ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ; ಕಾಲುವೆಗೆ ಹರಿದ ನೀರು

Published 22 ನವೆಂಬರ್ 2023, 14:30 IST
Last Updated 22 ನವೆಂಬರ್ 2023, 14:30 IST
ಅಕ್ಷರ ಗಾತ್ರ

ಕೆಂಭಾವಿ: ಕಾಲುವೆಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ನೂರಾರು ರೈತರು ಪಟ್ಟಣದ ಗುತ್ತಿ ಬಸವಣ್ಣ ಏತ ನೀರಾವರಿ ಜಾಕ್‍ವೆಲ್ ಪ್ರದೇಶದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ಬೆನ್ನಲ್ಲೆ ಅಧಿಕಾರಿಗಳು ಕಾಲುವೆ ನೀರು ಹರಿಸಿದರು.

ಇದಕ್ಕೂ ಮುನ್ನ, ಯಾಳಗಿ, ವಂದಗನೂರ, ಹದನೂರ, ಚಿಂಚೋಳಿ ಸೇರಿದಂತೆ ಏತ ನೀರಾವರಿಯ ಕಾಲುವೆ ನೀರು ಬಳಸುವ ರೈತರು ಬುಧವಾರ ಬೆಳಿಗ್ಗೆ ಜಾಕ್‌ವೆಲ್‌ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನೂರಾರು ಎಕರೆ ಪ್ರದೇಶದಲ್ಲಿ ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ಮಳೆ ಕೊರತೆಯಾಗಿ ಬರ ಆವರಿಸಿದ ಹಿನ್ನೆಲೆಯಲ್ಲಿ ಈಗ ಬೆಳೆಗಳಿಗೆ ನೀರಿನ ಅಗತ್ಯವಿದೆ. ಏತ ನೀರಾವರಿ ಯೋಜನೆಯಲ್ಲಿ ಐದು ಬೃಹತ್ ಯಂತ್ರಗಳ ಮೂಲಕ ನೀರನ್ನು ಕಾಲುವೆಗೆ ಹರಿಬಿಡುವ ನಿಯಮವಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಲುವೆಗೆ ನೀರು ಸಂಪೂರ್ಣ ಸ್ಥಗಿತಗೊಂಡಿದೆ’ ಎಂದು ಪ್ರತಿಭಟನಾನಿರತ ರೈತರು ದೂರಿದರು.

‘ಸದ್ಯ ಮೆಣಸಿನಕಾಯಿ ಬೆಳೆಗೆ ನೀರು ಬೇಕಿದೆ. ಈ ಹಂತದಲ್ಲಿ ನೀರನ್ನು ಸ್ಥಗಿತಗೊಳಿಸಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಕೂಡಲೆ ನೀರು ಹರಿಸದಿದ್ದಲ್ಲಿ ಇಲಾಖೆಯ ಕಚೇರಿಗೆ ಮುಂದೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಬಾಲಕೃಷ್ಣ ರೈತರ ಸಮಸ್ಯೆ ಆಲಿಸಿದರು.

‘ಸದ್ಯ ಒಂದು ಯಂತ್ರದ ಮೂಲಕ ನೀರು ಹರಿಸಲಾಗುವುದು. ಹಂತ–ಹಂತವಾಗಿ ಐದು ಯಂತ್ರಗಳ ಮೂಲಕ ಕಾಲುವೆಗೆ ನೀರು ಹರಿ ಬಿಡಲಾಗುವುದು’ ಎಂದು ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ಸುಮಾರು ಐದಾರು ಗ್ರಾಮದ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT