ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ಪಾಠ; ಬಿಕೋ ಎನ್ನುವ ಕಾಲೇಜುಗಳು

ಸುರಪುರ: ರಾಜ್ಯ ಸರ್ಕಾರ ಮತ್ತು ಅತಿಥಿ ಉಪನ್ಯಾಸಕರ ಜಗಳದ ಮಧ್ಯೆ ಬಡವಾದ ವಿದ್ಯಾರ್ಥಿಗಳು
Last Updated 5 ಜನವರಿ 2022, 3:10 IST
ಅಕ್ಷರ ಗಾತ್ರ

ಸುರಪುರ: ರಾಜ್ಯಾದ್ಯಂತ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 14,500 ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಡಿ.10ರಿಂದ ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದಾರೆ.

ಸರ್ಕಾರ ಬೇಡಿಕೆಗಳಿಗೆ ಸ್ಪಂದನೆ ನೀಡುತ್ತಿಲ್ಲ, ಇನ್ನೊಂದೆಡೆ ಅತಿಥಿ ಉಪನ್ಯಾಸಕರು ಮುಷ್ಕರವನ್ನು ಕೈಬಿಡುತ್ತಿಲ್ಲ. ಹೀಗಾಗಿ ಸರ್ಕಾರ ಮತ್ತು ಉಪನ್ಯಾಸಕರ ಜಗಳದ ಮಧ್ಯೆ ವಿದ್ಯಾರ್ಥಿಗಳು ಬಡವಾಗುತ್ತಿದ್ದಾರೆ.

ಸುರಪುರ ನಗರದಲ್ಲಿ ಮತ್ತು ತಾಲ್ಲೂಕಿನ ಕೆಂಭಾವಿ ಪಟ್ಟಣದಲ್ಲಿ ಒಂದೊಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಸುರಪುರ ಕಾಲೇಜಿನಲ್ಲಿ ಬಿ.ಎ., ಬಿ.ಕಾಂ. ಬಿ.ಎಸ್‍ಸಿ. ಮತ್ತು ಎಂ.ಎ. ತರಗತಿಗಳು ನಡೆಯುತ್ತವೆ. ಒಟ್ಟು 1,510 ವಿದ್ಯಾಥಿಗಳು ಓದುತ್ತಿದ್ದಾರೆ. ಕೇವಲ 10 ಕಾಯಂ ಉಪನ್ಯಾಸಕರಿದ್ದಾರೆ. 29 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಕೆಂಭಾವಿಯಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್‍ಸಿ. ತರಗತಿಗಳು ನಡೆಯುತ್ತವೆ. ಒಟ್ಟು 622 ಜನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇಲ್ಲಿ ಕೇವಲ 8 ಜನ ಕಾಯಂ ಉಪನ್ಯಾಸಕರಿದ್ದರೆ, 20 ಜನ ಅತಿಥಿ ಉಪನ್ಯಾಸಕರಿದ್ದಾರೆ.

ಎರಡೂ ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಮತ್ತು ವಿಷಯವಾರು ಪರಿಗಣನೆಗೆ ತೆಗೆದುಕೊಂಡರೆ ಕೇವಲ ಶೇ 25 ರಷ್ಟು ಮಾತ್ರ ಕಾಯಂ ಉಪನ್ಯಾಸ ಕರಿದ್ದಾರೆ. ಉಳಿದ ಎಲ್ಲ ಪಾಠದ ಭಾರವನ್ನು ಅತಿಥಿ ಉಪನ್ಯಾಸಕರು ನಿರ್ವಹಿಸುತ್ತಿದ್ದಾರೆ. ರಾಜ್ಯದ ಇತರ ಕಾಲೇಜುಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವುದು ಕೇವಲ ₹11ರಿಂದ ₹13 ಸಾವಿರ ಗೌರವಧನ ಮಾತ್ರ.

ಇಡೀ ಕಾಲೇಜು ಶಿಕ್ಷಣ ವ್ಯವಸ್ಥೆ ಅತಿಥಿ ಉಪನ್ಯಾಸಕರ ಮೇಲೆ ನಿಂತಿರುವು ದರಿಂದ ಪಾಠ, ಪ್ರವಚನಗಳು ಕಳೆದ 25 ದಿನಗಳಿಂದ ನಡೆಯುತ್ತಿಲ್ಲ. ವಿದ್ಯಾರ್ಥಿಗಳಿಗೆ ಫೆಬ್ರುವರಿ ಮೊದಲ ವಾರದಲ್ಲಿ ಸೆಮಿಸ್ಟರ್ ಪರೀಕ್ಷೆ ಬರುತ್ತವೆ. ಕಾಯಂ ಉಪನ್ಯಾಸಕರೂ
ಏನೂ ಮಾಡದ ಸ್ಥಿತಿಯಲ್ಲಿದ್ದಾರೆ.

‘ತಮ್ಮ ಸೇವೆಯನ್ನು ಒಂದು ಶೈಕ್ಷಣಿಕ ವರ್ಷಕ್ಕೆ ಸೀಮಿತಗೊಳಿಸಬಾರದು. ಇತರ ರಾಜ್ಯಗಳಲ್ಲಿ ಮಾಡಿರುವಂತೆ ನಮ್ಮ ರಾಜ್ಯದಲ್ಲೂ ಸೇವೆ ಕಾಯಂಗೊಳಿಸಬೇಕು. ಸ್ನಾತಕೋತ್ತರ, ಪಿಎಚ್‍ಡಿ, ನೆಟ್, ಸೆಟ್, ಪಾಸಾದರೂ ಕೂಲಿಯಾಳುಗಳಂತೆ ನಡೆಸಿಕೊಳ್ಳು ತ್ತಿರುವುದು ಯಾವ ನ್ಯಾಯ’ ಎನ್ನುವುದು ಉಪನ್ಯಾಸಕರ ಪ್ರಶ್ನೆ.

‘ಸೇವಾ ಭದ್ರತೆ ಒದಗಿಸಬೇಕು. ಪಿಎಚ್‍ಡಿ, ನೆಟ್, ಸೆಟ್, ಪಾಸಾದವರಿಗೆ ಪ್ರವೇಶ ಪರೀಕ್ಷೆ ನಡೆಸದೆ ನೇರ ನೇಮಕಾತಿ ಮಾಡಿಕೊಳ್ಳಬೇಕು. ಕನಿಷ್ಟ ₹ 50 ಸಾವಿರವಾದರೂ ವೇತನ ನೀಡಬೇಕು’ ಎಂಬುದು ಅವರ ಆಗ್ರಹ.

‘ಅತಿಥಿ ಉಪನ್ಯಾಸಕರಿಲ್ಲದೆ ನಮ್ಮ ಕೈ ನಿಂತುಹೋಗಿದೆ. ಸಿಲೆಬಸ್ ಮುಗಿಸದೆ ಪರೀಕ್ಷೆ ಹೇಗೆ ನಡೆಸಬೇಕು. ತರಗತಿಗಳು ನಡೆಯುತ್ತಿಲ್ಲವಾದ್ದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿಲ್ಲ. ನಾವು ಅಸಹಾಯಕರಾಗಿದ್ದೇವೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಕಾಲೇಜೊಂದರ ಪ್ರಾಚಾರ್ಯರು.

‘ಕಾಯಂ ಉಪನ್ಯಾಸಕರು ಕೇವಲ ಕೆಲವೇ ಜನ ಇರುವುದರಿಂದ ಅತಿಥಿ ಉಪನ್ಯಾಸಕರೇ ನಮಗೆ ಅಧಾರ ಸ್ತಂಭ. 1 ತಿಂಗಳು ಸಮೀಪಿಸುತ್ತಾ ಬಂದಿವೆ. ಪಾಠಗಳು ನಡೆದಿಲ್ಲ. 2 ವರ್ಷ ಕೊರೊನಾ ಕಾಟ. ಈಗ ಈ ಸಮಸ್ಯೆ. ಭವಿಷ್ಯವೇ ಮುರುಟಿ ಹೋಗುತ್ತಿದೆ’ ಎಂಬುದು ವಿದ್ಯಾರ್ಥಿಗಳು ಆತಂಕ.

‘ಸರ್ಕಾರಕ್ಕೆ ತಮ್ಮ ಶಾಸಕರ, ಸಚಿವರ, ಸಂಸದರ ಭತ್ಯೆ ಹೆಚ್ಚಿಸಿಕೊಳ್ಳಲು ಬರುತ್ತದೆ. ದೇಶದ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮತ್ತು ಅವರ ಬೇಡೆಕೆ ಏಕೆ ಈಡೇರಿಸಬಾರದು. ಸರ್ಕಾರ ಶೀಘ್ರ ಸ್ಪಂದಿಸಬೇಕು’ ಎನ್ನುವುದು ಪಾಲಕ ತಿಮ್ಮಣ್ಣ ಪಾಟೀಲ ಅವರ ಒತ್ತಾಯ.

*ಸರ್ಕಾರ ಅತ್ಯಂತ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಿರುವುದು ಆಧುನಿಕ ಜೀತ ಪದ್ಧತಿ ಇದ್ದಂತೆ. ಯುಜಿಸಿ ನಿಯಮಾವಳಿ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು

- ಉಪೇಂದ್ರನಾಯಕ ಸುಬೇದಾರ, ಅತಿಥಿ ಉಪನ್ಯಾಸಕ

*ರಾಜ್ಯ ಸರ್ಕಾರ ತರಾತುರಿಯಲ್ಲಿ ಆಧುನಿಕ ಶಿಕ್ಷಣ ಪದ್ಧತಿ ಜಾರಿಗೆ ತಂದಿದೆ. ಪಠ್ಯ ಪುಸ್ತಕಗಳೆ ಇಲ್ಲ. ಹತ್ತಾರು ಪುಸ್ತಕ ಓದಿ ಪಾಠ ಮಾಡ ಬೇಕು. ಇದರಿಂದ ಶಿಕ್ಷಣಕ್ಕೆ ತೊಂದರೆಯಾಗಲಿದೆ

– ಗುರುರಾಜ ಬಾಡಿಯಾಳ, ಅತಿಥಿ ಉಪನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT