ಶನಿವಾರ, ಜೂಲೈ 11, 2020
22 °C
6 ತಿಂಗಳು ಆದಾಯ ಕಸಿದ ‘ಕೊರೊನಾ’, ಅಂಗಡಿಗಳಿಗೆ ಬಾರದ ಜನತೆ

ಕೋವಿಡ್‌ ಹೊಡೆತಕ್ಕೆ ಐಸ್ ಕ್ರೀಂ, ಜ್ಯೂಸ್ ಪಾರ್ಲರ್‌ಗಳು ‘ಥಂಡಾ’

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೊರೊನಾ ಮಹಾಮಾರಿ ಸೋಂಕಿನಿಂದ ಐಸ್ ಕ್ರೀಂ, ಜ್ಯೂಸ್ ಪಾರ್ಲರ್ ಅಂಗಡಿಗಳವರಿಗೆ 'ಥಂಡಾ' ಹೊಡೆದಿದೆ. ಇದರಿಂದ 6 ತಿಂಗಳ ಆದಾಯವನ್ನೇ ಕೊರೊನಾ ನೆಪ ಕಸಿದುಕೊಂಡಿದೆ.

ನಗರದಲ್ಲಿ 50ಕ್ಕೂ ಐಸ್ ಕ್ರೀಂ, ಜ್ಯೂಸ್ ಪಾರ್ಲರ್‌ಗಳಿವೆ. ಆದರೆ, ಕೊರೊನಾ ಹೊಡೆತ ಅವರೆಲ್ಲರಿಗೂ ಸೀಸನ್‌ ಆದಾಯವನ್ನೆ ಮುಗಿಸಿಬಿಟ್ಟಿದೆ.

ಕೆಲ ಕಡೆ ಐಸ್‌ಕ್ರೀಂ ಅಂಗಡಿಗಳು ಹಾಲು ಮಾರಾಟ ಕೇಂದ್ರಗಳಾಗಿ ರೂಪಾಂತರಗೊಂಡಿವೆ. ಜ್ಯೂಸ್‌ ಅಂಗಡಿಗಳಿಗೆ ಗ್ರಾಹಕರು ತೆರಳದೆ ಇರುವುದರಿಂದ ಖಾಲಿ ಖಾಲಿ ಹೊಡೆಯುತ್ತಿವೆ.

‘ಐದರಿಂದ ಹತ್ತು ಸಾವಿರ ಬಾಡಿಗೆ ಕಟ್ಟುವ ಜೊತೆಗೆ ಕಾರ್ಮಿಕರಿಗೂ ಕೂಲಿ ನೀಡಬೇಕಾಗಿದೆ. ಗ್ರಾಹಕರು ಮಾತ್ರ ನಮ್ಮ ಅಂಗಡಿಗಳಿಗೆ ಸುಳಿಯುತ್ತಿಲ್ಲ. ಬಾಡಿಗೆ ಹೇಗೆ ಕಟ್ಟಬೇಕು ಎನ್ನುವುದು ತಿಳಿಯದಂತಾಗಿದೆ. ಕೊರೊನಾ ಸೋಂಕು ನಮಗೆ ಆರು ತಿಂಗಳ ಆದಾಯವನ್ನೇ ಬರದಂತೆ ಮಾಡಿ ಬಿಟ್ಟಿದೆ’ ಎಂದು ಜ್ಯೂಸ್‌ ಅಂಗಡಿ ಮಾಲೀಕ ಮಹ್ಮದ್‌ ಆನಿಫ್‌ ಹೇಳುತ್ತಾರೆ.

‘ಕೊರೊನಾ ನೆಪದಿಂದ ಐಸ್‌ ಕ್ರೀಂ ಸೇವಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಹೆಚ್ಚಿನ ರೀತಿಯಲ್ಲಿ ಆರ್ಡರ್‌ ಮಾಡುತ್ತಿಲ್ಲ. ಬದಲಾಗಿ ಹಾಲು ಮಾರಾಟದ ಮಳಿಗೆಯನ್ನಾಗಿ ಮಾಡಿಕೊಂಡಿದ್ದೇವೆ. ಐಸ್‌ ಕ್ರೀಂ ಋತುಮಾನಕ್ಕೆ ತಕ್ಕಂತೆ ಇದ್ದರೆ ಹಾಲು ನಿರಂತರ ಮಾರಾಟವಾಗುತ್ತದೆ. ಹೀಗಾಗಿ ಇದನ್ನು ಅವಲಂಬಿಸಿದ್ದೇವೆ’ ಎನ್ನುತ್ತಾರೆ ಮಲ್ಲಿಕಾರ್ಜುನ ಪಾಟೀಲ.

‘ನಮ್ಮಲ್ಲಿ ₹10 ರೂಪಾಯಿಯಿಂದ ಆರಂಭಗೊಂಡು ₹280 ಕುಟುಂಬ ಸಮೇತ ಸೇವಿಸುವ ಐಸ್‌ ಕ್ರೀಂಗಳಿವೆ. ಆದರೆ, ಗ್ರಾಹಕರು ಬರುತ್ತಿಲ್ಲ. ಇದರಿಂದ ನಮಗೆ ಈ ಬಾರಿ ತುಂಬಾ ನಷ್ಟವಾಗಿದೆ. ಇದರಿಂದ ಹೊರ ಬರಲು ಕನಿಷ್ಠ ಮೂರ್ನಾಲು ತಿಂಗಳುಗಳೇ ಬೇಕಾಗುತ್ತವೆ’ ಎನ್ನುತ್ತಾರೆ ಅವರು.

ನಗರದಲ್ಲಿ ಜನವರಿ, ಫೆಬ್ರವರಿ ತಿಂಗಳಲ್ಲಿ ಆಂಧ್ರದಿಂದ ಬಂದಿದ್ದ ಕೆಲವರು ರಸ್ತೆ ಬದಿಯಲ್ಲಿಯೇ ಜ್ಯೂಸ್‌ ಅಂಗಡಿಗಳನ್ನು ತೆರೆದಿದ್ದರು. ಈಗ ಅವರಿಗೆ ತೆರೆಯಲು ಅನುಮತಿ ಇಲ್ಲದಿದ್ದರಿಂದ ಹಾಕಿದ ಬಂಡವಾಳವೂ ಇಲ್ಲದಂತಾಗಿದೆ. ಕೆಲವರು ಹೊಸ ಯಂತ್ರಗಳನ್ನು ಖರೀದಿಸಿ ತಂದಿದ್ದರು. ಅಲ್ಲದೆ ಭರ್ಜರಿ ಲಾಭದ ಆಸೆಯನ್ನು ಹೊಂದಿದ್ದರು. ಆದರೆ, ಕೊರೊನಾ ಹೊಡೆತದಿಂದ ಅವರಿಗೆ ನಷ್ಟವುಂಟು ಮಾಡಿದೆ. ವಿವಿಧ ಜ್ಯೂಸ್‌ ಮಾರಾಟ ಮಾಡುವವರು ಈಗ ಅಲ್ಲಿಯೇ ಹಣ್ಣುಗಳನ್ನು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 

ಗ್ರಾಹಕರಿಗೆ ಬಾಯಿ ರುಚಿ ತಣಿಸೋ ಈ ಐಸ್ ಕ್ರೀಂ, ಮಾರಾಟಗಾರರಿಗೆ ಮಾತ್ರ ಕಹಿಯನ್ನು ಉಣಬಡಿಸುತ್ತಿವೆ. ಬೇಸಿಗೆಯಲ್ಲಿ ಭರ್ಜರಿ ಲಾಭ ತಂದು ಕೊಡುತ್ತಿದ್ದ ಐಸ್‌ಕ್ರೀಂ ವ್ಯಾಪಾರ ಈಗ ನೆಲಕಚ್ಚಿದೆ. ವಿವಿಧ ಕಂಪನಿ ಬಣ್ಣ ಬಣ್ಣದ ಆಕೃತಿಗಳೊಂದಿಗೆ ಬೇಸಿಗೆ ವೇಳೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟ ಪಡುತ್ತಿದ್ದರು. ಆದರೆ, ಈಗ ಕೊರೊನಾ ಭಯದಿಂದ ಐಸ್‌ ಕ್ರೀಂ ಸೇವನೆಯೇ ಬಿಟ್ಟಿದ್ದಾರೆ ಎಂದು ಅಂಗಡಿಗಳ ಮಾಲೀಕರು ಸಂಕಷ್ಟ ತೋಡಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು