ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: ಕ್ಯಾತ್ನಾಳಕ್ಕೆ ‘ಆರೋಗ್ಯ’ ದೂರ

ಆರೋಗ್ಯ ಸೇವೆಗಳಿಗೆ ಅರ್ಧ ಕಿ.ಮೀ ಬದಲು 12 ಕಿ.ಮೀ ಕ್ರಮಿಸುವ ಗ್ರಾಮಸ್ಥರು
Last Updated 7 ಸೆಪ್ಟೆಂಬರ್ 2020, 2:34 IST
ಅಕ್ಷರ ಗಾತ್ರ

ಸೈದಾಪುರ: ಪಟ್ಟಣಕ್ಕೆ ಕೇವಲ ಅರ್ಧ ಕಿ.ಮೀ ಹತ್ತಿರದಲ್ಲಿರುವ ಕ್ಯಾತ್ನಾಳ ಮತ್ತು ಇಂದಿರಾನಗರ ಗ್ರಾಮಗಳ ಜನರು ಅಧಿಕಾರಿಗಳ ಎಡವಟ್ಟಿನಿಂದ ಅರ್ಧ ಕಿ.ಮೀ ಅಂತರದಲ್ಲಿರುವ ಆಸ್ಪತ್ರೆಯನ್ನು ಬಿಟ್ಟು, ಸುಮಾರು 10-12 ಕಿ.ಮೀ ದೂರವಿರುವ ಮಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.

‘ಸಾರ್ವಜನಿಕರು ಹತ್ತಿರದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ, ಗರ್ಭಿಣಿ ಮತ್ತು ಬಾಣಂತಿಯರು ತಮ್ಮ ತಿಂಗಳ ತಪಾಸಣೆ ಮತ್ತು ವೈದ್ಯಕೀಯ ದಾಖಲೆಗಳನ್ನು ಪಡೆಯಲು ಮಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವ ಅನಿವಾರ್ಯ ಇದೆ. ಕೋವಿಡ್‌–19 ನಂತಹ ಸಂದಿಗ್ಧ ಪರಿಸ್ಥಿಯೂ ಇದಕ್ಕೆ ಹೊರತಾಗಿಲ್ಲ’ ಎಂದು ಕ್ಯಾತ್ನಾಳ
ಮತ್ತು ಇಂದಿರಾನಗರ ಜನರು ದೂರುತ್ತಾರೆ.

ಕ್ಯಾತ್ನಾಳ ಮತ್ತು ಇಂದಿರಾನಗರ ಜನರು ಹಲವು ವರ್ಷಗಳಿಂದ ಸೈದಾಪುರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು. ಒಂದು ವರ್ಷದಿಂದ ಮಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಈ ಎರಡು ಗ್ರಾಮಗಳ‌ನ್ನು ಸೇರಿಸಲಾಗಿದೆ. ಇದರಿಂದಾಗಿ ಸೈದಾಪುರ ಪಟ್ಟಣದ ರೈಲ್ವೆ ಹಳಿಯಿಂದ ಆಚೆ ಇರುವ ಗ್ರಾಮಗಳ ಜನ ಆರೋಗ್ಯ ಸಮಸ್ಯೆಗಳಿಗೆ ಮಲ್ಹಾರ ಪಿ.ಎಚ್.ಸಿಗೆ ಭೇಟಿ ನೀಡಬೇಕಾಗಿದೆ. ಅಲ್ಲದೇ, ಯಾವುದಾದರೂ ಮೂಲ ದಾಖಲೆಗಳು ಹಾಗೂ ವೈದ್ಯರ ಸಹಿ ಬೇಕಾದರೆ ಮಲ್ಹಾರಕ್ಕೆ ಭೇಟಿ ನೀಡಲೇಬೇಕು. ಕಾರಣ ಕೇಳಿದರೆ, ‘ಇದು ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ಆದೇಶ’ ಎನ್ನುತ್ತಾರೆ ಸೈದಾಪುರ ಸಮುದಾಯ ಆರೋಗ್ಯ ಕೇಂದ್ರದ ಎಎನ್ಎಂ ಯಶೋಧಾ ಅವರು.

‘ಹತ್ತಿರದಲ್ಲಿ ಆರೋಗ್ಯ ಸೇವೆ ಮತ್ತು ದಾಖಲೆಗಳ ಪರಿಶೀಲನೆ, ಸೇರ್ಪಡೆಗೆ ಅವಕಾಶ ಸಿಗದೆ ನಮ್ಮೂರಿನ ಜನ, ಹೆಣ್ಣುಮಕ್ಕಳು ಸಂಕಷ್ಟ ಅನುಭವಿಸುವಂತಾಗಿದೆ. ಅಧಿಕಾರಿಗಳು ಜನರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಭೀಮಣ್ಣಗೌಡ ಒತ್ತಾಯಿಸುತ್ತಾರೆ.

‘ಮಲ್ಹಾರಕ್ಕೆ ತೆರಳಲು ಸಮಯಕ್ಕೆ ಸರಿಯಾಗಿ ಸರ್ಕಾರಿ ಅಥವಾ ಖಾಸಗಿ ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದ ಗರ್ಭಿಣಿ, ಬಾಣಂತಿಯರು ಮಲ್ಹಾರಕ್ಕೆ ಹೋಗಿ ಬರಲು ಆಟೊ ಇಲ್ಲವೇ ಇನ್ನಿತರ ವಾಹನಗಳಿಗೆ ದುಪ್ಪಟ್ಟು ಬಾಡಿಗೆ ನೀಡಿ ಹೋಗುತ್ತಾರೆ. ಅಲ್ಲದೇ, ಮಲ್ಹಾರದಲ್ಲಿರುವುದು ಪ್ರಾಥಮಿಕ ಆರೋಗ್ಯ ಕೇಂದ್ರವಾದ್ದರಿಂದ ಅಲ್ಲಿ ಹೆಚ್ಚಿನ ವೈದ್ಯರು ಹಾಗೂ ಉಪಕರಣಗಳು ಇಲ್ಲ. ಇದರಿಂದ ಪುನಃ ಸೈದಾಪುರ, ರಾಯಚೂರು, ಯಾದಗಿರಿ ಜಿಲ್ಲಾ ಕೇಂದ್ರಗಳಿಗೆ ಶಿಫಾರಸ್ಸು ಮಾಡುತ್ತಾರೆ. ಈ ಓಡಾಟದ ಮಧ್ಯ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ. ಅನಾಹುತ ಸಂಭವಿಸಿದರೆ ಯಾರು ಹೊಣೆ?’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪ ಪ್ರಶ್ನಿಸುತ್ತಾರೆ.

‘ಕ್ಯಾತ್ನಾಳ ಮತ್ತು ಇಂದಿರಾನಗರ ಗ್ರಾಮಗಳ ನಿಜಪರಿಸ್ಥಿತಿಯನ್ನು ಅರಿತು ಸಂಬಂಧಪಟ್ಟ ತಾಲ್ಲೂಕು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಬೇಕು. ಈ ಮೊದಲಿನ ಆದೇಶವನ್ನು ಪರಿಶೀಲಿಸಿ ಪುನಃ ಸೈದಾಪುರ ಸಮುದಾಯ ಆರೋಗ್ಯ ಕೇಂದ್ರದ ಉಪ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ನೀಡುವಂತೆ ಆದೇಶ ಹೊರಡಿಸಬೇಕು’ ಎಂದು ಗ್ರಾಮಗಳ ಜನರು
ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT