ಗುರುವಾರ , ಜೂನ್ 30, 2022
24 °C
ಯಾದಗಿರಿ ನಗರಸಭೆಯಲ್ಲಿ ಅರ್ಧದಷ್ಟು ಹುದ್ದೆ ಖಾಲಿ; ಸ್ವಚ್ಛತೆಗೆ ಪೆಟ್ಟು

ಪೌರಕಾರ್ಮಿಕರ ಕೊರತೆ; ಸ್ವಚ್ಛ ಭಾರತ ಶ್ರೇಯಾಂಕಕ್ಕೆ ಹಿನ್ನಡೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಇಲ್ಲಿನ ನಗರಸಭೆಯಲ್ಲಿ ಮಂಜೂರಾದ ಪೌರಕಾರ್ಮಿಕರ ಅರ್ಧದಷ್ಟು ಹುದ್ದೆಗಳು ಖಾಲಿಯಿವೆ. ಇದರಿಂದಾಗಿ ಸ್ವಚ್ಛತೆ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಸ್ವಚ್ಛತಾ ಕಾರ್ಯ ಮಾಡುವವರು, ಪೌರಕಾರ್ಮಿಕರು, ಲೋಡರ್ಸ್‌ ಕೊರತೆ ತೀವ್ರವಾಗಿದೆ. ಕೆಲ ಪ್ರದೇಶಗಳಲ್ಲಂತೂ ಚರಂಡಿಯ ಹೂಳೆತ್ತಲು ಸಿಬ್ಬಂದಿಯೇ ಇಲ್ಲ.

ಒಂದೆಡೆ ನಗರ ಪ್ರದೇಶ ವಿಸ್ತರಣೆಯಾಗುತ್ತಿದ್ದರೆ, ಮತ್ತೊಂದೆಡೆ ಜನಸಂಖ್ಯೆ ಪ್ರಮಾಣವೂ ಹೆಚ್ಚತೊಡಗಿದೆ. ಪೌರಕಾರ್ಮಿಕರ ಹುದ್ದೆಗಳು ಭರ್ತಿಯಾಗದ ಕಾರಣ ಸ್ವಚ್ಛತಾ ಕಾರ್ಯ ನಿಯಮಿತವಾಗಿ ಆಗುತ್ತಿಲ್ಲ. ನಿಗದಿತ ಜನಸಂಖ್ಯೆ ಅನುಸಾರ ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ತ್ಯಾಜ್ಯಗಳ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ.

2011ರ ಜನಗಣತಿ ಆಧಾರದ ಮೇಲೆ ಪೌರಕಾರ್ಮಿಕರ ನೇಮಕಾತಿಯಾಗಿದ್ದು, ಕಳೆದ 11 ವರ್ಷಗಳ ಅವಧಿಯಲ್ಲಿ ಮಂಜೂರಾದ ಹುದ್ದೆಗಳ ಪುನಃ ನೇಮಕಾತಿಯಾಗಿಲ್ಲ. ಕಾರ್ಯ ಒತ್ತಡ ಹೆಚ್ಚಿದ್ದರೂ ಅದನ್ನು ಸರಿದೂಗಿಸಲು ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ.

ಸ್ವಚ್ಛ ಭಾರತ ಅಭಿಯಾನ, ಘನತ್ಯಾಜ್ಯ ವಸ್ತು ನಿರ್ವಹಣೆ, ಪ್ರಗತಿ ಸಾಧನೆ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರ್ದೇಶನಗಳ ಪಾಲನೆ ಕಷ್ಟವಾಗುತ್ತಿದೆ.

ಸದ್ಯ ನಗರಸಭೆಯಲ್ಲಿ 68 ಪೌರಕಾರ್ಮಿಕರಿದ್ದು, ಲೋಡರ್ಸ್‌ 1 ಹುದ್ದೆ ಮಾತ್ರ ಮಂಜೂರು ಆಗಿವೆ. ಜನಸಂಖ್ಯೆ ಆಧಾರದ ಮೇಲೆ 122 ಪೌರಕಾರ್ಮಿಕರ ನೇಮಕ ಆಗಬೇಕಿದೆ. ಆದರೆ, 54 ಹುದ್ದೆಗಳು ಖಾಲಿ ಇರುವುದರಿಂದ ಕೆಲವರ ಮೇಲೆ ಒತ್ತಡ ಬಿದ್ದಿದೆ. ಇದರಿಂದ ಕೆಲ ವಾರ್ಡ್‌ಗಳಲ್ಲಿ ಪೌರಕಾರ್ಮಿಕರು ತೆರಳಲು ತಿಂಗಳಾನುಗಟ್ಟಲೇ ಕಾಯಬೇಕು.

ಸ್ವಚ್ಛ ಭಾರತ ಅಭಿಯಾನಕ್ಕೆ ಹಿನ್ನಡೆ:
ನಗರದ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಆದರೆ, ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಸ್ವಚ್ಛ ಭಾರತ ಅಭಿಯಾನಕ್ಕೆ ಹಿನ್ನಡೆಯಾಗಿದೆ. ಮನೆ ಮನೆ ಕಸ ಸಂಗ್ರಹ, ಚರಂಡಿ ಹೂಳೆತ್ತುವುದು, ಹಸಿ ಮತ್ತು ಒಣ ತ್ಯಾಜ್ಯ ನಿರ್ವಹಣೆಗೂ ತೊಂದರೆಯಾಗಿದೆ.

ಕಸದ ವಾಹನ ಮನೆ ಮನೆಗೆ ಸರಿಯಾಗಿ ಬಾರದ ಕಾರಣ ಖಾಲಿ ನಿವೇಶನಗಳೇ ತ್ಯಾಜ್ಯ ಎಸೆಯುವ ತಾಣಗಳಾಗಿವೆ. ಖಾಲಿ ಜಾಗಗಳಲ್ಲಿ ತ್ಯಾಜ್ಯ ವಸ್ತುಗಳು ತುಂಬಿರುವುದೇ ಇದಕ್ಕೆ ಸಾಕ್ಷಿ.

‘ನಗರಸಭೆಯಲ್ಲಿ ಪೌರಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದಂತೆ ಈಚೆಗೆ ಕಲಬುರಗಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ವೆಂಕಟರೆಡ್ಡಿ ಗೌಡ ಮದ್ನಾಳ ನೇತೃತ್ವದಲ್ಲಿ ಮನವಿಪತ್ರ ಸಲ್ಲಿಸಲಾಗಿದೆ. ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ’ ಎಂದು ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ತಿಳಿಸಿದರು.

ನಗರಸಭೆ ಪೌರಕಾರ್ಮಿಕ ವಿವರ
ಹುದ್ದೆ;ಮಂಜೂರಾತಿ;ಖಾಲಿ
ಪೌರಕಾರ್ಮಿಕರು;122;68;54
ಲೋಡರ್ಸ್‌;16;01;15
ಕ್ಲೀನರ್ಸ್‌;04;00;04

ನಗರಸಭೆ ಗ್ರೇಡ್‌–2 ಸಿ ಮತ್ತು ಆರ್ ರೂಲ್ಸ್ ಪ್ರಕಾರ ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್ ನೇಮಕ ಮಾಡಿಕೊಳ್ಳಲು ಈಚೆಗೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ.
ಸುರೇಶ ಅಂಬಿಗೇರ, ನಗರಸಭೆ ಅಧ್ಯಕ್ಷ

ನಗರದಲ್ಲಿ ಪೌರಕಾರ್ಮಿಕರ ಕೊರತೆ ಇರುವ ಕಾರಣ ಎಲ್ಲೆಡೆ ಮಾಲಿನ್ಯ ಆವರಿಸಿದೆ. ಇದನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಿ, ಹುದ್ದೆಗಳನ್ನು ಭರ್ತಿ ಮಾಡಬೇಕು.
ಮಾಣಿಕರೆಡ್ಡಿ ಕುರಕುಂದಿ, ಕಾಂಗ್ರೆಸ್‌ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು