ಶುಕ್ರವಾರ, ಆಗಸ್ಟ್ 6, 2021
22 °C

ಕಾರ ಹುಣ್ಣಿಮೆ ಕರಿ ದಿನ ಹೆಣ್ಣುಮಕ್ಕಳಿಗೆ ಕಲ್ಪಿತ ಮದುವೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಹೆಗ್ಗನದೊಡ್ಡಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಕರಿ ದಿನವಾದ ಶುಕ್ರವಾರ ಇಬ್ಬರು ಹೆಣ್ಣುಮಕ್ಕಳಿಗೆ ಕಲ್ಪಿತ ವಿವಾಹ ಮಾಡಿ ಗ್ರಾಮಸ್ಥರು ಸಸಿ ಆಡುವ ಹಬ್ಬ ಆಚರಿಸಿದರು. 

ದೊಡ್ಡವರಿಗೆ ವಿವಾಹ ಮಾಡುವಂತೆ ಶಾಸ್ತ್ರೋಕ್ತವಾಗಿ ನಿಯಮಗಳನ್ನು ಪಾಲಿಸಿದರು. ವಧು ವರರಿಗೆ ಸ್ನಾನ ಮುಂತಾದ ಕಾರ್ಯಕ್ರಮಗಳನ್ನು ಮಾಡಿದರು. ಕೈಗೆ ಕಂಕಣ ಕಟ್ಟಿ ವಿವಾಹದ ಕಾರ್ಯ ನೆರವೇರಿಸಿದರು.

ಇದನ್ನೂ ಓದಿ: 

ಕಾರ ಹುಣ್ಣಿಮೆ ರೈತರ ಹಬ್ಬವಾಗಿದೆ. ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಮಾಡಿ ನಂತರ ಮೆರವಣಿಗೆ ನಡೆಸುವುದು ಸಂಪ್ರದಾಯ. ಆದರೆ, ಹೆಗ್ಗನದೊಡ್ಡಿ ಗ್ರಾಮದಲ್ಲಿ ಹುಣ್ಣಿಮೆ ಮರುದಿನ ಮಕ್ಕಳು ಸಸಿ ಹಬ್ಬ ಆಚರಿಸುವುದು ವಿಶೇಷವಾಗಿದೆ. ಹಿರಿಯರು ಮಕ್ಕಳಿಗೆ ಕಲ್ಪಿತ ಮದುವೆ ಮಾಡಿ ಸಂಭ್ರಮಿಸಿದರು. ಇದಕ್ಕಾಗಿ 15 ದಿನಗಳ ಮುಂಚೆಯೇ ಸಿದ್ಧತೆಗಳನ್ನು ನಡೆಸಿದ್ದರು. ತೆಂಗಿನ ಚಿಪ್ಪುಗಳಲ್ಲಿ ಬೆಳೆಸಿದ ವಿವಿಧ ಧಾನ್ಯಗಳ ಸಸಿಗಳನ್ನು ಶುಕ್ರವಾರ ಊರ ಮುಂದಿನ ಹಳ್ಳ, ಕೆರೆ, ನದಿ ಹಾಗೂ ಬಾವಿಗಳಿಗೆ ತೆರಳಿ ಪೂಜೆ ಸಲ್ಲಿಸಿ ಮಕ್ಕಳ ಮದುವೆ ನೆರವೇರಿಸಲಾಯಿತು. ಮಕ್ಕಳು ವಿವಿಧ ಆಟವಾಡಿ ಸಂಭ್ರಮಿಸಿದರು. ಈ ಹಬ್ಬದಲ್ಲಿ ಗ್ರಾಮದ ಹಿರಿಯರು, ಕಿರಿಯರು, ಗ್ರಾಮಸ್ಥರು ಸೇರಿ ವಧು-ವರರ ಮೆರವಣಿಗೆ ನಡೆಸಿದರು. 

ವಧು-ವರರು ಸಸಿಗಳನ್ನು ನೆಟ್ಟರೆ ಒಳ್ಳೆಯ ಮಳೆ, ಬೆಳೆ ಬರುತ್ತದೆ ಎನ್ನುವ ನಂಬಿಕೆ ಗ್ರಾಮೀಣ ಭಾಗದಲ್ಲಿದೆ.

ಇದನ್ನೂ ಓದಿ: 

ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳೇ ಪುರೋಹಿತರು ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಗಮನ ಸೆಳೆದರು. ಮಂತ್ರ ಪಠಿಸಿ ವಿವಾಹ ಕಾರ್ಯ ನೆರವೇರಿಸಲಾಯಿತು.

ಹಬ್ಬದಲ್ಲಿ ಗ್ರಾಮದ ಹಿರಿಯ ಮುಖಂಡರಾದ ದೊಡ್ಡಬಸಯ್ಯಸ್ವಾಮಿ ಹಿರೇಮಠ, ಮಲ್ಲಯ್ಯ ಸ್ವಾಮಿ ಹಿರೇಮಠ, ಸಿದ್ದಣ್ಣ ಅಂಗಡಿ ಸಾಹುಕಾರ, ಗುರುಲಿಂಗಪ್ಪ ಸಾಹುಕಾರ, ಚನ್ನಬಸಪ್ಪ ಪೂಜಾರಿ, ಸುರೇಶ ಸಾಹುಕಾರ, ಶಿವು ಸಾಹುಕಾರ, ನಿಂಗಣ್ಣ ವಡಗೇರ, ಶ್ರೀಶೈಲ್ ಅಂಗಡಿ, ಸುಗಣ್ಣ ಸಾಹುಕಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು