ಸೋಮವಾರ, ಜುಲೈ 4, 2022
22 °C
ಜಿಲ್ಲಾ ಮಟ್ಟದ ಗಾಣಿಗ ಸಮಾವೇಶದಲ್ಲಿ ಶಾಸಕ ರಾಜೂಗೌಡ ಭರವಸೆ: ಶಿಕ್ಷಣಕ್ಕೆ ಆದ್ಯತೆ ನೀಡಲು ಕರೆ

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಹಕಾರ: ಶಾಸಕ ರಾಜೂಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ಗಾಣಿಗ ಸಮಾಜದ ಸಮಗ್ರ ಪ್ರಗತಿಗಾಗಿ ‘ಗಾಣಿಗ ಅಭಿವೃದ್ಧಿ ನಿಗಮ’ದ ಸ್ಥಾಪನೆಗೆ ಎಲ್ಲ ಮುಖಂಡರೂ ಒಂದಾಗಿ ಬಂದಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ರಾಜೂಗೌಡ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಯಾದಗಿರಿ ಜಿಲ್ಲಾ ಗಾಣಿಗ ಸಮಾಜದ ಸಮಾವೇಶದಲ್ಲಿ ಅವರು ಮಾತನಾಡಿದರು.

ಎಲ್ಲ ಸಮುದಾಯದ ಒಳಿತಿ ಗಾಗಿಯೇ ಇರುವ ಗಾಣಿಗ ಸಮಾಜದ ಸಮಗ್ರ ಅಭಿವೃದ್ಧಿಗಾಗಿ  ಪಟ್ಟಣದ ಹೊರವಲಯಲ್ಲಿ 2 ಎಕರೆ ಪ್ರದೇಶ ಮೀಸಲಿಡುವ ಜತೆಗೆ ವಿಶೇಷ ಅನುದಾನ ನೀಡಲಾಗುವುದು ಎಂದರು.

ಜಮಖಂಡಿ ಶಾಸಕ ಆನಂದ ನ್ಯಾಮಗೌಡರ್ ಮಾತನಾಡಿ, ಗಾಣಿಗ ಸಮಾಜ ಸ್ವಂತ ದುಡಿಮೆಯ ಮೇಲೆ ನಂಬಿಕೆ ಇಟ್ಟಿರುವ ಸಮಾಜವಾಗಿದ್ದು, ಪ್ರೀತಿ ವಿಶ್ವಾಸಕ್ಕೆ ಹೆಸರಾದ ಸಮಾಜವಾಗಿದೆ. ಈ ಸಮುದಾಯದ ಎಲ್ಲರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಮುಂದಾಗುವಂತೆ ಸಲಹೆ ನೀಡಿದರು.

ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ರಾಜ್ಯದಲ್ಲಿ ಸಜ್ಜನ್ ಗಾಣಿಗ, ಕರಿಕುಲ ಗಾಣಿಗ, ಸೇರಿದಂತೆ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿರುವ ಗಾಣಿಗ ಸಮಾಜದವರು 40 ಲಕ್ಷಕ್ಕೂ ಹೆಚ್ಚು ಜನರಿದ್ದು, ಬಹುತೇಕ ಜನರು ಇಂದಿಗೂ ಬಡವರಾಗಿದ್ದು, ರಾಜಕೀಯ, ಶೈಕ್ಷಣಿಕವಾಗಿ, ಆರ್ಥಿಕವಾಗಿಯೂ ತೀರಾ ಹಿಂದುಳಿದಿದ್ದಾರೆ. ಅವರನ್ನು ಮುಂದೆ ತರುವ ನಿಟ್ಟಿನಲ್ಲಿ ಸಂಘಟನೆಯ ಪದಾಧಿಕಾರಿಗಳು ಒತ್ತು ನೀಡುವಂತೆ ಕಿವಿಮಾತು ಹೇಳಿದರು.

ಕೆವೈಜಿಡಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ, ದೋರನ ಹಳ್ಳಿಯಲ್ಲಿ ನಡೆದ ದುರಂತದಲ್ಲಿ ಸಾಕಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಆದರೆ ಆ ಕುಟಂಬಗಳಿಗೆ ಇಂದಿಗೂ ಗ್ಯಾಸ್ ಕಂಪನಿಯಿಂದ ಯಾವುದೇ ಪರಿಹಾರ ಬಂದಿಲ್ಲ. ಆದ್ದರಿಂದ ಕಂಪನಿಯಿಂದ ಪರಿಹಾರ ದೊರಕಿಸಿಕೊಡುವಲ್ಲಿ ಎಲ್ಲರೂ ಪ್ರಯತ್ನಿಸುವಂತೆ ಮನವಿ ಮಾಡುತ್ತಾ, ತಾವು ತಲಾ ₹25 ಸಾವಿರ ಹಣದ ಚೆಕ್ ನೀಡುತ್ತಿರುವುದಾಗಿ ಅವರು ತಿಳಿಸಿದರು.

ಸಿಂದಗಿ ಶಾಸಕ ರಮೇಶ ಭೂಸನೂರ ಹಾಗೂ ಉದ್ಯಮಿ ಡಾ.ಎಸ್.ಪಿ ದಯಾನಂದ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡರ್ ಸೇರಿದಂತೆ ಇತರರು ಮಾತನಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ  ಜಯಬಸವಕುಮಾರ ಸ್ವಾಮೀಜಿ, ಕೋಲಾರದ ಕಲ್ಲಿನಾಥ ದೇವರು ಹಾಗೂ ದೇವಪುರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಮುಂಬರುವ ದಿನಗಳಲ್ಲಿ ಸಮಾಜದಲ್ಲಿನ ಮುಖಂಡರು, ಸಾಮಾಜಿಕ ಚಿಂತಕರು ಸಮಾಜದ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.

ಗಾಣಿಗ ಸಮಾಜ ಸಂಘದ ಹುಣಸಗಿ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಬೋರಮಗುಂಡ ಅಧ್ಯಕ್ಷತೆ ವಹಿಸಿದ್ದರು.
ವೀರಘಟ್ಟದ ಅಡವಿಲಿಂಗ ಮಹಾರಾಜರು, ಕೊಡೇಕಲ್ಲನ ಶಿವಕುಮಾರ ದೇವರು, ಮಹಲಿನ ಮಠದ ವೃಷಬೇಂದ್ರ ಅಪ್ಪನವರು, ಗುಳಬಾಳ ಮರಿಹುಚ್ಚೇಶ್ವರ ಸ್ವಾಮೀಜಿ, ನಾವದಗಿಯ ರಾಜೇಂದ್ರ ಒಡೆಯರು, ಬಂಡೆಪ್ಪನಹಳ್ಳಿಯ ಮುತ್ಯಾ, ಗಾಣಿಗ ಸಮಾಜದ ಮುಖಂಡರಾದ ಗುರಣ್ಣ ಗೋಡಿ, ಉಮೇಶ ಸಜ್ಜನ್, ಜಿ.ಪಂ.ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಮುಖಂಡರಾದ ಬಸನಗೌಡ ಯಡಿಯಾಪುರ, ಪ್ರಕಾಶ ಸಜ್ಜನ್, ಬಸವರಾಜಸ್ವಾಮಿ ಸ್ಥಾವರ ಮಠ, ಬಿ.ಎಂ.ಅಳ್ಳಿಕೋಟೆ, ಶರಣು ದಂಡಿನ್, ಸಂಗಣ್ಣ ವೈಲಿ, ಸಿದ್ಧನಗೌಡ ಕರಿಬಾವಿ ಇದ್ದರು. ಶಿಕ್ಷಕ ಎಸ್.ಎಸ್ ಮಾರನಾಳ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಅಲಂಕೃತ ವಾಹನದಲ್ಲಿ ಗಾಣದೇವರ ಭಾವಚಿತ್ರ ಮೆರವಣಿಗೆಗೆ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಪೂರ್ಣ ಕುಂಭ ಹಾಗೂ ಕಲಾ ತಂಡಗಳ ನೃತ್ಯ ಆಕರ್ಷಕವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು