ಸೋಮವಾರ, ಮೇ 17, 2021
21 °C
ನಾಯ್ಕಲ್‌ನಲ್ಲಿ ನಡೆದ ಘಟನೆ: ದಲಿತ ಮುಖಂಡರ ಆಕ್ರೋಶ

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಬುಧವಾರ ಕಿಡಿಗೇಡಿಗಳು ಸಗಣಿ ಎರಚಿ ಅಪಮಾನ ಮಾಡಿದ ಘಟನೆಯನ್ನು ಖಂಡಿಸಿ ನಾಯ್ಕಲ್‌ ಗ್ರಾಮದ ದಲಿತ ಸಮುದಾಯದ ಯುವಕರು ದಿಢೀರ್ ಪ್ರತಿಭಟನೆ ನಡೆಸಿದರು.

‌‌ಇಲ್ಲಿಗೆ ಸಮೀಪದ ನಾಯ್ಕಲ್ ಗ್ರಾಮದ ಬಸ್ ನಿಲ್ದಾಣ ಬಳಿಯ ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಕಿಡಿಗೇಡಿಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ದಲಿತ ಸಮುದಾಯವರು, ವೃತ್ತದ ಬಳಿಯ ಸುತ್ತಮುತ್ತಲಿನ ಹೋಟೆಲ್‍ಗಳು, ಕಿರಾಣಿ ಅಂಗಡಿ, ಬೇಕರಿ, ಹಾಲಿನ ಅಂಗಡಿ, ಪತ್ರಿಕಾ ಅಂಗಡಿಗಳನ್ನು ಬಂದ್ ಮಾಡಿಸಿ ಪ್ರತಿಭಟನೆ
ನಡೆಸಿದರು.

ಹಿಂದೆಯೂ ಇದೇ ಸ್ಥಳದಲ್ಲಿ ಮೂರು ಬಾರಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆ ನಡೆದಿತ್ತು. ಇದರಿಂದ ದಲಿತ ಸಮುದಾಯಕ್ಕೆ ಅವಮಾನಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಯಾದಗಿರಿ ಡಿವೈಎಸ್‍ಪಿ ಸಂತೋಷ ಬನ್ನಟ್ಟಿ, ಸಿಪಿಐ ಸೋಮಶೇಖರ ಕೆಂಚರೆಡ್ಡಿ, ವಡಗೇರಾ ಠಾಣೆ ಪಿಎಸ್‍ಐ ಸಿದ್ದರಾಯ ಬಳ್ಳೂರ್ಗಿ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು.

ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿ ಡಾ.ಅಂಬೇಡ್ಕರ್ ಭಾವಚಿತ್ರವನ್ನು ಶುಚಿಗೊಳಿಸಲಾಯಿತು.

ಕೂಡಲೇ ಆರೋಪಿಗಳನ್ನು ಬಂಧಿಸುವವರೆಗೆ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಕೂಡದು ಎಂದು ದಲಿತ ಯುವಕರು ಪಟ್ಟು ಹಿಡಿದರು. ಆರೋಪಿಗಳು ಯಾರೇ ಇರಲಿ, ಸೂಕ್ತ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಆರೋಪಿ ಬಂಧನ: ಘಟನೆ ಕುರಿತು ಮಾಹಿತಿ ನೀಡಿದ ವಡಗೇರಾ ಪಿಎಸ್‌ಐ ಸಿದ್ದರಾಯ ಬಳ್ಳೂರ್ಗಿ, ‘ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ ಮಾಡಿದ ಆರೋಪಿ ವೆಂಕಟರೆಡ್ಡಿಯನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಘಟನೆ ಬಗ್ಗೆ ವಡಗೇರಾ ಠಾಣೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ. ನಾಯ್ಕಲ್‌ ಗ್ರಾಮದಲ್ಲಿ ಪೊಲೀಸ್ ಮೀಸಲು ಪಡೆ ವಾಹನ ಬಿಡಾರ ಹೂಡಿದೆ.

ದಲಿತ ಸಮುದಾಯದ ಮುಖಂಡರಾದ ಡಾ.ಮಲ್ಲಿಕಾರ್ಜುನ ಅನಸುಗೂರ, ಅಶೋಕ ಕಣಜಿಕರ್, ಬಸವರಾಜ ಮೈತ್ರೆ, ಡಾ.ಮಲ್ಲಪ್ಪ, ಚಂದ್ರಶೇಖರ ಕಣಜಿಕರ್, ಮರೆಪ್ಪ ಕಣಜಿಕರ್, ಭೀಮರಾಯ ಸುಂಗಲ್ಕರ್, ಭೀಮರಾಯ ತುಮಕೂರ, ವಿಶ್ವನಾಥ ಬಡಿಗೇರ್, ನಾಗರಾಜ್ ಬೈರಳ್ಳಿ, ಮರಳಸಿದ್ಧ ಬೈರಳ್ಳಿ, ಸದಾನಂದ ಬದ್ದಳ್ಳಿ, ಮರಿಲಿಂಗ ಭಂಡಾರಿ, ನಾಗರಾಜ ಕಣಜಿಕರ್, ಭೀಮು ಬಲಕಲ್, ಶರಣಪ್ಪ ಕಣಜಿಕರ್, ಸಿದ್ರಾಮ ಭಂಡಾರಿ, ಅಲ್ತಾಫರಾಜ್ ಹಾಗೂ ದಲಿತ ಸಮುದಾಯದ ನೂರಾರು ಜನರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು