ಶನಿವಾರ, ಜೂನ್ 19, 2021
27 °C
ಪ್ರವಾಸಿಗರನ್ನು ಸೆಳೆಯುವ ಧಾರ್ಮಿಕ ಕ್ಷೇತ್ರಗಳು ಹಲವು: ಸೌಕರ್ಯ ಮರೀಚಿಕೆ

ಶರಣರ, ಸಂತರ ನಾಡು ಕಕ್ಕೇರಾ

ಮಹಾಂತೇಶ ಸಿ.ಹೊಗರಿ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಸುರಪುರ ತಾಲ್ಲೂಕಿನ ಕಕ್ಕೇರಾ ಪಟ್ಟಣ ಶರಣರ, ಸಂತರ ಭಾವೈಕ್ಯತೆ ನೆಲವೀಡು. ಇಲ್ಲಿನ ಐತಿಹಾಸಿಕ ಸ್ಥಳ, ಸ್ಮಾರಕ ಹಾಗೂ ಧಾರ್ಮಿಕ ಕ್ಷೇತ್ರಗಳು ಇಂದಿಗೂ ಪ್ರವಾಸಿಗರನ್ನು ಸೆಳೆಯುತ್ತವೆ.

ಸಂಗಮೇಶ್ವರ ಮಠ, ಆರಾಧ್ಯದೈವ ಸೋಮನಾಥ ದೇವಾಲಯ ಮತ್ತು ಪಟ್ಟಣದ ಹೃದಯಭಾಗದಲ್ಲಿರುವ ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳು ಇಲ್ಲಿವೆ.

ಸಂಗಮೇಶ್ವರ ಮಠ: ಆಂಧ್ರಪ್ರದೇಶ ಮೂಲದ  ಸಂತ ರಾಮಯ್ಯತಾತಾ ಎಂಬುವವರು ಈ ಮಠವನ್ನು ಅಭಿವೃದ್ಧಿಪಡಿಸಿದವರು. ಅವರು ಮಠಕ್ಕೆ ಬರುವ ಮುನ್ನ ಸಂಗಮೇಶ್ವರರ ಗದ್ದುಗೆಯುಳ್ಳ ದೇವಸ್ಥಾನ ಬಿಟ್ಟರೆ ಯಾವುದೇ ದೇವಾಲಯ ಇರಲಿಲ್ಲ. ರಾಮಯ್ಯತಾತಾ ಭಕ್ತರ ಸಹಕಾರದೊಂದಿಗೆ ನವಗ್ರಹ, ಆಂಜನೇಯ, ಗಣೇಶ, ಬಸವಣ್ಣನ ದೇವಾಲಯಗಳನ್ನು ಕಟ್ಟಿಸಿ, ಪ್ರತಿದಿನ ಮಠಕ್ಕೆ ಬರುವ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಿದರು. ಮಠದ ಆವರಣದಲ್ಲಿ ರಾಮಯ್ಯತಾತಾ ಅವರ ಗದ್ದುಗೆಯಿದೆ.

ಮಠದಲ್ಲಿ ಪ್ರತಿ ವರ್ಷ ನಾಗರ ಅಮವಾಸ್ಯೆ ದಿನದಂದು ಕರಿಯಪ್ಪ ತಾತನವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಹಲವು ಜಿಲ್ಲೆಗಳಿಂದ ಸಾವಿರಾರು ಭಕ್ತರು ರಥೋತ್ಸವಕ್ಕೆ ಸೇರುತ್ತಾರೆ. ಜಾತ್ರೆ ಅಂಗವಾಗಿ ಶ್ರೀಮಠದಲ್ಲಿ ವಿಶೇಷವಾಗಿ ದಾರ ನೀಡಲಾಗುತ್ತದೆ. ಈ ದಾರವನ್ನು ತೆಗೆದುಕೊಂಡು ವರ್ಷ ಪೂರ್ತಿ ಕೈಯಲ್ಲಿ ಕಟ್ಟಿಕೊಂಡು ಮತ್ತೇ ಇದೇ ಜಾತ್ರೆಯ ದಿವಸ ಹೊಸ ದಾರವನ್ನು ಕಟ್ಟಿಕೊಳ್ಳುತ್ತಾರೆ. ಈ ದಾರವನ್ನು ಕಟ್ಟಿಕೊಂಡರೆ ಯಾವುದೇ ವಿಷಜಂತುಗಳು ದಾರ ಕಟ್ಟಿಕೊಂಡ ಆ ವ್ಯಕ್ತಿಗೆ ಏನು ಮಾಡುವದಿಲ್ಲ. ಈ ದಾರಕ್ಕೆ ಸಂಪೂರ್ಣವಾಗಿ ಕರಿಯಪ್ಪ ತಾತನವರ ಆಶೀರ್ವಾದವಿರುತ್ತದೆ ಎನ್ನುವ ಪ್ರತೀತಿಯಿದೆ.

ಸೋಮನಾಥ ದೇವಾಲಯ: ಪಟ್ಟಣದ ಪ್ರಮುಖ ಆರಾಧ್ಯದೈವ ಸೋಮನಾಥ ದೇವಾಲಯ ನೋಡಿದ ತಕ್ಷಣ ಯಾವುದೋ ಒಂದು ಮಸೀದಿಯಂತೆ ಕಂಡರೂ, ಇಲ್ಲಿರುವ ದೇವ ಸೋಮನಾಥ ಎಂದು ತಿಳಿದಾಗ ಅಚ್ಚರಿಯಾಗುತ್ತದೆ.

ಈ ದೇವಸ್ಥಾನ ಈ ಮಾದರಿಯಲ್ಲಿರಲು ಹಿಂದಿನ ಹೈದರಬಾದ್ ನಿಜಾಮನ ಸರ್ಕಾರದ ಪ್ರಭಾವ ಇರಬಹುದೆಂದು ಹೇಳಲಾಗುತ್ತದೆ. ಈ ಭಾಗದಲ್ಲಿ ಅನೇಕ ಹಿಂದೂ ದೇವಾಲಯಗಳು ಇದೇ ಮಾದರಿಯಲ್ಲಿದ್ದು, ಇವು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿ ಇಂದಿಗೂ ಎಲ್ಲಾ ಧರ್ಮವವರಿಂದಲೂ ಪೂಜಿಸಲ್ಪಡುತ್ತದೆ. ಪ್ರತೀ ವರ್ಷ ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ವೈಭವದಿಂದ ಕಾರ್ತಿಕೋತ್ಸವ ನಡೆಯುತ್ತದೆ.

ಧಾರ್ಮಿಕ ಧತ್ತಿ ಇಲಾಖೆಗೆ ಒಳಪಟ್ಟಿರುವ ಈ ಜಾತ್ರೆ, ಹೊಸ ವರ್ಷಾಚರಣೆಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ರಥೋತ್ಸವ ಇದಾಗಿದ್ದು, 65 ಅಡಿ ಎತ್ತರದ ರಥವೇ ಭಕ್ತರ ಆಕರ್ಷಣೆಯಾಗಿದೆ. ಇತಿಹಾಸಕಾರರು ಹೇಳುವ ಪ್ರಕಾರ ಗುಜರಾತ್ ರಾಜ್ಯದ ಸೌರಾಷ್ಟ್ರದಲ್ಲಿ ಸೋಮನಾಥ ಲಿಂಗಕ್ಕೆ ಭಗ್ನವಾದಾಗ ನೊಂದ ಅಲ್ಲಿನ ಜನರು ಲಿಂಗದ ತುಂಡೊಂದನ್ನು ಇಲ್ಲಿಗೆ ತಂದಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಡುತ್ತಾರೆ.

ಡೋಹರ ಕಕ್ಕಯ್ಯ ದೇವಸ್ಥಾನ: ಪಟ್ಟಣದ ಹೃದಯಭಾಗದಲ್ಲಿರುವ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಭಾಗವಾಗಿದ್ದ ಶರಣ ಡೋಹರ ಕಕ್ಕಯ್ಯನವರ ದೇವಸ್ಥಾನ ಪ್ರವಾಸಿಗರ ಗಮನ ಸೆಳೆಯುತ್ತದೆ.

ಈ ದೇಗುಲ ನಾಲ್ಕು ಸ್ತಂಭಗಳನ್ನು ಹೊಂದಿದೆ. ಅವುಗಳ ಮೇಲೆ ವಿಶೇಷವಾದ ಲಿಪಿಯಲ್ಲಿ ಬರೆಯಲಾಗಿದೆ. ಶಿವಲಿಂಗ ಹಾಗೂ ನಂದಿ ವಿಗ್ರಹಗಳೂ ಇಲ್ಲಿವೆ. ಗರ್ಭಗುಡಿ ಹಾಗೂ ಸುತ್ತಲಿನ ಗೋಡೆಗಳನ್ನು ಬೃಹತ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಇದು ಪ್ರಾಚಿನ ವಾಸ್ತುಶಿಲ್ಪ ವೈಭವವನ್ನು ನೆನಪಿಸುತ್ತದೆ. ಈ ದೇಗುಲ ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿರುವ ದೇವಾಲಯದ ಆಕಾರದಲ್ಲಿದೆ.

ಶರಣ ಡೋಹರ ಕಕ್ಕಯ್ಯ ಇಲ್ಲಿಗೆ ಬಂದು ವಿಶ್ರಾಂತಿ ಪಡೆದು ಇಲ್ಲಿಯೇ ಐಕ್ಯರಾಗಿದ್ದಾರೆ ಎಂದು ಹಿರಿಯರು ತಿಳಿಸುತ್ತಾರೆ. ಈ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ.

ಪಟ್ಟಣದಲ್ಲಿ ಹಲವು ಧಾರ್ಮಿಕ ಕ್ಷೇತ್ರಗಳಿದ್ದರೂ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ. ಪ್ರವಾಸಿಗರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಪಟ್ಟಣದ ಅಭಿವೃದ್ಧಿಗೆ ಗಮನಹರಿಸಬೇಕು ಎಂಬುದು ಸ್ಥಳೀಯರ ಆಗ್ರಹ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು