ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಜಲ್‌ನಲ್ಲಿ ಅಡಗಿದೆ ಕಾವ್ಯಾತ್ಮಕ ಅಭಿವ್ಯಕ್ತಿ: ಸಚಿವ ಶರಣಬಸಪ್ಪ ದರ್ಶನಾಪುರ

‘ನಿಮ್ಮ ಜೊತೆ ಜೊತೆಯಲಿ’ ಗಜಲ್‌ ಕೃತಿ ಕೃತಿ ಬಿಡುಗಡೆ
Published 27 ಆಗಸ್ಟ್ 2024, 15:27 IST
Last Updated 27 ಆಗಸ್ಟ್ 2024, 15:27 IST
ಅಕ್ಷರ ಗಾತ್ರ

ಶಹಾಪುರ: ‘ಶಾಂತರಸರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ನಮ್ಮ ನೆಲ್ಲದ ಬಹುಮುಖ ಪ್ರತಿಭೆ ಆಗಿದ್ದಾರೆ. ನಮ್ಮ ಭಾಗದ ಹಲವಾರು ಸಮಸ್ಯೆ, ಸವಾಲುಗಳಿಗೆ ಉತ್ತರ ನೀಡುತ್ತಾ ಸಾಗಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಗಜಲ್‌ನಲ್ಲಿ ಕಾವ್ಯಾತ್ಮಕ ಅಭಿವ್ಯಕ್ತಿ ಅಡಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ಡಾ.ಚೆನ್ನಣ್ಣ ವಾಲೀಕಾರ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕಲಾನಿಕೇತನ ಟ್ರಸ್ಟ್ ಆಶ್ರಯದಲ್ಲಿ ಲೇಖಕ ದಿ.ಶಾಂತರಸರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮತ್ತು ಸಾಹಿತಿ ಸಿದ್ಧರಾಮ ಹೊನ್ಕಲ್ ರಚಿಸಿದ ‘ನಿಮ್ಮ ಜೊತೆ ಜೊತೆಯಲಿ’ ಗಜಲ್‌ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿರಿಯ ಸಾಹಿತಿ ಶಾಂತರಸರ ಮೌಲ್ಯಯುತ ಕೃತಿಗಳನ್ನು ಅರ್ಥೈಸಿಕೊಂಡು ಓದಬೇಕು. ಅವರ ಬದುಕಿನ ಆದರ್ಶ ತತ್ವಗಳು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು’ ಎಂದರು.

ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ‘ಸರ್ಕಾರದ ತಪ್ಪುಗಳನ್ನು ಕಠೋರವಾಗಿ ಟೀಕಿಸುವ ಹಾಗೂ ಹೋರಾಟದ ಪರಿಕಲ್ಪನೆಯ ಶಾಂತರಸರ ಮೊನಚು ಮಾತುಗಳು ನಮ್ಮೆಲ್ಲರಿಗೆ ಪ್ರೇರಣದಾಯಕವಾಗಿವೆ’ ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಸಿದ್ಧರಾಮ ಹೊನ್ಕಲ್ ಅವರು ರಚಿಸಿದ ಗಜಲ್ ಕೃತಿ ‘ನಿಮ್ಮ ಜೊತೆ ಜೊತೆಯಲಿ’ ಬಿಡುಗಡೆಗೊಳಿಸಲಾಯಿತು.

ಸಾಹಿತಿ ಮಹಾಂತೇಶ ನವಲಕಲ್, ಬಸವಪ್ರಭು ಹೆಂಬಿರಾಳ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಕಾಲೇಜಿನ ಪ್ರಾಚಾರ್ಯ ಅಯ್ಯಣ್ಣ ಇನಾಮದಾರ್, ಶಿವಲೀಲಾ, ಎಂ.ಎಸ್.ಸಜ್ಜನ್ ಹೊನ್ನಮ್ಮ, ಶಿವಶರಣಪ್ಪ ಭಂಡಾರಿ, ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಉಪಸ್ಥಿತರಿದ್ದರು.

‘ಗಜಲ್ ಕಾವ್ಯದ ರಾಣಿ’

‘ಗಜಲ್ ಎಂಬುದು ಪ್ರೇಮ ಕಾವ್ಯ. ಅದನ್ನು ಕಾವ್ಯದ ರಾಣಿ ಎನ್ನುತ್ತಾರೆ. ಗಂಡು ಮತ್ತು ಹೆಣ್ಣಿನ ಮಧುರ ಭಾವನೆಗಳನ್ನು ನೋವು, ಹತಾಶೆ, ದುಖ, ವಿರಹ ಹಾಗೂ ಸಂತಸವನ್ನು ಕಟ್ಟಿಕೊಡುವ ಒಂದು ಕಾವ್ಯ ಪ್ರಕಾರವಾಗಿದೆ. ಗಜಲ್ ಎರಡು ಮನಸ್ಸುಗಳ ಪಿಸುಮಾತು ಮನಕ್ಕೆ ಮತ್ತು ಬಳಲಿದ ಮನಸ್ಸುಗಳಿಗೆ ಚೈತನ್ಯವನ್ನು ತುಂಬುವ ದಿವ್ಯ ಔಷಧಿಯಾಗಿದೆ’ ಎಂದು ಸಾಹಿತಿ ಸಿದ್ಧರಾಮ ಹೊನ್ಕಲ್ ಬಣ್ಣಿಸಿದರು.

‘ಕನ್ನಡದಲ್ಲಿ ಈಗ ನನನ್ನು ಒಳಗೊಂಡು 300ಕ್ಕೂ ಹೆಚ್ಚು ಜನ ಗಜಲ್ ಕಾವ್ಯ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ದಿ.ಶಾಂತರಸ ಅವರು ಕನ್ನಡದ ಗಜಲ್ ಪಿತಾಮಹ ಎಂದರೆ ತಪ್ಪಾಗಲಾರದು. ಯುವಕರು ಸಾಹಿತ್ಯದ ಜತೆಯಲ್ಲಿ ಮನಸ್ಸಿಗೆ ಮುದ ನೀಡುವ ಗಜಲ್ ಕಾವ್ಯ ಓದುವುದರ ಜತೆಯಲ್ಲಿ ಆಸ್ವಾದಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT