ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಇಳುವರಿ ಕುಸಿದರೂ ಕೈಹಿಡಿದ ದರ

ಮುಂಗಾರು ಹಂಗಾಮಿನಲ್ಲಿ ಯಾದಗಿರಿ ಜಿಲ್ಲೆಯ ಒಟ್ಟು 73,075 ಎಕರೆಯಲ್ಲಿ ಹತ್ತಿ ಬಿತ್ತನೆ
Last Updated 20 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಹತ್ತಿ ಇಳುವರಿ ಕುಸಿದಿದ್ದರೂ, ಮಾರುಕಟ್ಟೆಯಲ್ಲಿ ಹತ್ತಿ ದರ ಬೆಳೆಗಾರರಿಗೆ ತುಸು ನೆಮ್ಮದಿ ತಂದಿದೆ. ತೊಗರಿ ಬೆಳೆಗಾರರು ದರ ಕುಸಿತ ಹಾಗೂ ಖರೀದಿ ಕೇಂದ್ರಗಳಲ್ಲಿ ವ್ಯಾಪಾರ ವಿಳಂಬದಿಂದಾಗಿ ಬೇಸತ್ತು ವಾಣಿಜ್ಯಬೆಳೆ ಹತ್ತಿಯತ್ತ ವಾಲಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಹತ್ತಿಕೃಷಿ ಕ್ಷೇತ್ರ ಮತ್ತಷ್ಟೂ ವಿಸ್ತರಣೆ ಕಂಡಿತ್ತು.

2016–17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿ ಸುರಿದಿತ್ತು. ಇದರಿಂದ, ತೊಗರಿ ಮತ್ತು ಹತ್ತಿ ಇಳುವರಿ ಬಂದಿದ್ದವು. ಆದರೆ, ಮಾರುಕಟ್ಟೆ ದರದಲ್ಲಿ ಹತ್ತಿ ₹4,300 ವರೆಗೂ ಮಾರಾಟವಾಗಿತ್ತು. ದರ ಕುಸಿತದಿಂದ ಕಂಗೆಟ್ಟಿದ್ದ ತೊಗರಿ ಬೆಳೆಗಾರರು ಹತ್ತಿ ಬೆಳೆಗಾರರ ಸಂತೃಪ್ತಿಯನ್ನು ಕಣ್ಣಾರೆ ಕಂಡಿದ್ದರು. ಈ ಕಾರಣಕ್ಕಾಗಿಯೇ ತೊಗರಿ ಬೆಳೆಯುತ್ತಿದ್ದ ಕಪ್ಪು ಹೊಲಗಳಲ್ಲಿ ಬಿಳಿ ಹತ್ತಿ ಅರಳಿದ್ದವು.

‘ಹತ್ತಿ ಇಳುವರಿ ಕುಸಿದಿರುವುದರಿಂದಲೇ ಮುಕ್ತ ಮಾರುಕಟ್ಟೆಯಲ್ಲಿ ಹತ್ತಿಗೆ ಬೇಡಿಕೆ ಹೆಚ್ಚಿದೆ. ಹೆಚ್ಚಾಗಿ ಹತ್ತಿ ಬೆಳೆಯುತ್ತಿದ್ದ ನೆರೆಯ ರಾಯಚೂರು ಜಿಲ್ಲೆಯಲ್ಲಿ ಹತ್ತಿ ಇಳುವರಿ ನೆಲಕಚ್ಚಿದೆ. ಹಾಗಾಗಿ, ಅಲ್ಪ ಇಳುವರಿ ಪಡೆದಿರುವ ಜಿಲ್ಲೆಯ ಹತ್ತಿ ಬೆಳೆಗಾರ ಅದೃಷ್ಟ ಖುಲಾಯಿಸಿದೆ’ ಎನ್ನುತ್ತಾರೆ ಇಲ್ಲಿನ ಹತ್ತಿ ಗಿರಣಿಗಳ ಮಾಲೀಕರು.

ಕ್ವಿಂಟಲ್‌ ಹತ್ತಿಗೆ ₹5,800 ದರ
‘ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್ ಹತ್ತಿಗೆ ₹5,800 ದರ ಸಿಗುತ್ತಿದೆ. ತುಂತುರು ಮಳೆಯಲ್ಲಿ ಜಿಲ್ಲೆಯ ರೈತರು ಎಕರೆಗೆ ಮೂರ್ನಾಲ್ಕು ಕ್ವಿಂಟಲ್‌ನಷ್ಟು ಇಳುವರಿ ಹತ್ತಿ ಪಡೆದಿದ್ದಾರೆ. ದರ ಕೈಹಿಡಿದಿರುವುದರಿಂದ ಭಾರೀ ಲಾಭ ಇಲ್ಲದಿದ್ದರೂ, ನಷ್ಟ ಮಾತ್ರ ಇಲ್ಲ. ಇನ್ನೂ ಮೂರು ಬಾರಿ ಹತ್ತಿ ಬಿಡಿಸಬಹುದು. ದೀಪಾವಳಿ ಹಬ್ಬದ ಹೊತ್ತಿಗೆ ದರ ಮತ್ತಷ್ಟೂ ಏರಲಿದೆ’ ಎಂದು ಕುಂಟೆಮರಿ ಗಡಿಗ್ರಾಮದ ರೈತ ಯಲ್ಲಪ್ಪ ಖುಷಿ ವ್ಯಕ್ತಪಡಿಸಿದರು.

ಗುರಿ ಮೀರಿ ಬಿತ್ತನೆ: ಪ್ರಸಕ್ತ ಮುಂಗಾರು ಹಂಗಾಮಿನ ಬಿತ್ತನೆ ವರ್ಷದಲ್ಲಿ ಜಿಲ್ಲೆಯಲ್ಲಿ ನೀರಾವರಿಯಲ್ಲಿ 35 ಸಾವಿರ ಹಾಗೂ ಖುಷ್ಕಿ ಭೂಮಿಯಲ್ಲಿ 29,260 ಎಕರೆ ಸೇರಿ ಒಟ್ಟು 64,200 ಎಕರೆ ಭೂಮಿಯಲ್ಲಿ ಹತ್ತಿ ಬಿತ್ತನೆ ಆಗಲಿದೆ ಎಂದು ಕೃಷಿ ಇಲಾಖೆ ಅಂದಾಜಿಸಿತ್ತು. ಆದರೆ, ತೊಗರಿ ಬೆಳೆಗಾರರು ಮೊದಲೇ ನಿರ್ಧರಿಸಿದ್ದರಿಂದ ಗುರಿ ಮೀರಿ ಹತ್ತಿ ಬಿತ್ತನೆ ನಡೆದಿದೆ!

ಬಿತ್ತನೆಗೆ ಅಂತ್ಯದ ವೇಳೆಗೆ ಜಿಲ್ಲೆಯ ನೀರಾವರಿ ಪ್ರದೇಶದಲ್ಲಿ 36,477 ಎಕರೆ ಹಾಗೂ ಖುಷ್ಕಿ ಭೂಮಿಯಲ್ಲಿ 36,598 ಎಕರೆ ಸೇರಿ ಒಟ್ಟು 73,075 ಎಕರೆಯಲ್ಲಿ ಹತ್ತಿ ಬಿತ್ತನೆ ನಡೆಸಲಾಗಿತ್ತು. ತೊಗರಿ ಬೆಳೆಯುತ್ತಿದ್ದ 10 ಸಾವಿರ ಎಕರೆ ಭೂಮಿ ಹತ್ತಿ ಬೆಳೆಯುವ ಭೂಮಿಯಾಗಿ ಪರಿವರ್ತನೆಯಾಗಿದೆ ಎಂಬುದಾಗಿ ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ಹೇಳುತ್ತಾರೆ.

ಅಕ್ಟೋಬರ್ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 739 ಎಂಎಂ ಮಳೆ ಸುರಿಯಬೇಕಿತ್ತು. ಆದರೆ, ಇದುವರೆಗೂ 375 ಎಂಎಂ ಮಳೆ ಮಾತ್ರ ಬಿದ್ದಿದೆ. ಶೇ 49ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಮಳೆ ಕೊರತೆ ಮಧ್ಯೆಯೂ ಹತ್ತಿ ಕಣ್ಣೊಡೆದು ರೈತರ ಕೈಹಿಡಿದಿದೆ.

ತೊಗರಿ ಬೆಳೆಗಾರರ ಆತ್ಯಹತ್ಯೆ ಹೆಚ್ಚು!

ರಾಜ್ಯದಲ್ಲಿ ಹೆಚ್ಚಾಗಿ ತೊಗರಿ ಬೆಳೆಗಾರರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!ಆದರೆ, ಈ ಕುರಿತು ಸರ್ಕಾರ ಸರಿಯಾಗಿ ಸರ್ವೇ ನಡೆಸಿಲ್ಲ ತೊಗರಿ ಕಣಜ ಕುಸಿಯುತ್ತಿದ್ದರೂ, ಸರ್ಕಾರ ತೊಗರಿ ಬೆಳೆಗಾರರಿಗೆ ಮಾಡಿದ್ದಾದರೂ ಏನು? ಮುಂದೆ ತೊಗರಿ ಹೊಲಗಳೆಲ್ಲ ಹತ್ತಿ ಬೆಳೆದರೂ ಅಚ್ಚರಿಪಡಬೇಕಿಲ್ಲ ಎಂದು ಹೈದರಾಬಾದ್‌ ಕರ್ನಾಟಕ ರೈತ ಸಂಘ ಜಿಲ್ಲಾ ಅಧ್ಯಕ್ಷ ಚನ್ನಾರೆಡ್ಡಿಗೌಡ ಗುರಸುಣಗಿ ಅಸಮಾಧಾನ ವ್ಯಕ್ತಪಡಿಸಿದರು.

ಸಾಲ ಮಾಡಿ ಬಿತ್ತಿಬೆಳೆದ ತೊಗರಿಗೆ ಖರೀದಿ ಕೇಂದ್ರಗಳಿಂದ ಬಾಕಿಹಣ ಇದುವರೆಗೂ ರೈತರ ಕೈಸೇರಿಲ್ಲ. ರೈತರು ಏನು ತಿನ್ನಬೇಕು? ಒಮ್ಮೆ ತೊಗರಿ ಕಟಾವು ಮಾಡಿದರೆ ಮುಗಿಯಿತು. ಬಾಕಿಹಣಕ್ಕಾಗಿ ಜಪ ಮಾಡುತ್ತಾ ರೈತರು ಎದುರು ನೋಡಬೇಕು. ಆದರೆ, ಹತ್ತಿಯಿಂದ ನಾಲ್ಕು ಬಾರಿ ಫಸಲು ಪಡೆಯಬಹುದು. ಇನ್ನು ಬೇಡಿಕೆ ಇದ್ದೇ ಇರುತ್ತದೆ. ಇದರಿಂದ ರೈತರು ಉಳಿಯುತ್ತಾರೆ ಎನ್ನುತ್ತಾರೆ ಅವರು.

ಅಂಕಿಅಂಶ
ಹತ್ತಿಗೆ ಬೆಂಬಲಬೆಲೆ

ವರ್ಷ ಬೆಂಬಲ ಬೆಲೆ
2014–15 ₹3750

2015–16 ₹3,800

2016–17 ₹3,860

2017–18 ₹4020

2018–19 ₹5,150

ಮುಖ್ಯಾಂಶಗಳು
* 10 ಸಾವಿರ ಎಕರೆಯಲ್ಲಿ ಹೆಚ್ಚಿನ ಹತ್ತಿ ಬಿತ್ತನೆ

* ಮಾರುಕಟ್ಟೆಯಲ್ಲಿ ಕ್ವಿಂಟಲ್ ಹತ್ತಿಗೆ ₹5,800 ದರ

* ರಾಯಚೂರು ಜಿಲ್ಲೆಯಲ್ಲಿ ನೆಲಕಚ್ಚಿದ ಹತ್ತಿ ಇಳುವರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT