ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ| ಆಮ್ಲಜನಕ ಕೊರತೆ ನೀಗಿಸಿದ 'ಇಸ್ರೇಲ್ ಯಂತ್ರ'

ಗಾಳಿಯಿಂದ ಆಮ್ಲಜನಕ ತಯಾರಿಸುವ ಘಟಕ, ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ
Last Updated 20 ಮೇ 2021, 3:39 IST
ಅಕ್ಷರ ಗಾತ್ರ

ಯಾದಗಿರಿ: ಇಸ್ರೇಲ್‌ ದೇಶದಿಂದ ದಾನವಾಗಿ ಬಂದಿರುವ ಆಮ್ಲಜನಕ ಉತ್ಪಾದನಾ ಘಟಕದಿಂದ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗಲಿದೆ. ಇದರಿಂದ ಬೇರೆ ಜಿಲ್ಲೆಗಳ ಅವಲಂಬನೆ ತಪ್ಪಲಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಉತ್ಪಾದನಾ ಘಟಕ (ಪಿಎಸ್‌ಎ) ಸ್ಥಾಪನೆ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ.

ಸುಮಾರು 4 ಟನ್ ತೂಕವಿರುವ ಆಮ್ಲಜನಕ ಉತ್ಪಾದನಾ ಘಟಕ ಬೃಹತ್ ಕಂಟೇನರ್‌ ಹೊಂದಿದ್ದು, ಗುಣಮಟ್ಟದ ಸಾಮಗ್ರಿಗಳನ್ನು ಒಳಗೊಂಡಿದೆ. ಈ ಘಟಕದಿಂದ ಪ್ರತಿ ನಿಮಿಷಕ್ಕೆ 500 ಲೀಟರ್ ದ್ರವೀಕೃತ ಆಮ್ಲಜನಕ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿತ್ಯ 70 ರಿಂದ 80 ಕೋವಿಡ್‌ ರೋಗಿಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಕೆ ಮಾಡಬಹುದಾಗಿದೆ.

₹12 ಲಕ್ಷ ಖರ್ಚು

ಕೋವಿಡ್‌ ಆಸ್ಪತ್ರೆಯ ಆವರಣದಲ್ಲಿ ಸ್ಥಾಪನೆ ಮಾಡಲು ಸುಮಾರು ₹10ರಿಂದ ₹12 ಲಕ್ಷ ಖರ್ಚು ತಗುಲಿದೆ. ಎಲೆಕ್ಟ್ರಾನಿಕ್‌, ಪ್ಲಾಂಟ್ ಫಾರಂ, 100 ಕೆ.ವಿ. ಯುಪಿಎಸ್‌ ಸೇರಿದಂತೆ ಆಸ್ಪತ್ರೆ ಒಳಗೆ ಆಮ್ಲಜನಕ ಪೂರೈಸಲು ಪೈಪ್‌ ಲೈನ್‌ ವ್ಯವಸ್ಥೆಗೆ ಹಣ ಖರ್ಚು ಬಂದಿದೆ.

ನಿಸರ್ಗದಲ್ಲಿ ಸಿಗುವ ಗಾಳಿಯಿಂದಲೇ ಆಮ್ಲಜನಕ ತಯಾರಿಸುವ ಘಟಕ ಇದಾಗಿದ್ದು, ಇದರಿಂದ ಮತ್ತಷ್ಟು ಆಮ್ಲಜನಕ ಹಾಸಿಗೆಗಳನ್ನು ತಯಾರಿಸಿಕೊಳ್ಳಲು ಅನುಕೂಲವಾಗುತ್ತದೆ.

140 ಆಮ್ಲಜನಕ ಬೆಡ್‌

ಸದ್ಯ ಜಿಲ್ಲಾಸ್ಪತ್ರೆಯಲ್ಲಿ 140ಕ್ಕೂ ಹೆಚ್ಚು ಆಮ್ಲಜನಕ ಬೆಡ್‌ಗಳಿವೆ. 6 ಕೆಎಲ್‌ ಆಮ್ಲಜನಕ ಪೂರೈಕೆಯಾಗುತ್ತಿದೆ. ಈಗ ಈ ಘಟಕದಿಂದ ಹೆಚ್ಚುವರಿ ಬೆಡ್‌ಗಳಿಗೆ ಆಮ್ಲಜನಕ ಪೂರೈಕೆ ಮಾಡಬಹುದಾಗಿದೆ.

ದೇಶಕ್ಕೆ ಮೂರು ಘಟಕ ದಾನ: ದೇಶಕ್ಕೆ ಇಸ್ರೇಲ್ ಸರ್ಕಾರ ಮೂರು ಕಂಟೇನರ್‌ಗಳನ್ನು ದಾನವಾಗಿ ನೀಡಿದೆ. ಉತ್ತರ ಪ್ರದೇಶದ ವಾರಾಣಾಸಿ, ಕೋಲಾರ ಜಿಲ್ಲೆಯ ಕೆಜಿಎಫ್‌ ಮತ್ತು ಯಾದಗಿರಿ ಜಿಲ್ಲೆಗೆ ಕಂಟೇನರ್‌ಗಳು ಬಂದಿವೆ.

ಜಿಲ್ಲಾಧಿಕಾರಿ ಶ್ರಮ

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರ ಶ್ರಮದ ಫಲದಿಂದ ಘಟಕ ಜಿಲ್ಲೆಗೆ ಸಿಕ್ಕಿದೆ. ಕಳೆದ ಎರಡು ವಾರಗಳ ಹಿಂದೆ ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಇತ್ತು. ಬಳ್ಳಾರಿ ಮತ್ತು ಕೊಪ್ಪಳದಿಂದ ಆಮ್ಲಜನಕ ಪೂರೈಕೆ ಮಾಡಿಕೊಳ್ಳಲಾಗುತ್ತಿತ್ತು. ಜಿಲ್ಲೆಯಲ್ಲಿ ಆಮ್ಲಜನಕ ಉತ್ಪಾದನಾ ಕಾರ್ಖಾನೆಯಾಗಲಿ, ಸಿಲಿಂಡರ್‌ ತುಂಬಿಸುವ ಘಟಕವಾಗಲಿ ಇಲ್ಲದಿದ್ದರಿಂದ ಕಷ್ಟವಾಗಿತ್ತು. ಈ ವಿಷಯವನ್ನು ಸರ್ಕಾರದ ಮುಖ್ಯಕಾರ್ಯದರ್ಶಿವರಿಗೆ ಮನವರಿಕೆ ಮಾಡಿಕೊಟ್ಟು ದಕ್ಷಿಣ ಕರ್ನಾಟಕದ ಜಿಲ್ಲೆಯೊಂದಕ್ಕೆಮಂಜೂರಾಗಿದ್ದ ಘಟಕವನ್ನು ಜಿಲ್ಲೆಗೆ ಮಂಜೂರು ಮಾಡಿಕೊಳ್ಳುವಲ್ಲಿ ಶ್ರಮ ವಹಿಸಿದ್ದಾರೆ.

***

ಆಮ್ಲಜನಕ ಉತ್ಪಾದನಾ ಘಟಕವೂ ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುತ್ತದೆ. ಕಂಟೇನರ್‌ನಲ್ಲಿ ಬೂಸ್ಟರ್‌ ಅಳವಡಿಸಿದರೆ ಜಂಬೋ ಸಿಲಿಂಡರ್‌ ತುಂಬಿಸಿಕೊಳ್ಳುವ ವ್ಯವಸ್ಥೆ ಇದೆ
ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

***

ಬುಧವಾರ ಪ್ರಯೋಗಿಕವಾಗಿ ಚಾಲನೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಕೋವಿಡ್‌ ರೋಗಿಗಳಿಗೆ ಈ ಘಟಕದಿಂದ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ
ಡಾ.ಸಂಜೀವಕುಮಾರ ರಾಯಚೂರಕರ್‌, ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT