ಮಂಗಳವಾರ, ಅಕ್ಟೋಬರ್ 19, 2021
23 °C

ಕಮಲಾಪುರ: ಅತಿವೃಷ್ಟಿ ಪಟ್ಟಿಯಲ್ಲಿಲ್ಲ ಕಮಲಾಪುರ

ತೀರ್ಥಕುಮಾರ ಬೆಳಕೋಟಾ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಕಲಬುರ್ಗಿ ಜಿಲ್ಲೆಯ 10 ತಾಲ್ಲೂಕುಗಳನ್ನು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತವೆಂದು ಘೋಷಿಸಿ ಕಮಲಾಪುರ ತಾಲ್ಲೂಕು ಮಾತ್ರ ಕೈಬಿಡಲಾಗಿದೆ. ಅಧಿಕಾರಿಗಳ ಈ ನಡೆಗೆ ತಾಲ್ಲೂಕಿನ ಕೃಷಿಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಜುಲೈ ತಿಂಗಳಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರದ ಕೃಷ್ಣಾ ಕಣಿವೆಯ ಜಲಾನಯನ ಪ್ರದೇಶದಲ್ಲಿ  ಎಡೆಬಿಡದೆ ಸುರಿದ ಮಳೆಗೆ ಜಲಾಶಯಗಳು ಭರ್ತಿಯಾಗಿ ನದಿಗಳು ತುಂಬಿ ಹರಿದಿದ್ದವು. ಇದರಿಂದ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು. 86 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ತಾಲ್ಲೂಕುಗಳು ಎಂದು ಸರ್ಕಾರ ಈ ಮೊದಲೇ ಘೋಷಿಸಿತ್ತು.

ಮೊದಲ ವರದಿಯಲ್ಲಿ ಕಲಬುರ್ಗಿ ಜಿಲ್ಲೆಯ ಯಾವುದೇ ತಾಲ್ಲೂಕು ಸೇರ್ಪಡೆ ಆಗಿರಲಿಲ್ಲ. 2021ರ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಕಲಬುರ್ಗಿ ಮತ್ತು ಬೀದರ್‌ನಲ್ಲಿ ಭಾರಿ ಮಳೆ ಸುರಿಯಿತು. ಕಲಬುರ್ಗಿಯ 10 ಮತ್ತು ಬೀದರ್ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಅಪಾರ ಪ್ರಮಾಣದ ಬೆಳೆ, ಮನೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿದೆ. ಇವುಗಳನ್ನು ಪ್ರವಾಹ ಪೀಡಿತ ತಾಲ್ಲೂಕು ಎಂದು ಘೋಷಿಸುವಂತೆ ಆಗಸ್ಟ್‌ 11ರಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ರಾಜ್ಯ ಪೃಕೃತಿ ವಿಕೋಪ ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌) ಮತ್ತು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗ ಸೂಚಿಯಂತೆ ಸರ್ಕಾರದ ಆದೇಶವನ್ನು ಪಾಲಿಸಿ ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಎಂ.ಎಸ್‌.ರಶ್ಮಿ ಅವರು ಆದೇಶ ಹೊರಡಿಸಿದ್ದಾರೆ.

ಎಲ್ಲ ತಾಲ್ಲೂಕುಗಳಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ಒಂದೇ ಪ್ರಮಾಣದಲ್ಲಿ ಮಳೆಯಾಗಿದೆ. ಹಳ್ಳಕೊಳ್ಳ, ನಾಲೆಗಳ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಎರಡು ಬಾರಿ ಸಮೀಕ್ಷೆ ನಡೆಸಿ ಸಲ್ಲಿಸಿದ ವರದಿಯಲ್ಲೂ ಕಮಲಾಪುರ ಪರಿಗಣನೆಗೆ ತೆಗೆದುಕೊಳ್ಳದೆ ಇರುವುದು ಈ ಭಾಗದ ಕೃಷಿಕರಿಗೆ ಎಸಗಿದ ದ್ರೋಹ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಕಮಲಾಪುರ ತಾಲ್ಲೂಕು ಆಳಂದ, ಕಲಬುರ್ಗಿ ಗ್ರಾಮೀಣ, ಕಾಳಗಿ, ಚಿಂಚೋಳಿ ಜತೆಗೆ ಬೀದರ್‌ನ ಹುಮನಾಬಾದ್ ಮತ್ತು ಚಿಟಗುಪ್ಪ ತಾಲ್ಲೂಕುಗಳ ಜೊತೆ ಗಡಿ ಹಂಚಿಕೊಂಡಿದೆ. ಆ ತಾಲ್ಲೂಕುಗಳ ಹಳ್ಳ, ನಾಲೆಗಳು ಕಮಲಾಪುರದ ಮೂಲಕ ಹಾದು ಹೋಗುತ್ತವೆ. ಇವುಗಳ ಮಧ್ಯೆ ಕಮಲಾಪುರ ತಾಲ್ಲೂಕು ಅತಿವೃಷ್ಟಿಯಿಂದ ಹೊರಗೆ ಉಳಿಯಲು ಸಾಧ್ಯವೇ ಎಂದು ರೈತಪರ ಸಂಘಟನೆಗಳು ಪ್ರಶ್ನಿಸುತ್ತಿವೆ.

ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಪ್ರವಾಹ ಸಮೀಕ್ಷೆ ನಡೆಸಿ ಅಂಕಿಸಂಖ್ಯೆ ಸಲ್ಲಿಸಿದ್ದಾರೆ. ಅವರ ತಾರತಮ್ಯ ಧೋರಣೆ, ನಿರ್ಲಕ್ಷ್ಯದಿಂದ ತಾಲ್ಲೂಕಿನ ರೈತರಿಗೆ ಸಿಗಬೇಕಾದ ಅನುದಾನವನ್ನು ಮಣ್ಣು ಪಾಲು ಮಾಡಿದ್ದಾರೆ ಎಂದೂ ಅವರು ಕಿಡಿಕಾರಿದ್ದಾರೆ.

***

ಕಮಲಾಪುರ ಕೈ ತಪ್ಪಿದ್ದು ನಿಜ. ವರದಿ ಸಲ್ಲಿಕೆಯಾಗಿದ್ದು ಜಿಲ್ಲಾಧಿಕಾರಿಗಳು ಸಹ ಶಿಫಾರಸ್ಸು ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಸೇರ್ಪಡೆಯಾಗಲಿದೆ

- ರಿತೇಂದ್ರನಾಥ ಸುಗೂರ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು