ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್ ಕಾರ್ಮಿಕರ ವೇತನ ಪಾವತಿಗೆ ಆಗ್ರಹ

ಹೊರಗುತ್ತಿಗೆ ಕಾರ್ಮಿಕರಿಗೆ ಲಾಕ್‍ಡೌನ್ ಅವಧಿ ವೇತನ ಪಾವತಿಸಿ
Last Updated 27 ಆಗಸ್ಟ್ 2020, 16:33 IST
ಅಕ್ಷರ ಗಾತ್ರ

ಯಾದಗಿರಿ: ಹಾಸ್ಟೆಲ್ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಎದುರು ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ಮಾಡಲಾಯಿತು.

ಲಾಕ್‍ಡೌನ್ ಅವಧಿ ವೇತನವನ್ನು ಎಲ್ಲಾ ಹೊರಗುತ್ತಿಗೆ ಕಾರ್ಮಿಕರಿಗೆ ಕೂಡಲೇ ಪಾವತಿಸಬೇಕು. ಜೂನ್ ತಿಂಗಳಿನಿಂದ ವೇತನ ಪಾವತಿ ಮಾಡಿ ಕಾರ್ಮಿಕರಿಗೆ ಕೆಲಸ ನೀಡಬೇಕು. ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಎಸ್‍ಐ ಮತ್ತು ಇಪಿಎಫ್ ಅನ್ನು ಪಾವತಿ ಮಾಡಿರುವ ದಾಖಲೆಗಳನ್ನು ಕಾರ್ಮಿಕರಿಗೆ ಒದಗಿಸಬೇಕು. ಇಲ್ಲವೇ ಇಲಾಖೆಯಿಂದಲೇ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಮುಖಂಡ ಬಿ.ಎನ್.ರಾಮಲಿಂಗಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ ವಿವಿಧ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳ ವಸತಿನಿಲಯ/ವಸತಿಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಳೆದ 17-18 ವರ್ಷಗಳಿಂದಲೂ ಸಾವಿರಾರು ಕಾರ್ಮಿಕರು ಕೇವಲ ಕನಿಷ್ಠ ಕೂಲಿ ಪಡೆದು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೊರೊನಾ ಲಾಕ್‍ಡೌನ್ ಪ್ರಾರಂಭವಾದಗಿನಿಂದ ಹೊರಗುತ್ತಿಗೆ ಕಾರ್ಮಿಕರು ಕೆಲಸವಿಲ್ಲದೇ ವೇತನವೂ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‍ಡೌನ್ ಅವಧಿಯಲ್ಲಿ ವೇತನ ನೀಡಬೇಕೆಂದು ಸ್ಪಷ್ಟ ಆದೇಶವಿದ್ದರೂ ಜಿಲ್ಲಾಮಟ್ಟದಲ್ಲಿ ಮೇಲಿನ ಇಲಾಖೆಗಳ ಅಧಿಕಾರಿಗಳು ಇನ್ನೂ ಪಾವತಿ ಮಾಡದಿರುವುದು ವಿಷಾದನೀಯ’ ಎಂದರು.

ಮನವಿ ಪತ್ರಗಳನ್ನು ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಉಪ ನಿರ್ದೇಶಕರ ಮೂಲಕ ಇಲಾಖೆಗಳ ಸಚಿವರಿಗೆ ಮತ್ತು ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

ಶರಣಪ್ಪ ಯಡ್ಡಳ್ಳಿ, ಸಿದ್ದಪ್ಪ, ಭೀಮಾಶಂಕರ, ಬಸವರಾಜ, ಮಾಪಣ್ಣ, ಭಾಗಪ್ಪ, ರಮೇಶ, ಯಲ್ಲಮ್ಮ, ಲಕ್ಷ್ಮಿ, ಭೀಮಬಾಯಿ, ಜಗದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT