ಸುರಪುರ: ದಪ್ಪ ಕನ್ನಡಕ, ನೆರೆದ ಕೂದಲು, ಸದಾ ಸಂಗೀತದ ಗುಂಗು, ಆಕರ್ಷಕ ನೋಟ, ಸಾಹಿತ್ಯಕ್ಕೆ ಕ್ಷಣ ಮಾತ್ರದಲ್ಲಿ ರಾಗ ಜೋಡಣೆ, ಹಾಡುಗಾರಿಕೆಯೆಂದರೆ ಬೇರಾವೂದು ಬೇಡ, ದೇಹ ದಣಿದರೂ ಇಂಗದ ಸಂಗೀತದ ಹಸಿವು...ಇವೆಲ್ಲ ಗಾಯನದ ಮೇರು ಪರ್ವತ ಗಜಲ್ ಗುಂಡಮ್ಮ ಅವರ ವ್ಯಕ್ತಿತ್ವದ ತುಣುಕುಗಳು.

ಗುಂಡಮ್ಮ ಅವರು, ಇಡೀ ಜೀವನವನ್ನು ಸಂಗೀತಕ್ಕೆ ಮೀಸಲಾಗಿಟ್ಟಿದ್ದರು. ತಮ್ಮ ಛಾಯೆಯನ್ನು ಯಾದಗಿರಿ, ಕಲಬುರಗಿ ಮತ್ತು ರಾಯಚೂರಿನಲ್ಲಿ ಹರಡಿದ್ದಾರೆ. ಗುಂಡಮ್ಮ, ಮೂಲತಃ ಸುರಪುರದವರು. ಇಲ್ಲಿಯೇ ಬಾಲ್ಯವನ್ನು ಕಳೆದರು. ಅಜ್ಜಿ ಅಚ್ಚಮ್ಮ, ತಾಯಿ ರಂಗಮ್ಮ ಉತ್ತಮ ಹಾಡುಗಾರರು. ಅವರಿಂದ ಪ್ರಭಾವಿತರಾಗಿ 2ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ, ಬಾಲ್ಯದಲ್ಲೆ ಸಂಗೀತಕ್ಕೆ ಅಣಿಯಾದವರು. ಅವರ ಆಸಕ್ತಿ ಕಂಡು ಉತ್ತಮ ಗುರುಗಳ ಬಳಿ ಸಂಗೀತ ಕಲಿಸಬೇಕು ಎಂದು ಪೋಷಕರು ನಿರ್ಧರಿಸಿದರು.

ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕುಟುಂಬ ಕಲಬುರಗಿಗೆ ವಲಸೆ ಹೋಯಿತು. ಇಲ್ಲಿನ ಜಗತ್ ಸರ್ಕಲ್ ಬಳಿ, ಚಿಕ್ಕ ಬಾಡಿಗೆ ಮನೆಯಲ್ಲಿ ವಾಸ. ಹೊಟ್ಟೆ ಪಾಡಿಗೆ ಕೂಲಿಯ ಆಸರೆ. ಅನತಿ ದೂರದ ಮನೆಯಲ್ಲಿ ಅಜೀಜ್ ಮಾಸ್ತರ್ ಎಂಬ ಶಿಕ್ಷಕರು ಸಂಗೀತ ಕಲಿಸುತ್ತಿದ್ದರು. ಕಿಟಕಿಯ ಹತ್ತಿರ ನಿಂತು ತನ್ಮಯಳಾಗಿ ಕೇಳುತ್ತಿದ್ದ ಬಾಲಕಿ ಗುಂಡಮ್ಮ ಮಾಸ್ತರ್ ಕಣ್ಣಿಗೆ ಬಿದ್ದಳು. ಬಾಲಕಿಯ ಆಸಕ್ತಿ ಗಮನಿಸಿ ಹಣ ತೆಗೆದುಕೊಳ್ಳದೇ ಸಂಗೀತವನ್ನು ಧಾರೆಯೆರೆದರು.

‘ಗುಂಡಮ್ಮ ಬಾಲಕಿಯಾಗಿದ್ದಾಗ ಕಲಬುರಗಿಯಲ್ಲಿ ಗಾಂಧೀಜಿ ಅವರ ಭಾಷಣ ಏರ್ಪಡಿಸಲಾಗಿತ್ತು. ಮನೆಯ ಪಕ್ಕದಲ್ಲೆ ಕಾರ್ಯಕ್ರಮ ಇದ್ದಿದ್ದರಿಂದ ಸಂಪೂರ್ಣ ಭಾಷಣ ಕೇಳಿದ ಗುಂಡಮ್ಮ ಸ್ವಾತಂತ್ರ ಪ್ರೇಮ ಬೆಳೆಸಿಕೊಂಡರು. ಅಂತೇಯೇ ಅವರ ಮಾತುಗಳಲ್ಲಿ ದೇಶಾಭಿಮಾನ ಇರುತ್ತಿತ್ತು’ ಎಂದು ಅವರ ಬಗ್ಗೆ ಸಂಶೋಧನೆ ಮಾಡಿರುವ ಸುನಂದಾ ಸಾಲವಾಡಗಿ ಉಲ್ಲೇಖಿಸಿದ್ದಾರೆ.

ಸ್ವಾತಂತ್ರ್ಯ ದೊರೆತ ಕಾಲವದು. ಹೈದರಾಬಾದ್ ನಿಜಾಮ, ಭಾರತದ ಒಕ್ಕೂಟಕ್ಕೆ ಸೇರದೆ ದಬ್ಬಾಳಿಕೆ ಮಾಡುತ್ತಿದ್ದ. ಅತನ ಸೇನೆ ಹಾಗೂ ರಜಾಕಾರರ ಹಾವಳಿ ಮಿತಿ ಮೀರಿತ್ತು. ಆಗ ಗುಂಡಮ್ಮರ ಕುಟುಂಬ ರಜಾಕಾರರ ಪ್ರಭಾವ ಕಡಿಮೆಯಿದ್ದ ರಾಯಚೂರಿಗೆ 1948ರಲ್ಲಿ ಬಂದು ನೆಲೆಸುತ್ತಾರೆ.

ಶ್ರೀನಿವಾಸಾಚಾರ್ಯ ಕಾಖಂಡಕಿ ಅವರಲ್ಲಿ ಸಂಗೀತ ಅಭ್ಯಾಸಕ್ಕೆ ಸೇರುತ್ತಾರೆ. ಮುಮ್ತಾಜ್ ಮಾಸ್ತರ್ ಅವರಲ್ಲೂ ಕಲಿಯುತ್ತಾರೆ. ಕೆಲ ಸಮಯ ಮಲ್ಲಿಕಾರ್ಜುನ ಮನ್ಸೂರ್ ಅವರಲ್ಲೂ ಅಭ್ಯಸಿಸುತ್ತಾರೆ.
ಶಾಸ್ತ್ರೀಯ, ಸುಗಮ ಸಂಗೀತ, ಜನಪದ, ವಚನ, ಗಜಲ್ ಎಲ್ಲ ರೀತಿಯ ಸಂಗೀತದ ಸಂಗೀತದ ಆಳ ಅಗಲವನ್ನೆಲ್ಲ ಕರಗತ ಮಾಡಿಕೊಂಡ ಗುಂಡಮ್ಮ ಅನನ್ಯ ಗಾಯಕಿಯಾಗಿ ಹೊರಹೊಮ್ಮುತ್ತಾರೆ. ರಾಜ್ಯ, ಹೊರ ರಾಜ್ಯಗಳಲ್ಲೂ ಅವರ ಸಂಗೀತ ಕಛೇರಿಗಳು ಏರ್ಪಟ್ಟವು. ಮುಂಬೈ, ಚೆನ್ನೈ, ಆಂಧ್ರಪ್ರದೇಶ, ಮಹಾರಾಷ್ಟ್ರ ಇತರೆಡೆ ಅವರ ಗಾಯನ ರಂಗೇರಿತು. ಒಮ್ಮೆ ಹೈದರಾಬಾದ್ನ ಶಾದ್ ನಗರದಲ್ಲಿ ನಡೆದ ಸಭೆಯಲ್ಲಿ ನಿಜಾಮನ ಮೊಮ್ಮಗ ಭಾಗವಹಿಸಿ ಗುಂಡಮ್ಮನ ಗಾಯನ ಕೇಳಿ ಅಭಿಮಾನಿಯಾಗಿದ್ದರು ಎನ್ನಲಾಗಿದೆ.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗುಂಡಮ್ಮ ಅವರ ಗಾಯನ ಕೇಳಿ ಭೇಷ್ ಎಂದಿದ್ದರು. ಅವರ ಹಾಡುಗಳು ದೂರದರ್ಶನ, ಆಕಾಶವಾಣಿಗಳಲ್ಲಿ ನಿರಂತರ ಪ್ರಸಾರವಾಗುತ್ತಿದ್ದವು.

ಗುಂಡಮ್ಮ ಅವರ ತಂದೆ ಪಂಚಾಕ್ಷರಿ, ಪತಿ ತಾಳಿಕೋಟಿ ವೆಂಕೋಬರಾಯ, ವಿಜಯಲಕ್ಷ್ಮೀ, ಮೀನಾಕ್ಷಿ, ಮಧುಮತಿ, ಮಂಜುಳಾ ಪುತ್ರಿಯರು. 2004 ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

ಅವರಿಗೆ ಕರ್ನಾಟಕ ಸರ್ಕಾರದ ಮತ್ತು ರಾಯಚೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸರ್ಕಾರದ ಗಜಲ್ ವಿದುಷಿ, ಕರ್ನಾಟಕ ಜನಪದ ಅಕಾಡೆಮಿ ಗೌರವ ಪ್ರಶಸ್ತಿ, ಕಲಬುರಗಿ ಆಕಾಶವಾಣಿಯ ಸಂಗೀತ ವಿಭಾಗದ ಆಯ್ಕೆ ಸಮಿತಿ ಸದಸ್ಯೆ, ಎರಡು ಅವಧಿಗೆ ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಸದ್ಯಸ್ಯತ್ವ ಇತರ ಬಿರುದುಗಳು ಸಂದಿವೆ.

ಗುಂಡಮ್ಮ ಕಲ್ಯಾಣ ಕರ್ನಾಟಕದ ಮೇರು ಪ್ರತಿಭೆ. ಹಾಡಿನ ಮೋಡಿ ಕಂಠ ಮಾಧುರ್ಯ ಧ್ವನಿಯ ಏರಿಳಿತ ವೀಕ್ಷಕರನ್ನು ತುದಿಗಾಲಲ್ಲಿ ಕೂರಿಸುವ ಸಾಮರ್ಥ್ಯ ಪಡೆದಿದ್ದವು
ವೀರ ಆಂಜನೇಯ ಗುಂಡಮ್ಮ ಅವರ ಜೀವನ ಚರಿತ್ರೆಯ ಲೇಖಕ

ತಮ್ಮ ಇಡೀ ಜೀವನವನ್ನು ಸಂಗೀತಕ್ಕೆ ಮೀಸಲಿಟ್ಟ ಗುಂಡಮ್ಮ ಎಲ್ಲ ತೆರನಾದ ಸಂಗೀತದಲ್ಲಿ ಪರಣಿತರಾಗಿದ್ದರು. ಅವರು ನಮ್ಮ ಭಾಗದವರು ಎಂಬುದು ಹೆಮ್ಮೆ
ಶಿವಯ್ಯ ಹಿರೇಮಠ ಸಹ ಪ್ರಾಧ್ಯಾಪಕರು ಸತ್ಯಂಪೇಟ

ಇಂದು ಕನ್ನಡ ಗಝಲ್ಗಳು ಎತ್ತರಕ್ಕೆ ಬೆಳೆಯುತ್ತಿರುವುದಕ್ಕೆ ಗುಂಡಮ್ಮ ಅವರ ಕೊಡುಗೆ ಅಪೂರ್ವ. ಕನ್ನಡ ಗಝಲ್ ಅಕಾಡೆಮಿ ಅರಂಭಕ್ಕೆ ಅವರೇ ಸ್ಫೂರ್ತಿ
ಎ. ಕಮಲಾಕರ ಕನ್ನಡ ಗಜಲ್ ಸಾಹಿತಿ

ಕನ್ನಡ ಗಜಲ್ಗೆ ಕೊಡುಗೆ ಉರ್ದು ಭಾಷೆಯಲ್ಲಿ ಗಜಲ್ಗಳು ಖ್ಯಾತಿ ಹೊಂದಿವೆ. ಅವುಗಳನ್ನು ಕನ್ನಡ ಭಾಷೆಯಲ್ಲಿ ಬರೆಯುವ ಸಾಹಸ ಮಾಡಿದವರು ಶಾಂತರಸ. ಕನ್ನಡ ಗಜಲ್ಗಳನ್ನು ಗುಂಡಮ್ಮ ಅವರ ಕಂಠದಿಂದ ಹಾಡಿಸಿ ಪ್ರಸಿದ್ಧಿಪಡಿಸಿದರು. ಶಾಂತರಸ ಗುಂಡಮ್ಮ ಅವರನ್ನು ರಾಯಚೂರಿನ ಲತಾ ಮಂಗೇಶ್ಕರ್ ಎಂದು ಕರೆಯುತ್ತಿದ್ದರು. ಕನ್ನಡ ಗಜಲ್ಗಳ ಗಾಯನ ಕಾರ್ಯಕ್ರಮದಲ್ಲಿ ಒಮ್ಮೆ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಐ.ಎಂ. ವಿಠಲಮೂರ್ತಿ ಭಾಗವಹಿಸಿದ್ದರು. ಗುಂಡಮ್ಮ ಅವರ ಗಾಯನಕ್ಕೆ ಮಾರುಹೋಗಿ ‘ಗಜಲ್ ಗುಂಡಮ್ಮ’ ಎಂದು ಕರೆದರು. ಅದು ಗುಂಡಮ್ಮ ಅವರಿಗೆ ಕಾಯಂ ಆಗಿ ಉಳಿಯಿತು. ಚಂಪಾ ಅವರು ಗುಂಡಮ್ಮ ಅವರ ಗಾಯನದ ಅಭಿಮಾನಿಯಾಗಿದ್ದರು. ಒಮ್ಮೆ ಜೀವನದಲ್ಲಿ ಬೇಸರ ಉಂಟಾದಾಗ ಗುಂಡಮ್ಮ ಅವರ ಹಾಡು ಕೇಳಿ ಜೀವನೋತ್ಸಾಹ ಪಡೆಯುತ್ತಾರೆ. ಈ ಬಗ್ಗೆ ಅವರು ಕವಿತೆ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.