ಭಾನುವಾರ, ಸೆಪ್ಟೆಂಬರ್ 19, 2021
31 °C
ಬಸ್‌ಗಳ ಕೊರತೆ ; ಕಾಲ್ನಡಿಗೆಯಲ್ಲಿ ಶಾಲೆ–ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು

ಗ್ರಾಮಾಯಣ: ಸೌಲಭ್ಯ ಕಾಣದ ಅಮಲಿಹಾಳ ಗ್ರಾಮ

ಪವನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿನ ಅಮಲಿಹಾಳ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕನಿಷ್ಠ ಸೌಕರ್ಯಗಳ ನಡುವೆಯೇ ನಿವಾಸಿಗರು ಬದುಕುವಂತಾಗಿದೆ.

ಅಗ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮ ಸುಮಾರು 1,200 ಜನ ಸಂಖ್ಯೆ ಹೊಂದಿದೆ. ಅಗ್ನಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ತಗ್ಗು–ಗುಂಡಿಗಳಿಂದ ಆವೃತ್ತವಾಗಿದೆ. ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುತ್ತಿದ್ದಾರೆ. ಸೂಕ್ತ ಚರಂಡಿಗಳು ಇಲ್ಲದೆ ಮಳೆ ಮತ್ತು ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ.

ಹುಣಸಗಿ ತಾಲ್ಲೂಕಿನ ಗಡಿಯಲ್ಲಿನ ಗ್ರಾಮಕ್ಕೆ ಇಲ್ಲಿಯವರೆಗೂ ಬಸ್ ಸೌಲಭ್ಯ ಕಲ್ಪಿಸಿಲ್ಲ. ಡಾಂಬರೀಕರಣ ಕಾಣದ ರಸ್ತೆಯಿಂದಾಗಿ ಬಸ್‌ ಸೇವೆ ಲಭ್ಯವಾಗುತ್ತಿಲ್ಲ. ಕಚ್ಚಾ ರಸ್ತೆಯ ಅಕ್ಕ-ಪಕ್ಕದಲ್ಲಿ ಮುಳ್ಳು-ಕಂಟಿಗಳು ಬೆಳದು ನಿಂತಿವೆ ಎನ್ನುತ್ತಾರೆ ಗ್ರಾಮಸ್ಥ ಅಯ್ಯಣ್ಣ ಹೂಗಾರ.

ಒಂದೇ ಒಂದೂ ಶೌಚಾಲಯ ಇಲ್ಲದೆ ಬಯಲು ಬಹಿರ್ದೆಸೆ ಪದ್ಧತಿ ಗ್ರಾಮದಲ್ಲಿ ಇನ್ನೂ ಜೀವಂತವಾಗಿದೆ. ಮನೆಗೊಂದು ಶೌಚಾಲಯ ನಿರ್ಮಾಣ ಯೋಜನೆ ಸಹ ಯಶಸ್ವಿಯಾಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಯೂ ಅರ್ಧಕ್ಕೆ ಸ್ಥಗಿತವಾಗಿದ್ದು, ಪಕ್ಕದ ಹೂವಿನಹಳ್ಳಿ ಗ್ರಾಮಕ್ಕೆ ತೆರಳಿ ನೀರು ತರಬೇಕಿದೆ ಎಂದರು. 

ಗ್ರಾಮದ ಬಹುತೇಕ ಒಳ ರಸ್ತೆಗಳು ಮಣ್ಣಿನಿಂದ ಕೂಡಿವೆ. ಸ್ವಲ್ಪವೇ ಮಳೆ ಬಿದ್ದರೂ ರಸ್ತೆಗಳೆಲ್ಲ ಕೆಸರು ಗದ್ದೆಯಂತೆ ಬದಲಾಗುತ್ತವೆ. 14 ಹಾಗೂ 15ನೇ ಹಣಕಾಸು ಯೋಜನೆಯಡಿ ಗ್ರಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಕೆಸರಿನ ನಡುವೆ ಜನರು ಓಡಾಡುವಂತಿದೆ ಎನ್ನುತ್ತಾರೆ ಮತ್ತೊಬ್ಬ ನಿವಾಸಿ.

ಗ್ರಾಮಕ್ಕೆ ಸಮರ್ಪಕ ವಾಹನ ಸೇವೆಗಳಿಲ್ಲದೆ ಶಾಲಾ– ಕಾಲೇಜು ವಿದ್ಯಾರ್ಥಿಗಳು ನಿತ್ಯ 4–5 ಕಿ.ಮೀ ನಡೆದುಕೊಂಡೆ ತರಗತಿಗೆ ಹೋಗಬೇಕಿದೆ. 3 ಕಿ.ಮೀ ದೂರದ ಪೀರಾಪುರ ಪ್ರೌಢ ಶಾಲೆ ಹಾಗೂ 5 ಕಿ.ಮೀ ದೂರದ ತಾಳಿಕೋಟೆ ಕಾಲೇಜಿಗೆ ವಿದ್ಯಾರ್ಥಿಗಳು ನಡಿಗೆಯಲ್ಲಿ ತೆರಳುತ್ತಿದ್ದಾರೆ. ಕೆಲ ಪೋಷಕರು ನಿತ್ಯ ತಮ್ಮ ಮಕ್ಕಳನ್ನು ಬಿಟ್ಟು, ಕರೆದೊಯ್ಯುತ್ತಾರೆ ಎಂದರು.

ಅಮಲಿಹಾಳ ಗ್ರಾಮಸ್ಥರು ವ್ಯಾಪಾರ ವಹಿವಾಟಿಗೆ 4 ಕಿ.ಮೀ ದೂರದ ಪೀರಾಪುರ ಹಾಗೂ ಬಿ.ತಳ್ಳಳ್ಳಿ ಗ್ರಾಮವನ್ನೇ ಅವಲಂಬಿಸಿದ್ದಾರೆ. ಬಸ್ ಸೌಲಭ್ಯವಿಲ್ಲದೆ ಪರದಾಡುವಂತ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಸ್ ಸೌಲಬ್ಯ ಒದಗಿಸಲು ಮುಂದಾಗಬೇಕು ಎಂದು ಅಯ್ಯಣ್ಣ ಹೂಗಾರ ಅವರು ಮನವಿ
ಮಾಡಿದರು.

***

ಸೌಕರ್ಯಗಳಿಂದ ವಂಚಿತವಾದ ಅಮಲಿಹಾಳ ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಮುಂದಾಗಬೇಕು
ಬಸವರಾಜ ಅಂಗಡಿ, ಜಿಲ್ಲಾಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ

***

ಹುಣಸಗಿ ತಾಲ್ಲೂಕಿನ ಗಡಿ ಭಾಗದಲ್ಲಿ ಇರುವುದರಿಂದ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈಗಾಲಾದರೂ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಬೇಕು
ಅಯ್ಯಣ್ಣ ಹೂಗಾರ, ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.