ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ರೈತರ ಹಬ್ಬ ಕಾರ ಹುಣ್ಣಿಮೆಗೆ ಸಿದ್ಧತೆ

ಜಾನುವಾರುಗಳಿಗೆ ಬೇಕಾದ ಅಗತ್ಯ ಸಾಮಗ್ರಿ ಖರೀದಿಯಲ್ಲಿ ತೊಡಗಿದ ರೈತ ಸಮುದಾಯ
Published 19 ಜೂನ್ 2024, 5:14 IST
Last Updated 19 ಜೂನ್ 2024, 5:14 IST
ಅಕ್ಷರ ಗಾತ್ರ

ಯಾದಗಿರಿ: ಈ ಬಾರಿ ಮುಂಗಾರು ಹಂಗಾಮು ಆಶಾದಾಯಕವಾಗಿದ್ದು, ಮುಂಗಾರಿನ ‍ಪ್ರಥಮ ಹಬ್ಬ ಕಾರ ಹುಣ್ಣಿಮೆಗೆ ರೈತರು ಸಿದ್ಧತೆ ನಡೆಸಿದ್ದಾರೆ.

ರೈತರ ಹಬ್ಬವಾದ ಕಾರಹುಣ್ಣಿಮೆ ಈ ಬಾರಿ ಜೂನ್ 22ರಂದು ಆಚರಣೆ ಮಾಡಲಾಗುತ್ತಿದ್ದು, ನಗರದ ಮಾರುಕಟ್ಟೆಗಳಲ್ಲಿ ರೈತರು ಜಾನುವಾರುಗಳಿಗೆ ಬೇಕಾದ ಅಗತ್ಯ ಸಾಮಗ್ರಿ ಖರೀದಿ ಮಾಡುತ್ತಿದ್ದಾರೆ.

ಕಾರ ಹುಣ್ಣಿಮೆ ದಿನ ರೈತರೂ ತಮ್ಮ ಶೃಂಗರಿಸಿದ ಎತ್ತುಗಳನ್ನು ಗ್ರಾಮದ ಅಗಸಿ ಬಾಗಿಲಿನಿಂದ ಎತ್ತುಗಳ ಓಟದ ಸ್ಪರ್ಧೆಯ ಮೂಲಕ ಕಾರಹುಣ್ಣಿಮೆ ಕರಿ ಹರಿಯುವ ಸಂಪ್ರದಾಯದ ಆಚರಣೆ ಮಾಡುತ್ತಾರೆ.

ನೆಚ್ಚಿನ ಎತ್ತುಗಳನ್ನು ಶುಚಿಗೊಳಿಸಿ, ರೋಗ ರುಜಿನ ಬಾರದಂತೆ ಔಷಧೋಪಚಾರ ಮಾಡಿ, ರಂಗು ರಂಗಿನ ಬಣ್ಣ ಬಳಿದು, ಗೆಜ್ಜೆ ಸರ, ಗುಮರಿ ಸರ, ಮುತ್ತಿನ ಸರ, ಬಣ್ಣ ಬಣ್ಣದ ಹಗ್ಗಗಳಿಂದ ಎತ್ತುಗಳನ್ನು ಶೃಂಗರಿಸಿ ದೈವಿ ಸ್ವರೂಪಿ ಎಂದು ತಿಳಿದು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಆಶಾದಾಯಕ ಮಳೆ: ಪೂರ್ವ ಮುಂಗಾರು (ಮಾರ್ಚ್‌ 1ರಿಂದ ಮೇ 31ರ ವರೆಗೆ) 60.3 ಮಿಲಿ ಮೀಟರ್‌ (ಎಂಎಂ) ವಾಡಿಕೆ ಮಳೆ ಇತ್ತು. 97.8 ಎಂಎಂ ಮಳೆಯಾಗಿದೆ. ಪೂರ್ವ ಮುಂಗಾರು ಸುರಪುರ ತಾಲ್ಲೂಕು ಬಿಟ್ಟು ಉಳಿದ ಐದು ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂನ್‌ 1ರಿಂದ ಜೂನ್‌ 14ರವರೆಗೆ 108.0 ಎಂಎಂ ವಾಡಿಕೆ ಮಳೆಯಿದ್ದು, 127.7 ಎಂಎಂ ಮಳೆಯಾಗಿದೆ. ಇದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮುಂಗಾರು ಹಂಗಾಮಿನಲ್ಲಿ ಭತ್ತ, ಸಜ್ಜೆ, ತೊಗರಿ, ಹೆಸರು, ಹತ್ತಿ, ಉದ್ದು ಹೆಚ್ಚು ಬಿತ್ತನೆ ಮಾಡಲಾಗುತ್ತಿದೆ. ಕಳೆದ ವಾರದಿಂದಲೂ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಬಿತ್ತನೆಗೆ ಅನುಕೂಲವಾಗಿದೆ. ಅಲ್ಲದೇ ಹತ್ತಿ ಬೀಜವನ್ನು ಊರುತ್ತಿದ್ದಾರೆ.

‘ಕಳೆದ ಬಾರಿಗಿಂತ ಈ ಬಾರಿ ಮುಂಗಾರು ಹಂಗಾಮಿನ ಮಳೆ ಚೆನ್ನಾಗಿ ಆಗಿದ್ದು, ಹತ್ತಿ ಬೀಜ ಬಿತ್ತನೆ ಎಲ್ಲೆಡೆ ನಡೆದಿದೆ. ಮಳೆ ಬಿಡುವು ನೀಡಿದ್ದರಿಂದ ಮುಂಗಾರು ಹಂಗಾಮಿನ ಬೀಜ ಬಿತ್ತನೆ ಮಾಡಿದ್ದೇವೆ’ ಎಂದು ಬಂದಳ್ಳಿ ಗ್ರಾಮದ ರೈತ ದೇವೇಂದ್ರಪ್ಪ ಹೇಳಿದರು.

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಳ್ಳಳ್ಳಿ ಗ್ರಾಮದ ಸಮೀಪ ಹತ್ತಿ ಬೀಜ ಹಾಕುತ್ತಿರುವ ಮಹಿಳೆಯರು
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಳ್ಳಳ್ಳಿ ಗ್ರಾಮದ ಸಮೀಪ ಹತ್ತಿ ಬೀಜ ಹಾಕುತ್ತಿರುವ ಮಹಿಳೆಯರು

ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು ಬಿತ್ತನೆಯಲ್ಲಿ ರೈತರು ತೊಡಗಿದ್ದಾರೆ. ಸಕಾಲಕ್ಕೆ ಮಳೆಯಾಗಿದ್ದರಿಂದ ಈ ಬಾರಿ ರೈತರು ಮೊದಲ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ

-ಭೀಮರಾಯ ಪೂಜಾರಿ ರೈತ ಖಾನಾಪುರ

ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಬಿಡುವು ನೀಡಿದ್ದರಿಂದ ಬಿತ್ತನೆಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾದರೆ ರೈತರಿಗೆ ಚಿಂತೆ ಕಾಡುವುದಿಲ್ಲ

-ಸಿದ್ದಣ್ಣ ಅಗಸಿಮನಿ ರೈತ ಬಲಕಲ್

ಶೇ 19.26ರಷ್ಟು ಬಿತ್ತನೆ

ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಶೇ 19.26ರಷ್ಟು ಬಿತ್ತನೆಯಾಗಿದೆ. ಶಹಾಪುರ ತಾಲ್ಲೂಕಿನಲ್ಲಿ 73463.50 ಬಿತ್ತನೆ ಗುರಿ ಇದ್ದು ನೀರಾವರಿ ಖುಷ್ಕಿ ಸೇರಿ 23967 ಹೆಕ್ಟೇರ್‌ ಶೇ 32.62ರಷ್ಟು ಬಿತ್ತನೆಯಾಗಿದೆ. ವಡಗೇರಾ ತಾಲ್ಲೂಕಿನಲ್ಲಿ 54826.33 ಹೆಕ್ಟೇರ್‌ ಬಿತ್ತನೆ ಗುರಿ ಇದ್ದರೆ 18072 ಬಿತ್ತನೆಯಾಗಿದ್ದು ಶೇ 32.96 ರಷ್ಟು ಗುರಿ ಸಾಧನೆಯಾಗಿದೆ. ಸುರಪುರ ತಾಲ್ಲೂಕಿನಲ್ಲಿ 92029.52ಹೆಕ್ಟೇರ್ ಬಿತ್ತನೆ ಗುರಿ ಇತ್ತು. 17702 ಹೆಕ್ಟೇರ್‌ ಬಿತ್ತನೆಯಾಗಿ ಶೇ 19.24 ರಷ್ಟಾಗಿದೆ. ಹುಣಸಗಿ ತಾಲ್ಲೂಕಿನಲ್ಲಿ 63737.79 ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ ಇದ್ದರೆ ಶೇ 15.24ರಷ್ಟಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 68672.24 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದರೆ ಶೇ 6.22ರಷ್ಟು ಬಿತ್ತನೆಯಾಗಿದೆ. ಗುರುಮಠಕಲ್ ತಾಲ್ಲೂಕಿನಲ್ಲಿ 49944.73 ಹೆಕ್ಟೇರ್‌ ಬಿತ್ತನೆ ಗುರಿ ಇದ್ದರೆ 3844 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ 7.70ರಷ್ಟಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 402674.12 ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ ಇದ್ದು 77567 ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿ ಶೇ 19.26ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಜುಲೈ 5ರಂದು ಮಣ್ಣೆತ್ತಿನ ಅಮಾವಾಸ್ಯೆ

ಕಾರ ಹುಣ್ಣಿಮೆ ಮುಗಿದ 15 ದಿನದ ನಂತರ ರೈತಾಪಿ ವರ್ಗ ಮತ್ತೊಂದು ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ. ಕಾರ ಹುಣ್ಣಿಮೆಗೆ ಜೀವಂತ ಎತ್ತುಗಳನ್ನು ಪೂಜಿಸಿದರೆ ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ಪೂಜೆ ಸಲ್ಲಲಿದೆ. ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕುಂಬಾರರು ತಯಾರಿಸಿದ ಮಣ್ಣಿನ ಎತ್ತುಗಳಿಗೆ ಬೇಡಿಕೆ ಹೆಚ್ಚಲಿದೆ. ಮಣ್ಣೆತ್ತಿನ ಜೊತೆಗೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ (ಪಿಒಪಿ) ಎತ್ತುಗಳು ಕಳೆದ ಕೆಲ ವರ್ಷಗಳಿಂದ ಮಾರುಕಟ್ಟೆಯಲ್ಲಿ ರಾಜಾಜಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT