ಮಂಗಳವಾರ, ಸೆಪ್ಟೆಂಬರ್ 28, 2021
26 °C

ತೊಗರಿ, ಹತ್ತಿಗೆ ಕೀಟ ಬಾಧೆ; ರೈತ ಕಂಗಾಲು

ಪವನಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಕಳೆದ ಕೆಲವು ದಿನಗಳಿಂದ ಮೋಡ ಮುಸುಕಿದ ವಾತಾವರಣ ಇದ್ದು, ಆಗಾಗ ತುಂತರು ಮಳೆ ಸುರಿಯುತ್ತಿದೆ. ಇದರಿಂದ ತೊಗರಿ ಹಾಗೂ ಹತ್ತಿ ಬೆಳೆಗಳಿಗೆ ರಸಹೀರುವ ಕೀಟಬಾಧೆ ಕಾಣಿಸಿಕೊಂಡಿದೆ. 

ಕಳೆದ ವರ್ಷ ವ್ಯಾಪಕ ಮಳೆ ಹಾಗೂ ಕೊರೊನಾದಿಂದ ರೈತರು ಸಾಕಷ್ಟು ಹೈರಾಣಾಗಿದ್ದರು. ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಹಾಗೂ ಹತ್ತಿ ಬಿತ್ತನೆ ಆಗಿದೆ. ಬೆಳೆದು ನಿಂತ ಫಸಲಿಗೆ ಕೀಟಗಳ ಹಾವಳಿ ಹೆಚ್ಚಾಗಿದೆ. ಅವುಗಳ ನಿಯಂತ್ರಣಕ್ಕೆ ರೈತರು ಬೆಳೆಗಳಿಗೆ ಕೀಟನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಔಷಧಿಗಳ ಬೆಲೆಯೂ ಹೆಚ್ಚಾಗಿದ್ದು, ಕೀಟಗಳ ಜತೆಗೆ ಆರ್ಥಿಕ ಹೊರೆಯು ಬಾಧೆಯಾಗಿ ಪರಿಣಮಿಸಿದೆ ಎನ್ನುತ್ತಾರೆ ರೈತ ಕಾಂತಪ್ಪ ಕುಂಬಾರ.

ತುಂತುರು ಮಳೆಯು ತಡವಾಗಿ ಬಿತ್ತನೆಯಾದ ತೊಗರಿ ಮತ್ತು ಹತ್ತಿ ಬೆಳೆಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಮುಂಚಿತವಾಗಿ ಬಿತ್ತಿದ ಬೆಳೆಗಳು ಮೋಡ ಕವಿದ ವಾತಾವರಣದಿಂದ ರೋಗ ಹಾಗೂ ಕೀಟ ಬಾಧೆಗೆ ತುತ್ತಾಗುತ್ತಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಡಿಗ್ಗಾವಿ ರೈತ ಮಹಿಪಾಲರಡ್ಡಿ ತಿಳಿಸಿದರು.

ಒಂದು ಕಡೆ ರಸಹೀರುವ ಕೀಟಗಳ ಹಾವಳಿ. ಮತ್ತೊಂದು ಕಡೆ ಕೀಟನಾಶಕ ಔಷಧಗಳ ದರದ ಹೆಚ್ಚಳ. ಇವುಗಳ ಮಧ್ಯೆ ಸಿಲುಕಿದ ಕೃಷಿಕರು ದಿಕ್ಕೆಟ್ಟಿದ್ದಾರೆ. ಅನಿವಾರ್ಯವಾಗಿ ದುಬಾರಿ ಬೆಲೆ ತೆತ್ತು ಖರೀದಿ ಮಾಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ಕೀಟನಾಶಕ ಔಷಧ ಹಾಗೂ ರಸಗೊಬ್ಬರ ಬೆಲೆ ಹೆಚ್ಚಳವಾಗಿದ್ದು, ಹಲವು ರೈತರು ಸಾಲ ಮಾಡಿ ಖರೀದಿ ಸುತಿದ್ದಾರೆ ಎಂದು ಕಾಂತಪ್ಪ ಹೇಳಿದರು.

ಕೃಷಿಕರ ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಪೂರೈಕೆ ಆಗುತ್ತಿಲ್ಲ. ಮಾರುಕಟ್ಟೆಯಲ್ಲಿ ಅಭಾವ ಕಂಡು ಬಂದಿದೆ. ಹೂ, ಕಾಯಿ ಕಟ್ಟುವ ಹಂತದಲ್ಲಿರುವ ತೊಗರಿ ಮತ್ತು ಹತ್ತಿ ಬೆಳಗಳಿಗೆ ಗೊಬ್ಬರದ ಅವಶ್ಯಕತೆಯಿದೆ. ದುಬಾರಿ ಬೆಲೆ ತೆತ್ತು ಖರೀದಿ ಮಾಡಲಾಗುತ್ತಿದೆ. 50 ಕೆ.ಜಿ. ಚೀಲಕ್ಕೆ ₹1000 ಇದ್ದದ್ದು ಈಗ ₹1100 ರಿಂದ 1600 ಗೆ ಏರಿಕೆಯಾಗಿದೆ ಎಂದು ಅವರು ಅಲವತ್ತುಕೊಂಡರು.

ಅಧಿಕಾರಿಗಳ ತಂಡ ಅಂಗಡಿಗಳಿಗೆ ತೆರಳಿ ಕೀಟನಾಶಕ ಔಷಧಿಗಳ ಮಾರಾಟ ದರದ ಬಗ್ಗೆ ಪರಿಶೀಲನೆ ನಡೆಸಲಿದೆ. ತಪ್ಪು ಕಂಡು ಬಂದಲ್ಲಿ ತಕ್ಷಣವೇ ನೋಟಿಸ್ ನೀಡಲಾಗುತ್ತದೆ. ರಸಗೊಬ್ಬರ ಹಾಗೂ ಕೀಟನಾಶಕ ಅಭಾವದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಪುರೈಕೆ ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಪ್ರಕಾಶ ಬಂಡೆಪ್ಪನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.