ಮಂಗಳವಾರ, ಸೆಪ್ಟೆಂಬರ್ 21, 2021
28 °C
ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಿರಪರಿಚಿತ, ಪಕ್ಕದ ಜಿಲ್ಲೆ ಲಿಂಗಸುಗೂರುನಿಂದ ಜಿಲ್ಲೆಗೆ ಆಮದು

ಯಾದಗಿರಿ: ಔಷಧಿಯ ಗುಣವುಳ್ಳ ‘ಕರ್ಚಿಕಾಯಿ’ಗೆ ಬೇಡಿಕೆ, ಕೆಜಿಗೆ ₹100

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಔಷಧಿ ಗುಣವುಳ್ಳ ‘ಕರ್ಚಿಕಾಯಿ‘ ನಗರಕ್ಕೆ ಪ‍್ರವೇಶಿಸಿದ್ದು, ತಳ್ಳುಗಾಡಿಗಳಲ್ಲಿಟ್ಟು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ.

ಕಳೆದ ಒಂದು ವಾರದಿಂದ ರಸ್ತೆ ಬದಿಗಳಲ್ಲಿ ಕರ್ಚಿಕಾಯಿ ಮಾರಾಟ ಮಾಡಲಾಗುತ್ತಿದೆ. ಕರ್ಚಿಕಾಯಿ ಬಗ್ಗೆ ತಿಳಿಯದೇ ಇದ್ದವರು ವ್ಯಾಪಾರಸ್ಥರ ಬಳಿ ಬಂದು ಇದರ ಬಗ್ಗೆ ವಿಚಾರಿಸಿಕೊಂಡು ಹೋಗುತ್ತಿದ್ದಾರೆ.

₹100ಗೆ ಕೆಜಿ ಮಾರಾಟ: ನಗರದ ಹೊಸ, ಹಳೆ ಬಸ್‌ ನಿಲ್ದಾಣ, ರೈಲ್ವೆ ಸ್ಟೇಷನ್‌ ರಸ್ತೆಯ ತರಕಾರಿ ಮಾರುಕಟ್ಟೆ ಸೇರಿದಂತೆ ನಗರದ ವಿವಿಧೆಡೆ ತಳ್ಳುಗಾಡಿಗಳಲ್ಲಿ ಕರ್ಚಿಕಾಯಿ ಮಾರಾಟ ಮಾಡಲಾಗುತ್ತಿದೆ. ಒಂದು ಕೆಜಿಗೆ ₹100 ದರ ನಿಗದಿ ಪಡಿಸಲಾಗಿದೆ. ಕಳೆದ ಎರಡು ವರ್ಷ ಚಿಕ್ಕ ಗಾತ್ರದ ಒಂದು ಲೋಟಕ್ಕೆ ₹20 ದರ ಇತ್ತು. ₹50ಗೆ ಮೂರು ಲೋಟ ಕರ್ಚಿಕಾಯಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ದರ ಹೆಚ್ಚಳ ಮಾಡಲಾಗಿದೆ. ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ.

ಪಕ್ಕದ ಲಿಂಗಸುಗೂರುನಿಂದ ಜಿಲ್ಲೆಗೆ ಆಮದು: ಮಳೆಗಾಲದಲ್ಲಿ ಕಪ್ಪು ಮಣ್ಣಿನ ಭೂಮಿಯ ಹೊಲಗಳ ಬದುವಿನಲ್ಲಿ ಕರ್ಚಿಕಾಯಿ ಬೆಳೆಯುತ್ತದೆ. ಇದಕ್ಕೆ ಯಾವುದೇ ರಸಾಯನಿಕ ಔಷಧಿ ಬಳಕೆ ಮಾಡುವುದಿಲ್ಲ. ಇದು ಶುದ್ಧ ಸಾವಯವವಾಗಿದೆ. ಇದರಿಂದ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. 

ರಾಯಚೂರು ಜಿಲ್ಲೆಯ ಲಿಂಗಸುಗೂರುನಿಂದ ಜಿಲ್ಲೆಗೆ ಆಮದು ಆಗುತ್ತಿದೆ. ಲಿಂಗಸುಗೂರು ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ವ್ಯಾಪಾರಿಯೊಬ್ಬರು ಪ್ರತಿದಿನ ಎರಡು ಚೀಲಗಳಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ರಾಯಚೂರು ತಾಲ್ಲೂಕಿನಿಂದ ತಂದು ಮಾರಾಟ ಮಾಡುತ್ತಿದ್ದಾರೆ. 

ಪ್ರತಿ ಬೆಳಿಗ್ಗೆ 8 ಗಂಟೆಗೆಲ್ಲ ನಗರದ ವಿವಿಧ ಕಡೆ ಮಾರಾಟ ಮಾಡುತ್ತಿದ್ದು, ಸಂಜೆ ವೇಳೆ ಮತ್ತೆ ಊರಿಗೆ ತೆರಳಿ ಬೆಳಿಗ್ಗೆ ಬಸ್‌ ಮೂಲಕ ಹೊತ್ತು ತರುತ್ತಿದ್ದಾರೆ. 

ಮುಂಗಾರು ಮಳೆಯಲ್ಲಿ ಕಪ್ಪು ಭೂಮಿಯಲ್ಲಿ ಇದು ಹೆಚ್ಚಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ತನ್ನಷ್ಟಕ್ಕೇ ತಾನೇ ಬೆಳೆಯುವ ಕರ್ಚಿಕಾಯಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಇದನ್ನು ಚೆನ್ನಾಗಿ ಉರಿದು, ಸ್ವಲ್ಪ ಎಣ್ಣೆಯಲ್ಲಿ ಖಾರದಪುಡಿ, ಉಪ್ಪು, ಬೆಳ್ಳುಳ್ಳಿಯಲ್ಲಿ ಫ್ರೈ ಮಾಡಿ ಜೋಳದ ರೊಟ್ಟಿಯ ಜೊತೆ ಸವಿಯುತ್ತಾರೆ. ಕರ್ಚಿಕಾಯಿಯಲ್ಲಿ ಔಷಧಿ ಗುಣ ಇದೆ ಎನ್ನುವುದು ಹಿರಿಯ ಅನುಭವವಾಗಿದೆ.

ಮಹಿಳೆಯರಿಗೂ ಕೂಲಿ: ಕರ್ಚಿಕಾಯಿ ಹೊಲಗಳಲ್ಲಿ ಬಿಡಿಸುವುದರಿಂದ ಮಹಿಳೆಯರಿಗೂ ಕೂಲಿ ಸಿಗುತ್ತಿದೆ. ಇದರಿಂದ ಉಪಜೀವನ ನಡೆಯಲು ಸಹಕಾರಿಯಾಗಿದೆ. ಒಂದು ಪುಟ್ಟಿಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿದ್ದು, ಇದವರಿಗೆ ಉಪ ಆದಾಯವಾಗಿ ಕರ್ಚಿಕಾಯಿ ಹಣ ಗಳಿಸಿಕೊಡುತ್ತಿದೆ. 

‘ಕಳೆದ ಒಂದು ವಾರದಿಂದ ಮಾರಾಟದಲ್ಲಿ ತೊಡಗಿಸಿಕೊಂಡಿದ್ದು, ಬೇಡಿಕೆ ಇದೆ. ಇದರಿಂದ ದೂರದ ಊರಿನಿಂದ ಬಂದು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇವೆ. ಇದು ವರ್ಷದ ಮಳೆಗಾಲದಲ್ಲಿ ಮಾತ್ರ ಸಿಗುತ್ತಿದೆ. ಇನ್ನೊಂದು ತಿಂಗಳು ಮಾರಾಟಕ್ಕೆ ಸಿಗುತ್ತದೆ. ಆನಂತರ ಮುಂದಿನ ವರ್ಷ ತನಕ ಕಾಯಬೇಕಾಗುತ್ತದೆ’ ಎನ್ನುತ್ತಾರೆ ವ್ಯಾಪಾರಿ ಹಣಮಂತರಾಯ. 

ಮೆಕ್ಕೆಜೋಳ ತೆನೆಗೂ ಬೇಡಿಕೆ

ಕರ್ಚಿಕಾಯಿ ಜೊತೆಗೆ ಮೆಕ್ಕೆಜೋಳ ತೆನೆಗೂ ಬೇಡಿಕೆ ಇದೆ. ನಗರದ ವಿವಿಧ ಕಡೆ ರಸ್ತೆ ಬದಿಯಲ್ಲಿ ಹಲವಾರು ವ್ಯಾಪಾರಿಗಳು ಹಸಿ ಮತ್ತು ಕುದಿಸಿದ ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದಾರೆ. 

ಒಂದಕ್ಕೆ ₹20 ಇದ್ದರೆ, ಮೂರು ತೆಗೆದುಕೊಂಡರೆ ₹50 ಇದೆ. ಕಲಬುರ್ಗಿ ಜಿಲ್ಲೆಯಿಂದ ಮೆಕ್ಕೆಜೋಳ ತೆನೆ ಆಮದಾಗುತ್ತಿದ್ದು, ವ್ಯಾಪಾರಿಗಳಿಗೆ ಪ್ರತಿಯೊಂದರಲ್ಲೂ ₹5 ಲಾಭ ಸಿಗುತ್ತಿದೆ. ಉಪ್ಪು, ಖಾರ, ನಿಂಬೆಹುಳಿ ಲೇಪಿಸಿ ಕೊಡುತ್ತಿದ್ದು, ಸಿಹಿಯಾಗಿವೆ.

ಕರ್ಚಿಕಾಯಿ ಹುರಿದು ತಿಂದವರೆ ಬಲ್ಲರು ಇದರ ರುಚಿ. ಬಿಸಿಬಿಸಿ ಜೋಳದ ರೊಟ್ಟಿಗೆ ಇದು ಹೇಳಿ ಮಾಡಿಸಿದ ಪಲ್ಯೆ. ಇದು ತಂದ ದಿನವೇ ಹುರಿದಿಟ್ಟುಕೊಂಡರೆ ಎರಡ್ಮೂರು ದಿನ ಇಟ್ಟುಕೊಳ್ಳಬಹುದು 

- ಗಂಗೂಬಾಯಿ ಹೊಸಮನಿ, ನಗರ ನಿವಾಸಿ

ಪ್ರತಿದಿನ ಲಿಂಗಸೂಗುರುನಿಂದ ತರಲಾಗುತ್ತಿದೆ. ಉತ್ತಮ ಬೇಡಿಕೆ ಇದೆ. ತಿಳಿಯದೇ ಇದ್ದವರು ನಮ್ಮ ಬಳಿ ಕೇಳಿ ತಿಳಿದುಕೊಂಡು ಹೋಗುತ್ತಿದ್ದಾರೆ. ವ್ಯಾಪಾರ ಚೆನ್ನಾಗಿ ಆಗುತ್ತಿದೆ

- ಹಣಮಂತರಾಯ, ವ್ಯಾಪಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.