ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ ವಿಧಾನಸಭಾ ಉಪಚುನಾವಣೆ: ಗೆಲುವಿಗೆ ಪ್ರಾರ್ಥಿಸಿ ದೇವರ ಮೊರೆ

ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಮುಂದುವರೆದ ವಿಶೇಷ ಪೂಜೆ
ಭೀಮಶೇನರಾವ್ ಕುಲಕರ್ಣಿ
Published 30 ಮೇ 2024, 4:45 IST
Last Updated 30 ಮೇ 2024, 4:45 IST
ಅಕ್ಷರ ಗಾತ್ರ

ಹುಣಸಗಿ: ತೀವ್ರ ಕುತೂಹಲ ಕೆರಳಿಸಿರುವ ಸುರಪುರ ವಿಧಾನಸಭಾ ಉಪಚುನಾವಣೆ ನಡೆದು 20 ದಿನಗಳು ಕಳೆದರೂ ಆಯಾ ಪಕ್ಷಗಳ ಕಾರ್ಯಕರ್ತರು ಮಾತ್ರ ತಮ್ಮ ನಾಯಕರ ಗೆಲುವಿಗಾಗಿ ದೇವರ ಮೊರೆ ಹೋಗುವುದು ನಿಂತಿಲ್ಲ.

ಮತ ಎಣಿಕೆಗಾಗಿ ಜೂನ್ 4 ರವರೆಗೆ ಕಾಯುವಂತಾಗಿದ್ದು, ಇದೇ ಮೊದಲ ಬಾರಿ ಸುದೀರ್ಘ ಅವಧಿಯ (28 ದಿನ) ನಂತರ ಮತ ಎಣಿಕೆ ನಡೆಯುತ್ತಿದ್ದು, ಅಲ್ಲಿಯವರೆಗೂ ಜನರ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕ್ಷೇತ್ರದ ಎಲ್ಲೆಡೆ  ಜಾತಿವಾರು ಬಲ ಮತ್ತು ಪಕ್ಷಗಳು ಹಾಗೂ ನಾಯಕರ ಪ್ರಭಾವ ಹಾಗೂ ಅಭಿವೃದ್ಧಿ ಕೆಲಸ ಹೀಗೆ ವಿವಿಧ ಮಾನದಂಡಗಳಿಂದ ಮತ ಲೆಕ್ಕಚಾರ ನಡೆದಿದೆ.

ಈ ಬಾರಿ ಮಾತ್ರ ಗೆಲುವು ನಮ್ಮದೇ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಆತ್ಮವಿಶ್ವಾಸದಲ್ಲಿದ್ದಾರೆ. ಕೆಲ ಕಾರ್ಯಕರ್ತರು ಒಂದು ಹೆಜ್ಜೆ ಮುಂದೆ ಹೋಗಿ ನಾಯಕರ ಗೆಲುವಿಗಾಗಿ ಹರಕೆ ಸಲ್ಲಿಕೆ, ಪ್ರಸಿದ್ಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿ ಬಂದಿದ್ದಾರೆ.

‘ಸುರಪುರ ಶಾಸಕರಾಗಿದ್ದ ರಾಜಾ ವೆಂಕಟಪ್ಪನಾಯಕ ಅವರ ನಿಧನದಿಂದಾಗಿ ನಡೆದ ಉಪ ಚುನಾವಣೆಯಲ್ಲಿ ಅವರ ಮಗ ರಾಜಾ ವೇಣುಗೋಪಾಲ ನಾಯಕ ಅವರು ಗೆಲುವಿಗೆ ಪ್ರಾರ್ಥಿಸಿ ತಿರುಮಲ ತಿರುಪತಿ ಕ್ಷೇತ್ರದಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿದೆ’ ಎಂದು ಬಂಜಾರಾ ಸಮುದಾಯದ ಮುಖಂಡ ಗೆದ್ದಲಮರಿ ತಾಂಡಾದ ಕೃಷ್ಣಾ ಜಾಧವ ಹೇಳಿದರು.

‘ಮತ್ತೊಬ್ಬ ಅಭಿಮಾನಿ ಕಂಚಿಗೆ ತೆರಳಿ ಅಲ್ಲಿ ರಾಜಾ ವೇಣುಗೋಪಾಲನಾಯಕ ಅವರ ಗೆಲುವಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ’ ಎಂದು ತಿಳಿದು ಬಂದಿದೆ.

ಚುನಾವಣೆಗೂ ಮುನ್ನ ಕಾಂಗ್ರೆಸ್‌ ಕಾರ್ಯಕರ್ತ ಹನುಮಂತ್ರಾಯ ತುಂಬಗಿ ಅವರು ರಾಜನಕೋಳೂರು ಗ್ರಾಮದಿಂದ ಸುರಪುರ ವೇಣುಗೋಪಾಲಸ್ವಾಮಿ ದೇವಸ್ಥಾನದವರೆಗೆ ಅನ್ನ–ನೀರು ಏನೂ ಸೇವಿಸದೇ ಪಾದಯಾತ್ರೆ ಕೈಗೊಂಡು ರಾಜಾ ವೇಣುಗೋಪಾಲ ನಾಯಕ ಅವರ ಗೆಲುವಿಗಾಗಿ ವಿಶೇಷ ಸೇವೆ ಸಲ್ಲಿಸಿದ್ದರು.

ಗೆದ್ದಲಮರಿ ಗ್ರಾಮದ ಅಭಿಮಾನಿಯೊಬ್ಬರು ಸುರಪುರ ಬಳಿಯ ಸಿಬಾರಬಂಡಿಯಿಂದ ತಾಲ್ಲೂಕಿನ ಗಡಿ ಗ್ರಾಮ ಗಡ್ಡಿ ಗದ್ದೆಮ್ಮ ದೇವಸ್ಥಾನದವರೆಗೂ ದೀಡ್‌ ನಮಸ್ಕಾರ ಹಾಕುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದ್ದರು.

ಇನ್ನೂ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರ ಪರ ಕೂಡ ಹುಣಸಗಿ ತಾಲ್ಲೂಕಿನ ಸಾಕಷ್ಟು ಅಭಿಮಾನಿಗಳು ಹಾಗೂ ಕಾರ್ಯಕರ್ತರು ದೇವರ ಮೊರೆ ಹೋಗಿದ್ದು, ಕಾಮನಟಗಿ ಹಾಗೂ ಹನುಮಸಾಗರದ ಕಾರ್ಯಕರ್ತರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರ ಗೆಲುವಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ.

ತಾಲ್ಲೂಕಿನ ಬೂದಿಹಾಳ ಗ್ರಾಮದ ಅಭಿಮಾನಿ ಸಂತೋಷ ಮಡ್ಡಿ ತಿರುಪತಿಗೆ ತೆರಳಿ ರಾಜೂಗೌಡ ಅವರ ಗೆಲುವಿಗಾಗಿ ಪೂಜೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಗುಳಬಾಳ ಗ್ರಾಮದ ವಿರೇಶ ಅಂಬಿಗೇರ ಹಾಗೂ ಈರಣ್ಣ ಛಲವಾದಿ ಹಾಗೂ ತೀರ್ಥ ಗ್ರಾಮದ ವಾಸುದೇವ ಹಾಗೂ ಗೆಳೆಯರು ಅಭಿಮಾನಿಗಳು ಮಂತ್ರಾಲಯಕ್ಕೆ ತೆರೆಳಿ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾಗಿ ತಿಳಿಸಿದರು.

ಇನ್ನೂ ಕೆಲ ಗ್ರಾಮಗಳಲ್ಲಿ ಅಭಿಮಾನಿಗಳು ತಮ್ಮ ನಾಯಕರ ಗೆಲುವಿಗಾಗಿ ಗ್ರಾಮದೇವತೆ ಹಾಗೂ ಇತರೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಹರಕೆ ಹೊತ್ತುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮದ ಬಿಜೆಪಿ ಕಾರ್ಯಕರ್ತರು  ರಾಜೂಗೌಡ ಅವರ ಗೆಲುವಿಗಾಗಿ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಿದ್ದಾರೆ.
ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮದ ಬಿಜೆಪಿ ಕಾರ್ಯಕರ್ತರು  ರಾಜೂಗೌಡ ಅವರ ಗೆಲುವಿಗಾಗಿ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT