ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಪಾಳು ಬಿದ್ದ ಬಸ್ ತಂಗುದಾಣಗಳ ದುರಸ್ತಿ ಎಂದು?

ವಾಟ್ಕರ್ ನಾಮದೇವ
Published 7 ಮೇ 2024, 4:53 IST
Last Updated 7 ಮೇ 2024, 4:53 IST
ಅಕ್ಷರ ಗಾತ್ರ

ವಡಗೇರಾ: ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಗ್ರಾಮಗಳ ಮುಖ್ಯರಸ್ತೆಗಳಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಮಿನಿ ಬಸ್ ನಿಲ್ದಾಣಗಳು ಸಮರ್ಪಕ ನಿರ್ವಹಣೆ ಇಲ್ಲದೇ ಸಂಪೂರ್ಣವಾಗಿ ಪಾಳು ಬಿದ್ದು ನಿರುಪಯುಕ್ತವಾಗಿದೆ.

ತಾಲ್ಲೂಕಿನ ಗಡ್ಡೆಸೂಗುರ, ಕೊಂಕಲ್, ಹಾಲಗೇರಾ, ತುಮಕೂರ, ರೊಟ್ನಡಗಿ, ಕದರಾಪುರ, ತೇಕರಾಳ, ಕುರಕುಂದಾ ಹಾಗೂ ಇನ್ನೂ ಅನೇಕ ಗ್ರಾಮಗಳ ಗೇಟ್ ಹತ್ತಿರ ಸುಮಾರು ವರ್ಷಗಳ ಹಿಂದೆ ನಿರ್ಮಿಸಿರುವ ಬಸ್ ತಂಗುದಾಣ ಪಾಳು ಬಿದ್ದಿವೆ.

ಪ್ರಯಾಣಿಕರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಈ ಬಸ್ ತಂಗುದಾಣಗಳ ಸಿಮೆಂಟ್ ಹಾಗೂ ಕಲ್ಲುಗಳು ಅಲ್ಲಲ್ಲಿ ಕಿತ್ತುಹೋಗಿದೆ. ಅಲ್ಲದೇ ಚಾವಣಿ ಕೂಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿರುವುದರಿಂದ ಪ್ರಯಾಣಿಕರು, ಸಾರ್ವಜನಿಕರು ಒಳಗಡೆ ಕುಳಿತುಕೊಳ್ಳಲು ಭಯ ಪಡುವಂತಾಗಿದೆ.

ಪ್ರಯಾಣಿಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿಯೊಂದು ಗ್ರಾಮದ ಗೇಟ್ ಹತ್ತಿರ ಒಂದೊಂದು ಮಿನಿ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿದೆ. ಆದರೆ ಈ ತಂಗುದಾಣಗಳು ಸರಿಯಾದ ನಿರ್ವಹಣೆ ಇಲ್ಲದೇ ಇಂದು ಅವಸಾನದತ್ತ ಸಾಗಿವೆ. ಶಿಥಿಲಾವಸ್ಥೆಯ ಬಸ್‌ ನಿಲ್ದಾಣಗಳ ಒಳ ಹೋಗಲು ಭಯಪಡುವ ಪ್ರಯಾಣಿಕರು ಬಿಸಿಲಿನಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಹಿಂದೆ ಮಿನಿ ತಂಗುದಾಣಗಳ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯಿಂದ ಮಾಡಲಾಗುತ್ತಿತ್ತು. ಆದರೆ ಈಗ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಇದರ ಹೊಣೆ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದು ಪ್ರಯಾಣಿಕರು ಬಸ್ ತಂಗುದಾಣವಿಲ್ಲದೆ ಪರದಾಡುವಂತಾಗಿದೆ. ಸಂಬಂಧಿಸಿದವರು ತಂಗುದಾಣಗಳಿಗೆ ಕಾಯಕಲ್ಪ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮೀಣ ಬಸ್ ತಂಗುದಾಣಗಳ ನಿರ್ವಹಣೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಇವುಗಳ ನಿರ್ವಹಣೆಗಾಗಿ ಸರ್ಕಾರದಿಂದ ಅನುದಾನ ಬಂದರೆ ದುರಸ್ತಿ ಕಾರ್ಯ ಮಾಡಲಾಗುವುದು.
ಖತಿಬಸಾಬ್ ಜೆಇ ಲೋಕೋಪಯೋಗಿ ಇಲಾಖೆ
ಪ್ರಯಾಣಿಕರಿಗೆ ಪ್ರಖರ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಈ ಮಿನಿ ಬಸ್ ತಂಗುದಾಣಗಳು ಬಹಳ ಸಹಕಾರಿಯಾಗಿದ್ದವು. ಆದರೆ ಅವು ಶಿಥಿಲಾವಸ್ಥೆ ತಲುಪಿರುವುದರಿಂದ ಬಹಳ ತೊಂದರೆಯಾಗಿದೆ. ಇಲಾಖೆ ಅಧಿಕಾರಿಗಳು ದುರಸ್ತಿಗೆ ಮುಂದಾಗಬೇಕು
ಯಂಕಣ್ಣ ಬಸಂತಪೂರ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT