆದರಿಂದ ಅತಿ ಹೆಚ್ಚು ಆದಾಯ ನೀಡುವ ರೈಲು ನಿಲ್ದಾಣ ಇದಾಗಿದೆ. ಇಲ್ಲಿಂದ ತೆರಳುವ ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಕಡ್ಡಾಯವಾಗಿ ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT