ಶನಿವಾರ, ಮೇ 21, 2022
23 °C
ಆಸ್ಪತ್ರೆಗಳು, ಆಮ್ಲಜನಕ ಘಟಕಗಳು ಸಿದ್ಧ, ವೈದ್ಯರ ಕೊರತೆಯೇ ಸವಾಲು

ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್‌ ಎದುರಿಸಲು ತಜ್ಞ ವೈದ್ಯರ ಕೊರತೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆ ತಡೆಗಟ್ಟಲು ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಸಿದ್ಧವಾಗಿವೆ. ಆದರೆ, ತಜ್ಞ ವೈದ್ಯರ ಕೊರತೆ ಕಾಡುತ್ತಿದ್ದು, ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

ಕೋವಿಡ್‌ ಸೋಂಕಿತರಿಗಾಗಿ ಒಂದು ಜಿಲ್ಲಾಸ್ಪತ್ರೆ, ಎರಡು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಆರು ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಅಲ್ಲಿ ಆಮ್ಲಜನಕ ಸಹಿತ ಹಾಸಿಗೆ, ಆಮ್ಲಜನಕ ಪೂರೈಸುವ ಯಂತ್ರಗಳು, ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ಆಯಾ ತಾಲ್ಲೂಕು ಆಡಳಿತದಿಂದ ಸಿದ್ದ ಮಾಡಿಕೊಟ್ಟುಕೊಳ್ಳಲಾಗಿದೆ. ಆದರೆ, ಅದಕ್ಕೆ ತಕ್ಕಂತೆ ವೈದ್ಯರ ಕೊರತೆಯೇ ಸವಾಲಾಗಿದೆ.

ನಗರ ಹೊರವಲಯದ ಮುದ್ನಾಳ ಸಮೀಪದ ನೂತನ ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 320 ಬೆಡ್‌ಗಳನ್ನು ಕೋವಿಡ್‌ ಸೋಂಕಿತರಿಗಾಗಿ ಮೀಸಲಿರಿಸಲಾಗಿದೆ. ಇದರಲ್ಲಿ 280 ಆಮ್ಲಜನಕ ಬೆಡ್‌ಗಳಿದ್ದು, 40 ಐಸಿಯು ಬೆಡ್‌ಗಳನ್ನಾಗಿ ಮಾಡಲಾಗಿದೆ. 40 ಐಸಿಯು ಬೆಡ್‌ನಲ್ಲಿ 30 ಬೆಡ್‌ಗಳಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. 20 ಬೆಡ್‌ ಮಕ್ಕಳ ವಾರ್ಡ್‌ ಆಗಿ ಪರಿವರ್ತಿಸಲಾಗಿದೆ. 10 ಮಕ್ಕಳ ಐಸಿಯು ಬೆಡ್‌ಗಾಗಿ ಮೀಸಲಿಡಲಾಗಿದೆ. 20 ಐಸೋಲೆಷನ್‌ಗಾಗಿ, 235 ಸಾಮಾನ್ಯ ಬೆಡ್‌ಗಳಿವೆ ಎಂದು ಜಿಲ್ಲಾಸ್ಪತ್ರೆಯ ಮೂಲಗಳು ತಿಳಿಸಿವೆ.

6 ಕೆಎಲ್‌ ಆಮ್ಲಜನಕ ಸಂಗ್ರಹಣ ಘಟಕ, 1000 ಎಲ್‌ಪಿಎಂ ಉತ್ಪಾದನಾ ಘಟಕ, 155 ಜಂಬೋ ಸಿಲಿಂಡರ್‌, 235 ಆಮ್ಲಜನಕ ಕಾನ್ಸನ್‌ಟ್ರೇಟರ್‌, 5 ಲೀಟರ್‌ ಸಾಮಾರ್ಥ್ಯದ 117 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ಸಿದ್ಧಮಾಡಿಕೊಳ್ಳಲಾಗಿದೆ.

ಆಸ್ಪತ್ರೆ ಮತ್ತು ವೈದ್ಯಕೀಯ ಸಮಾಗ್ರಿ ಸಿದ್ಧವಾಗಿದ್ದರೂ ಇವುಗಳನ್ನು ಆಪರೇಟರ್‌ ಮಾಡಲು ಮತ್ತೊಂದು ಜಿಲ್ಲೆಯವರ ಮೇಲೆ ಅವಲಂಬಿವಾಗುವುದು ತಪ್ಪಿಲ್ಲ.

24 ತಜ್ಞ ವೈದ್ಯರು ಅವಶ್ಯ: ಜಿಲ್ಲೆಯಲ್ಲಿ 24 ತಜ್ಞ ವೈದ್ಯರು ಬೇಕಾಗಿದ್ದಾರೆ. ಇದರಿಂದ ಹಲವಾರು ಆಸ್ಪತ್ರೆಗಳಲ್ಲಿ ಕೇವಲ ಎಂಬಿಬಿಎಸ್‌ ವೈದ್ಯರಿಂದಲೇ ನಡೆಯುತ್ತಿವೆ. ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಲ್ಲಿ ತಜ್ಞ ವೈದ್ಯರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ನಂತರ ಅವರು ಜಿಲ್ಲೆ ಬಿಟ್ಟು ಹೋಗಿದ್ದರು. ಈಗ ಮತ್ತೆ ತಜ್ಞ ವೈದ್ಯರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇನ್ನೂ ಜಿಲ್ಲಾಸ್ಪತ್ರೆಗೆ 5 ಫಿಜಿಷಿಯನ್‌, 5 ಅರವಳಿಕೆ ತಜ್ಞರು, 10 ಎಂಬಿಬಿಎಸ್‌ ವೈದ್ಯರು, ಮೂರು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ 30 ವೈದ್ಯಕೀಯ ಸಿಬ್ಬಂದಿ ಅವಶ್ಯವಿದೆ. ಆದರೂ ಇಲ್ಲಿಯವರೆಗೆ ಈ ಹುದ್ದೆಗಳು ಭರ್ತಿಯಾಗಿಲ್ಲ.

ಐಸಿಯು ಸ್ಟಾಫ್‌ ನರ್ಸ್‌ ಕೊರತೆ: ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಐಸಿಯು ಬೆಡ್‌ ಸಿದ್ಧ ಮಾಡಲಾಗಿದೆ. ಆದರೆ, ನುರಿತ ಐಸಿಯು ಸ್ಟಾಫ್‌ ನರ್ಸ್‌ ಕೊರತೆ ಕಾಡುತ್ತಿದೆ. ಹೀಗಾಗಿ ಈಗ ಲಭ್ಯವಿದ್ದವರಿಗೆ ತರಬೇತಿ ನೀಡಿ ಅವರನ್ನು ಅಣಿಗೊಳಿಸಲಾಗುತ್ತಿದೆ. ಐಸಿಯು ಬೆಡ್‌ಗಳಿಗೆ ತಕ್ಕಂತೆ 30 ಸ್ಟಾಫ್‌ ನರ್ಸ್ ಬೇಕಾಗಿದ್ದಾರೆ.

20 ಹಾಸಿಗೆಯ ಕೋವಿಡ್‌ ಆರೈಕೆ ಕೇಂದ್ರ: ಗುರುಮಠಕಲ್ ತಾಲ್ಲೂಕಿಗೆ ಸಂಬಂಧಿಸಿದಂತೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಮ್ಲಜನಕ ವ್ಯವಸ್ಥೆ ಇರುವ 20 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.‍ ಕೋವಿಡ್ ರೂಪಾಂತರಿ ಓಮೈಕ್ರಾನ್‌ ಎದುರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಆಸ್ಪತ್ರೆಯಲ್ಲಿ ಆಮ್ಲಜನಕದ 12 ಜಂಬೋ ಸಿಲಿಂಡರ್ ಲಭ್ಯವಿದ್ದು, ಆಮ್ಲಜನಕ ಉತ್ಪಾದನಾ ಸಾಮರ್ಥ್ಯದ  ಘಟಕ ಸ್ಥಾಪಿಸಲಾಗಿದೆ.

‘ಈಗಾಗಲೇ ಆಸ್ಪತ್ರೆಯಲ್ಲಿರುವ ವೈದ್ಯರು ಸೇರಿದಂತೆ ಸ್ಟಾಫ್‌ ನರ್ಸ್‌ ಕೋವಿಡ್‌ ಸೇವೆ ಮಾಡಲು ಸಿದ್ದರಿದ್ದು, ಪ್ರಕರಣಗಳು ಹೆಚ್ಚಿದರೆ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ ಮಾಹಿತಿ ನೀಡಿದರು.

ಇನ್ನೂ ಮೊದಲ ಕೋವಿಡ್‌ ಅಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಹಂತ ಹಂತವಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇನ್ನೂ ನೀಗಿಲ್ಲ.

***

ಭರ್ತಿಯಾಗದ ವೈದ್ಯಕೀಯ ಕಾಲೇಜು ಸೀಟು

ಯಾದಗಿರಿ: ಯಾದಗಿರಿ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಯಿಮ್ಸ್)ಗೆ ವೈದ್ಯಕೀಯ ಸಿಬ್ಬಂದಿ ಭರ್ತಿಯಾಗದ ಕಾರಣ ತಜ್ಞ ವೈದ್ಯರ ಕೊರತೆ ಇದೆ.

ವೈದ್ಯಕೀಯ ಕಾಲೇಜಿಗೆ 87 ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಿದೆ. ಯಾದಗಿರಿ ಜಿಲ್ಲೆಯವರೇ ಯಿಮ್ಸ್‌ಗೆ ಬರಲು ಒಪ್ಪುತ್ತಿಲ್ಲ. ಇದರಿಂದ ಬೇರೆ ಜಿಲ್ಲೆಗಳವರು ಬರುವುದು ಸ್ಪಲ್ಪ ಕಷ್ಟವಾಗಿದೆ ಎಂದು ವೈದ್ಯರ ಅಭಿಪ್ರಾಯವಾಗಿದೆ.

***

3ನೇ ಅಲೆ ಎದುರಿಸಲು ಸನ್ನದ್ಧ

ಶಹಾಪುರ: ಕೋವಿಡ್ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಆರೋಗ್ಯ ಇಲಾಖೆಯ ಸಕಲ ವ್ಯವಸ್ಥೆ ಹಾಗೂ ಸಿದ್ದತೆ ಮಾಡಿಕೊಂಡಿದೆ.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆಯ ಕೋವಿಡ್ ಕೇಂದ್ರ ಸ್ಥಾಪಿಸಿದೆ. ಆಮ್ಲಜನಕದ ವ್ಯವಸ್ಥೆ, 25 ವೆಂಟಿಲೇಟರ್, 330 ಸಾಮರ್ಥ್ಯದ ಆಮ್ಲಜನಕ ಘಟಕ, 182 ಆಮ್ಲಜನಕ ಸಿಲಿಂಡರ್, 11 ತಜ್ಞ ವೈದ್ಯರು ಹಾಗೂ 35 ಸಿಬ್ಬಂದಿ ಇದ್ದಾರೆ. ಈಗಾಗಲೇ ಸಿಬ್ಬಂದಿ ಹಾಗೂ ವೈದ್ಯರಿಗೆ ತರಬೇತಿ ನೀಡಲಾಗಿದೆ. ಎರಡೂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ನಗರದ ಸರ್ಕಾರಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮಕ್ಕಳಿಗಾಗಿ ಪ್ರತ್ಯೇಕವಾದ 8 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಆಂಬುಲೆನ್ಸ್ ವ್ಯವಸ್ಥೆ, ಔಷಧಿ ಸಂಗ್ರಹವಿದೆ. ಒಳ ರೋಗಿಗಳ ಸೇರ್ಪಡೆಗೆ ಅವಕಾಶ ನೀಡಿಲ್ಲ. ತಾಲ್ಲೂಕಿನಲ್ಲಿ ಪ್ರತಿದಿನ ಒಂದೆರೆಡು ಪ್ರಕರಣಗಳು ವರದಿಯಾಗುತ್ತಿದ್ದು, ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಗರಸಭೆಯ ಆಶ್ರಯದಲ್ಲಿ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕ ಇನ್ನೂ ಆರಂಭವಾಗಿಲ್ಲ. ಸಮರ್ಪಕವಾಗಿ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಔಷಧಿಯ ಕೊರತೆ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆ ಇದೆ ಎಂದು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಸರಿಯಾದ ಮಾಹಿತಿ ನೀಡುತ್ತಿಲ್ಲ’ ಎಂದು ನಗರದ ಜನರ ಆರೋಪವಾಗಿದೆ.

***

ಕೋವಿಡ್ ಎದುರಿಸಲು ಸಿದ್ಧತೆ

ಸುರಪುರ: ಕೋವಿಡ್ 3ನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತ ಸನ್ನದ್ಧಗೊಂಡಿದೆ. 10 ವೆಂಟಿಲೇಟರ್ ಬೆಡ್‌ಗಳು ಕಾರ್ಯರೂಪದಲ್ಲಿ ಇವೆ. ಇನ್ನೂ 19 ಒಂದು ವಾರದಲ್ಲಿ ಸಜ್ಜುಗೊಳ್ಳಲಿವೆ.

ಸುರಪುರ ಆಸ್ಪತ್ರೆಯಲ್ಲಿ-100, ನಗರ ಆರೋಗ್ಯ ಕೇಂದ್ರ-50, ಹುಣಸಗಿ-50, ಕೆಂಭಾವಿ-50 ಮತ್ತು ಕೊಡೇಕಲ್-50 ಸೇರಿ 300 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ಇದೆ. ತುರ್ತು ಸಂದರ್ಭದಲ್ಲಿ 600 ಆಮ್ಲಜನಕ ಹಾಸಿಗೆಗಳನ್ನು ಸಿದ್ಧತೆ ಮಾಡಿಸಲಾಗಿದೆ. 70 ಜಂಬೋ ಮತ್ತು 50 ಸಣ್ಣ ಆಮ್ಲಜನಕ ಸಿಲಿಂಡರ್‌ಗಳಿವೆ.

100 ಎಲ್‌ಪಿಎಂ ಸಾಮಾರ್ಥ್ಯದ ಆಮ್ಲಜನಕ ಘಟಕ ಈಗಾಗಲೇ ಕಾರ್ಯಾರಂಭವಾಗಿದ್ದು, ಇನ್ನೂ 500 ಎಲ್‌ಪಿಎಂ ಆಮ್ಲಜನಕ ಉತ್ಪಾದನಾ ಘಟಕ ಶೀಘ್ರವೇ ಪ್ರಾರಂಭವಾಗಲಿದೆ.

ಮಕ್ಕಳ ಚಿಕಿತ್ಸಾ ಘಟಕ ಸನ್ನದ್ಧವಾಗಿದೆ. 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಎಲ್ಲ ಕಡೆ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ವೈದ್ಯರ ಮತ್ತು ಸಿಬ್ಬಂದಿ ಕೊರತೆ ಇಲ್ಲ. ಎಂ.ಡಿ. ಜನರಲ್ ಮೆಡಿಸನ್ ವೈದ್ಯರ ಅಗತ್ಯವಿದೆ.

ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಒಟ್ಟು 39 ಜನರು ಸಾವನ್ನಪ್ಪಿದ್ದರು. ಈಗ ಪ್ರತಿ ದಿನ 350 ರಿಂದ 400 ವರೆಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ.

***

ತಜ್ಞ ವೈದ್ಯರಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, 12 ಜನ ಬಂದಿದ್ದು, ಅವರಿಗೆ ತರಬೇತಿ ನೀಡಲಾಗುತ್ತಿದೆ. ಸಂದರ್ಶನಕ್ಕೆ ಕರೆದರೂ ತಜ್ಞ ವೈದ್ಯರು ಬರುತ್ತಿಲ್ಲ

ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

***

ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಆದರೂ ಕೋವಿಡ್‌ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ

ಡಾ.ಇಂದುಮತಿ ಕಾಮಶೆಟ್ಟಿ ಡಿಎಚ್‌ಒ

***

ನೂತನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗಾಗಿ ವಿವಿಧ ಹಾಸಿಗೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ. ಆದರೆ, ಸಿಬ್ಬಂದಿ ಕೊರತೆ ಇದೆ

ಡಾ.ನೀಲಮ್ಮ, ಸ್ಥಾನಿಕ ವೈದ್ಯಾಧಿಕಾರಿ, ಕೋವಿಡ್‌ ಆಸ್ಪತ್ರೆ

***

ಸ್ಥಳೀಯ ವೈದ್ಯರು ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುವ ಕೆಲಸವನ್ನು ಹೆಚ್ಚು ಮಾಡುತ್ತಾರೆ. ಕೋವಿಡ್‌ ತಡೆಗಟ್ಟಲು ವೈದ್ಯರ ಜತೆಗೆ ಸೂಕ್ತ ಔಷಧಿ ಸಿದ್ಧ ಮಾಡಿಕೊಳ್ಳಬೇಕು

ಮಾಣಿಕರೆಡ್ಡಿ ಕುರಕುಂದಿ, ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

***

ಕೋವಿಡ್ 3ನೇ ಅಲೆ ಎದುರಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ. ಆರೋಗ್ಯ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ

ರಾಜೂಗೌಡ, ಸುರಪುರ ಶಾಸಕ

***

ಕೋವಿಡ್ ಎರಡೂ ಅಲೆಗಳನ್ನು ಎದುರಿಸಿದ ಅನುಭವದಲ್ಲಿ ಕೊರತೆಯಾಗದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಸಕರು ಮತ್ತು ಜಿಲ್ಲಾಡಳಿತ ಉತ್ತಮವಾಗಿ ಸ್ಪಂದಿಸಿದ್ದಾರೆ

ಡಾ. ರಾಜಾ ವೆಂಕಪ್ಪನಾಯಕ, ಟಿಎಚ್‌ಒ ಸುರಪುರ

***

ಕೋವಿಡ್ 3ನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ತಜ್ಞ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಔಷಧಿ ಇನ್ನಿತರ ಸಾಮಗ್ರಿಗಳ ಕೊರತೆ ಇಲ್ಲ

ಡಾ.ಮಲ್ಲಪ್ಪ ಕಣಜಿಗಿಕರ್, ಶಹಾಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ

**** 

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು