ಭಾನುವಾರ, ಜುಲೈ 25, 2021
28 °C
ಎರಡ್ಮೂರು ಪಟ್ಟು ಹೆಚ್ಚಿನ ದರ ಸುಲಿಗೆ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಯಾದಗಿರಿ | ಗುಟ್ಕಾ, ಸಿಗರೇಟ್ ದುಬಾರಿ ಬೆಲೆಗೆ ಮಾರಾಟ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ₹5ರಿಂದ ₹10ಗೆ ಸಿಗುವ ಗುಟ್ಕಾ, ಸಿಗರೇಟ್ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಲಾಕ್‌ಡೌನ್‌ಗೆ ಮುಂಚೆ ಒಂದು ವಿಮಲ್ ಪಾನ್‌ ಮಸಾಲ ದರ ₹5 ಇತ್ತು. ಆದರೆ, ಈಗ ₹20 ಗೆ ಒಂದರಂತೆ ಮಾರಾಟವಾಗುತ್ತಿದೆ. ಇನ್ನುಳಿದ ಗುಟ್ಕಾಗಳ ದರ ಎರಡ್ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬುದು ಗ್ರಾಹಕರ ದೂರು. 

'ಲಾಕ್‌ಡೌನ್ ವೇಳೆ ಸಾಕಷ್ಟು ಸಂಗ್ರಹ ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆ ಬರುವಂತೆ ನೋಡಿಕೊಂಡಿದ್ದಾರೆ. ಈಗಲೂ ಬೇರೆ ಕಡೆಯಿಂದ ಮಾಲು ಬರುತ್ತಿಲ್ಲ ಎಂದು ನೆಪ ಹೇಳಿ ಅಂಗಡಿಗಳವರಿಗೆ ಮಾರಾಟ ಮಾಡುತ್ತಿದ್ದಾರೆ' ಎಂದು ಅಂಗಡಿ ಮಾಲೀಕ ಸತ್ಯ ಪ್ರಕಾಶ ಶೆಟ್ಟಿ ಆರೋಪಿಸುತ್ತಾರೆ.

'ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿದರೆ ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ಬಿಡಿ ಎಂದು ಗದರುತ್ತಾರೆ. ಗ್ರಾಹಕರು ನಮ್ಮ ಅಂಗಡಿಯಲ್ಲಿ ಹೆಚ್ಚಾಗಿ ಗುಟ್ಕಾ, ಸಿಗರೇಟ್ ಕೇಳುವುದರಿಂದ ಮರುಮಾತನಾಡದೇ ತೆಗೆದುಕೊಳ್ಳುತ್ತೇವೆ' ಎಂದು ಮಾಹಿತಿ ನೀಡಿದರು.

'ಇದು ನಮಗೆ ತಾತ್ಕಾಲಿಕ ಹೊರೆಯಾದರೂ ಇದನ್ನು ಗ್ರಾಹಕರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಗ್ರಾಹಕರು ಹೆಚ್ಚಿನ ಬೆಲೆ ಕೊಟ್ಟು ಖರೀದಿಸುತ್ತಿದ್ದಾರೆ' ಎಂದರು.

'ನಗರದ ಕೆಲ ದೊಡ್ಡ ಅಂಗಡಿಗಳಲ್ಲಿ ಎರಡ್ಮೂರು ಪ್ಯಾಕೆಟ್ ಪಾನ್‌ ಮಸಾಲ, ಸಿಗರೇಟ್ ಖರೀದಿಸಿದರೂ ಬಿಲ್ ನೀಡುತ್ತಿಲ್ಲ. ರಶೀದಿಯಲ್ಲಿ ಸಾಮಗ್ರಿ ಹೆಸರು ನಮೂದಿಸುವುದಿಲ್ಲ. ಇದರಿಂದ ಅನುಮಾನ ಮೂಡಿದೆ’ ಎಂದು ಕಿರಾಣಿ ಅಂಗಡಿ ಮಾಲೀಕರೊಬ್ಬರು ತಿಳಿಸಿದರು.

ಜಿಲ್ಲಾಧಿಕಾರಿ ಅವರೇ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಹೇಳಿದ್ದಾರೆ. ಆದರೆ, ಇವರು ಎಗ್ಗಿಲ್ಲದೆ ಮಾರಾಟ ಮಾಡುತ್ತಿದ್ದಾರೆ. ಮೇ 15ರಂದು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಕಾಶಿನಾಥ ಕಣೇಕಲ್ ಆರೋಪಿಸಿದ್ದಾರೆ.

ಮತ್ತೆ ಲಾಕ್‌ಡೌನ್ ನೆಪದಿಂದ ಸುಲಿಗೆ!

ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮತ್ತೊಮ್ಮೆ ಲಾಕ್‌ಡೌನ್ ಮಾಡಲಾಗುತ್ತಿದೆ ಎಂದು ವದಂತಿ ಎದ್ದಿದೆ. ಹೀಗಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಸುಲಿಗೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಈಗಾಗಲೇ ಸಂಗ್ರಹ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಜಾಲವೇ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ. ಡೀಲರ್‌ಗಳು ಹೆಚ್ಚಿನ ಬೆಲೆಗೆ ಅಂಗಡಿಗಳವರಿಗೆ ಮಾರಾಟ ಮಾಡುತ್ತಿದ್ದಾರೆ. ಇವರು ಗ್ರಾಹಕರಿಗೆ ದುಬಾರಿಗೆ ಬೆಲೆ ವರ್ಗಾಯಿಸುತ್ತಿದ್ದಾರೆ. ಇದರಿಂದ ಇದನ್ನು ತಕ್ಷಣವೇ ಅಧಿಕಾರಿಗಳು ಮಟ್ಟ ಹಾಕಬೇಕು. ಜತೆಗೆ ಗೋದಾಮುಗಳ ಮೇಲೆ ದಾಳಿ ಮಾಡಿ ಸಂಗ್ರಹಿಸಿರುವುದುನ್ನು ವಶಪಡಿಸಿಕೊಳ್ಳಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

ಗುಟ್ಕಾ, ಸಿಗರೇಟ್ ಡೀಲರ್‌ಗಳು ಮನಸ್ಸಿಗೆ ಬಂದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಾಶಿನಾಥ ಕಣೇಕಲ್ ಹೇಳಿದ್ದಾರೆ.

ಲಾಕ್ ಡೌನ್ ವೇಳೆ ದಾಳಿ ಮಾಡಲಾಗಿತ್ತು. ಈಗ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದರೆ ಕ್ರಮ‌ ತೆಗೆದುಕೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಅಧಿಕಾರಿ ಡಾ.ಪ್ರಕಾಶ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು