ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 2 ವರ್ಷವಾದರೂ ಪ್ರತಿನಿಧಿಗಳಿಗೆ ದಕ್ಕದ ಪುರಸಭೆ ಅಧಿಕಾರ

Published 1 ಜನವರಿ 2024, 5:51 IST
Last Updated 1 ಜನವರಿ 2024, 5:51 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ, ಕೆಂಭಾವಿ ಪುರಸಭೆಗಳಿಗೆ ಸದಸ್ಯರು ಆಯ್ಕೆಯಾಗಿ ಎರಡು ವರ್ಷಗಳಾದರೂ ಮೀಸಲಾತಿ ಸಮಸ್ಯೆಯಿಂದ ಅಧಿಕಾರ ಇನ್ನೂ ದಕ್ಕಿಲ್ಲ.

ಕಕ್ಕೇರಾ ಹಾಗೂ ಕೆಂಭಾವಿ ಪುರಸಭೆಗಳಿಗೆ 2021ರ ಡಿಸೆಂಬರ್‌ 27ರಂದು ಚುನಾವಣೆ ನಡೆದಿತ್ತು. ಡಿ.30ರಂದು ಫಲಿತಾಂಶ ಪ್ರಕಟವಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಪುರಪಿತೃಗಳು ಅಧಿಕಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಕಕ್ಕೇರಾ, ಕೆಂಭಾವಿ ಪಟ್ಟಣದ ಪುರಸಭೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಘೋಷಣೆಯಾಗಿಲ್ಲ. ಆದ್ದರಿಂದ ಚುನಾಯಿತ ಪ್ರತಿನಿಧಿಗಳಿಗೆ ಸಾಂವಿಧಾನಿಕವಾಗಿ ತಮ್ಮ ಅಧಿಕಾರ ಚಲಾಯಿಸಲಾಗುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳನ್ನು ಮಾಡಲು ಆಗುತ್ತಿಲ್ಲ.

ಇನ್ನೊಂದೆಡೆ ಕೆಂಭಾವಿ ಪುರಸಭೆಗೆ ಕಾಯಂ ಮುಖ್ಯಾಧಿಕಾರಿ ಇಲ್ಲದೆ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗುತ್ತಿದ್ದರೂ ಸರ್ಕಾರ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶದ ಜೊತೆಗೆ ಹತಾಶೆ ಮೂಡಿಸಿದೆ.

ಸದ್ಯ ಎರಡು ಪುರಸಭೆಗಳಿಗೆ ಉಪವಿಭಾಗಾಧಿಕಾರಿ ಆಡಳಿತಾಧಿಕಾರಿಯಾಗಿದ್ದಾರೆ. ಆಡಳಿತಾಧಿಕಾರಿ ಆಡಳಿತ ನಡೆಸುತ್ತಿದ್ದರೂ ಪಟ್ಟಣಕ್ಕೆ ಭೇಟಿ ನೀಡಿಲ್ಲ. ಇತ್ತ ಪುರಸಭೆಗೆ ಅನೇಕ ಮುಖ್ಯಾಧಿಕಾರಿಗಳು ಬಂದರೂ ಒಬ್ಬ ಮುಖ್ಯಾಧಿಕಾರಿಯೂ ಪೂರ್ಣವಧಿ ಸೇವೆ ಸಲ್ಲಿಸಿದ ಉದಾಹರಣೆಯಿಲ್ಲ.

ಅನೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು ಒಂದೆಡೆಯಾದರೆ ಆಡಳಿತದ ಸಮಸ್ಯೆ ಇನ್ನೊಂದೆಡೆ. ಇನ್ನೂ ಫಾರಂ–3 ಸಮಸ್ಯೆ ಬಗೆಹರಿಯದೆ ಜನರು ಸೈಟ್‌ ಮಾರಾಟ–ಖರೀದಿ ಇಲ್ಲದಂತಾಗಿದೆ.

ಹದಗೆಟ್ಟ ರಸ್ತೆಗಳು: ಮಳೆಗಾಲದಲ್ಲಿ ಪುರಸಭೆ ವ್ಯಾಪ‍್ತಿಯ ವಾರ್ಡ್‌ಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಇದರಿಂದ ಸಾರ್ವಜನಿಕರು ‍‍ಪರದಾಡುತ್ತಿದ್ದಾರೆ.

ಕಕ್ಕೇರಾ ಪುರಸಭೆ ವ್ಯಾಪ್ತಿಯ ಬಸ್ ನಿಲ್ದಾಣ, ಸ್ಮಶಾನ, 23 ವಾರ್ಡ್‌ಗೂ ಶುದ್ದ ಕುಡಿಯುವ ನೀರು, ನಡುಗಡ್ಡಿ ಪ್ರೇಕ್ಷಕ ತಾಣವಾಗಿ ರೂಪಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆಗಬೇಕು’ ಎನ್ನುತ್ತಾರೆ ರೈತ ಮುಖಂಡ ಬುಚ್ಚಪ್ಪ ನಾಯಕ.

ಚುನಾವಣೆ ನಂತರ ತಮ್ಮ ಸಮುದಾಯಕ್ಕೆ ಮೀಸಲಾತಿ ತರಬೇಕು ಎಂದು ಕೆಲವರು ತುಂಬಾ ಓಡಾಡಿದರು. ಆದರೆ, ಈಗ ಯಾವುದೇ ಕೆಲಸಗಳು ಆಗುತ್ತಿಲ್ಲವಾದ್ದರಿಂದ ನಿರಾಶೆ ಉಂಟಾಗಿದೆ ಎಂದು ‍ಪುರಸಭೆ ಪಿತೃಗಳು ಹೇಳುತ್ತಾರೆ.

ಶೀಘ್ರವೇ ಮೀಸಲಾತಿ ಗೊಂದಲ ನಿವಾರಣೆಯಾಗಬೇಕು ಎನ್ನುವುದು ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳ ಆಶಯವಾಗಿದೆ.

ಪೂಕರ ವರದಿ: ಪವನ ಕುಲಕರ್ಣಿ, ಮಹಾಂತೇಶ ಹೊಗರಿ

ವಾರ್ಡ್‌ಗಳಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚುತ್ತಿವೆ. ಅಭಿವೃದ್ಧಿ ಕಾಮಗಾರಿ ಮಾಡಲು ಆಗುತ್ತಿಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರ ಮೀಸಲಾತಿ ಸಮಸ್ಯೆ ಬಗೆಹರಿಸಬೇಕು
ಸುಧಾಕರ ಡಿಗ್ಗಾವಿ ಕೆಂಭಾವಿ ಪುರಸಭೆ ಕಾಂಗ್ರೆಸ್ ಸದಸ್ಯ
ಪುರಸಭೆ ಸದಸ್ಯರಿಗೆ ಸಭೆ ನಡೆಸಲು ಅಧಿಕಾರವಿಲ್ಲದಂತಾಗಿದ್ದು ಎರಡು ವರ್ಷಗಳಾದರೂ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಗುತ್ತಿಲ್ಲ
ಶ್ರೀಧರ ದೇಶಪಾಂಡೆ ಕೆಂಭಾವಿ ಪುರಸಭೆ ಕಾಂಗ್ರೆಸ್ ಸದಸ್ಯ
ಪುರಸಭೆ ಸದಸ್ಯರಿಗೆ ಯಾವುದೇ ಅಧಿಕಾರ ಇಲ್ಲದಿರುವುದರಿಂದ ಅಧಿಕಾರಿಗಳು ನಮ್ಮ ಮಾತನ್ನು ಕೇಳುತ್ತಿಲ್ಲ. ಕೂಡಲೇ ಮೀಸಲಾತಿ ಪ್ರಕಟಿಸಬೇಕು
ರವಿ ಸೊನ್ನದ ಕೆಂಭಾವಿ ಪುರಸಭೆ ಬಿಜೆಪಿ ಸದಸ್ಯ
ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ವಾರ್ಡ್‌ ಸಮಸ್ಯೆ ಹೇಳಿದರೂ ಕೆಲಸಗಳು ಆಗುತ್ತಿಲ್ಲ. ಜನರಿಗೆ ಉತ್ತರಿಸುವುದೇ ದೊಡ್ಡ ಸಮಸ್ಯೆಯಾಗಿದೆ
ಗಿರಿಜಾ ಕೊಡಗಾನೂರ ಕೆಂಭಾವಿ ಬಿಜೆಪಿ ಸದಸ್ಯೆ
ಪುರಸಭೆಯಲ್ಲಿ ಮೀಸಲಾತಿ ಸಮಸ್ಯೆಯಿಂದ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ. ಶೀಘ್ರವೇ ಮೀಸಲಾತಿ ಗೊಂದಲ ನಿವಾರಣೆಯಾಗಬೇಕು. ಅಧಿಕಾರಿಗಳು ಅಭಿವೃದ್ಧಿಯತ್ತ ಗಮನ ಹರಿಸುವುದು ಕಡಿಮೆ. ಆಡಳಿತ ಮಂಡಳಿ ಇದ್ದರೆ ಪುರಸಭೆ ವ್ಯಾಪ್ತಿಗೆ ಒಳಪಡುವ ವಾರ್ಡ್‌ಗಳು ಅಭಿವೃದ್ಧಿಯಾಗುತ್ತವೆ
ರಾಜು ಹವಾಲ್ದಾರ್ ಕಕ್ಕೇರಾ ಪುರಸಭೆ ಸದಸ್ಯ
ಕುಸಿದ ಆಡಳಿತ ಯಂತ್ರ
ಚುನಾವಣೆ ನಡೆದೂ 2 ವರ್ಷಗಳಾದರೂ ಚುನಾಯಿತಿ ಪ್ರತಿನಿಧಿಗಳಿಗೆ ಅಧಿಕಾರ ಇಲ್ಲದಂತೆ ಆಗಿದೆ. ಇದರಿಂದ ಆಡಳಿತ ಯಂತ್ರ ಕುಸಿದಿದೆ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಕೆಲ ಸದಸ್ಯರು ತಮ್ಮ ಪಕ್ಷದ ಸಚಿವ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಬಂದು 6 ತಿಂಗಳಾದರೂ ನಾಯಕರು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಆರೋಪಗಳನ್ನು ಹಿರಿಯ ಸದಸ್ಯರು ಮಾಡುತ್ತಿದ್ದಾರೆ. ಎರಡು ಪುರಸಭೆಗಳಲ್ಲಿ ಪಟ್ಟಣದ ಅಭಿವೃದ್ಧಿ ಕನಸು ಹೊತ್ತು ಸ್ಪರ್ಧಿಸಿ ಗೆದ್ದಿದ್ದಾರೆ. ಆದರೆ ಅವರ ನಿರೀಕ್ಷೆಗೆ ತಕ್ಕಂತೆ ಅಧಿಕಾರ ಇಲ್ಲದಿದ್ದರಿಂದ ಯಾವುದೇ ಕಾರ್ಯಗಳನ್ನು ಮಾಡಲು ಆಗುತ್ತಿಲ್ಲ.
ಕೆಂಭಾವಿಯಲ್ಲಿ ಬಿಜೆಪಿ ಕಕ್ಕೇರಾದಲ್ಲಿ ಕಾಂಗ್ರೆಸ್‌
ಕೆಂಭಾವಿ ಪುರಸಭೆಯಲ್ಲಿ ಈ ಮೊದಲು ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಕಕ್ಕೇರಾದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಚುನಾವಣೆಯಲ್ಲಿ ಫಲಿತಾಂಶ ಅದಲು–ಬದಲು ಆಗಿದೆ. ಕೆಂಭಾವಿ ಪುರಸಭೆಯಲ್ಲಿ ಬಿಜೆಪಿ ಕಕ್ಕೇರಾ ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಸ್ಥಾನ ಬಂದಿವೆ. ಕಕ್ಕೇರಾದಲ್ಲಿ 16 ಸ್ಥಾನ ಕಾಂಗ್ರೆಸ್‌ 6 ಬಿಜೆಪಿ 1 ಸ್ಥಾನ ಪಕ್ಷೇತರರ ಪಾಲಾಗಿತ್ತು. ಪಕ್ಷೇತರ ಸದಸ್ಯ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರಿಂದ 17 ಸ್ಥಾನಕ್ಕೆ ಏರಿಕೆಯಾಗಿದೆ. ಕೆಂಭಾವಿಯಲ್ಲಿ ಬಿಜೆಪಿ 13 ಸ್ಥಾನ ಪಡೆದಿದೆ. ಕಾಂಗ್ರೆಸ್ 8 ಸ್ಥಾನ ಪಕ್ಷೇತರರು 2 ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT