ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ | ರಾಜಾವೆಂಕಟಪ್ಪ ನಾಯಕಗೆ ಕಾಂಗ್ರೆಸ್‌ ಟಿಕೆಟ್

ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ; ಕಾರ್ಯಕರ್ತರಲ್ಲಿ ಹೆಚ್ಚಿದ ಉತ್ಸಾಹ
Last Updated 28 ಮಾರ್ಚ್ 2023, 6:41 IST
ಅಕ್ಷರ ಗಾತ್ರ

ಸುರಪುರ: ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರಿಗೆ ಕಾಂಗ್ರೆಸ್ ಟಿಕೆಟ್‌ ಘೋಷಣೆಯಾಗಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿದೆ.

ಸುರಪುರ ಮತಕ್ಷೇತ್ರದಿಂದ ರಾಜಾ ವೆಂಕಟಪ್ಪನಾಯಕ ಅವರೊಬ್ಬರೇ ಅರ್ಜಿ ಸಲ್ಲಿಸಿದ್ದರು. ಮೂರು ಬಾರಿ ಶಾಸಕರಾಗಿರುವ ಅವರು ಕಳೆದ ಬಾರಿ ಪರಾಭವಗೊಂಡಿದ್ದರು.

ತಾಲ್ಲೂಕಿನ ಪೇಠ ಅಮ್ಮಾಪುರ ಮಂಡಲ ಪ್ರಧಾನರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ವೆಂಕಟಪ್ಪನಾಯಕ ಅವರಿಗೆ ಅವರ ತಂದೆ ರಾಜಾ ಕುಮಾರನಾಯಕ ಅವರು ರಾಜಕೀಯ ಗುರು. ಅವರ ನಿಧಾನ ನಂತರ 1994ರಲ್ಲಿ ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದರು.

ನಂತರ ಕೆಲಕಾಲ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಸೇರಿದ ಅವರು 1999ರಲ್ಲಿ ಕಾಂಗ್ರೆಸ್ ಶಾಸಕರಾದರು. ಅಲ್ಲಿಂದ ಈವರೆಗೂ ಕಾಂಗ್ರೆಸ್‌ನ ನಿಷ್ಠೆಯಿಂದ ಇದ್ದಾರೆ. ಅವರು 2004, 2008ರಲ್ಲಿ ಪರಾಭವಗೊಂಡಿದ್ದರು. 2013ರಲ್ಲಿ ರಾಜೂಗೌಡ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು.

2018ರಲ್ಲಿ ರಾಜೂಗೌಡರಿಂದ ಸೋಲು ಕಂಡರು. ಹೀಗೆ ರಾಜಕೀಯ ಏಳುಬೀಳು ಕಂಡಿರುವ ವೆಂಕಟಪ್ಪನಾಯಕ ಅವರಿಗೆ ಕ್ಷೇತ್ರದಲ್ಲಿ ನಂಬಿಕಸ್ತ ಪಡೆಯೇ ಇದೆ. ಕಾರ್ಯಕರ್ತರ ಬೆಂಬಲ, ನಿಷ್ಠೆ ಅವರನ್ನು ಪುಟಿದೇಳಿಸುತ್ತದೆ. ಇದುವರೆಗೆ 6 ಬಾರಿ ಚುನಾವಣೆ ಎದುರಿಸಿರುವ ಅವರು 3 ಬಾರಿ ಗೆದ್ದಿದ್ದರೆ, 3 ಬಾರಿ ಪರಾಭವಗೊಂಡಿದ್ದಾರೆ. ಒಂದು ಬಾರಿ ರಾಯಚೂರು ಲೋಕಸಭಾ ಕ್ಷೇತ್ರಕ್ಕೂ ಸ್ಪರ್ಧಿಸಿ ಸೋತಿದ್ದರು. ಈಗ 7ನೇ ಬಾರಿ ವಿಧಾನಸಭೆಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಸಿದೆ. ಕಾಂಗ್ರೆಸ್ ಪಕ್ಷಕ್ಕಿರುವ ಓಟ್ ಬ್ಯಾಂಕ್ ಮತ್ತು ಆಡಳಿತ ವಿರೋಧಿ ಮತಗಳ ನೆರವಿನಿಂದ ಜಯಗಳಿಸುವ ಆಕಾಂಕ್ಷೆಯಲ್ಲಿದ್ದಾರೆ.

ಸುದೀರ್ಘ ಕಾಲದಿಂದ ರಾಜಕೀಯದಲ್ಲಿರುವ ವೆಂಕಟಪ್ಪನಾಯಕ ಅವರಿಗೆ ಈಗ 68 ವರ್ಷ. ಇದು ತಮ್ಮ ಕೊನೆ ಚುನಾವಣೆ, ಮುಂದೆ ಸ್ಪರ್ಧಿಸುವುದಿಲ್ಲ ಎಂದು ರಾಜಾ ವೆಂಕಟಪ್ಪನಾಯಕ ನಿರ್ಧಾರ ಮಾಡಿದ್ದಾರೆ ಎನ್ನುತ್ತಾರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ.

ಎಲ್ಲ ಪ್ರಚಾರ ಸಭೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಿರುವ ವೆಂಕಟಪ್ಪನಾಯಕ ಮತ್ತು ಮುಖಂಡರು ಇದನ್ನೇ ರಾಜಕೀಯ ದಾಳವನ್ನಾಗಿ ಉಪಯೋಗಿಸಿ ಭಾವನಾತ್ಮಕವಾಗಿ ಮತ ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬುದು ವಿರೋಧ ಪಕ್ಷದವರ ಆರೋಪವಾಗಿದೆ.

ಕ್ಷೇತ್ರದಲ್ಲಿ ಗೆದ್ದವರು
1952; ಕೋಲೂರು ಮಲ್ಲಪ್ಪ
1957; ರಾಜಾ ಕುಮಾರನಾಯಕ
1962; ರಾಜಾ ಪಿಡ್ಡನಾಯಕ
1967; ರಾಜಾ ಪಿಡ್ಡನಾಯಕ
1972; ರಾಜಾ ಪಿಡ್ಡನಾಯಕ
1978; ರಾಜಾ ಕುಮಾರನಾಯಕ
1983; ರಾಜಾ ಮದನಗೋಪಾಲನಾಯಕ
1985; ರಾಜಾ ಮದನಗೋಪಾಲನಾಯಕ
1989; ರಾಜಾ ಮದನಗೋಪಾಲನಾಯಕ
1994; ರಾಜಾ ವೆಂಕಟಪ್ಪನಾಯಕ
1999; ರಾಜಾ ವೆಂಕಟಪ್ಪನಾಯಕ
2004; ರಾಜೂಗೌಡ
2008; ರಾಜೂಗೌಡ
2013; ರಾಜಾ ವೆಂಕಟಪ್ಪನಾಯಕ
2018; ರಾಜೂಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT