ಶನಿವಾರ, ಮೇ 15, 2021
25 °C
ಲಾಕ್‍ಡೌನ್ ಪರಿಣಾಮ: ನಗರಕ್ಕೆ ಸುಳಿಯದ ಜನರು

ಭಣಗುಡುತ್ತಿರುವ ಸುರಪುರದ ಗಾಂಧಿವೃತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ:  ನಗರದ ಹೃದಯಭಾಗವಾದ ಗಾಂಧಿವೃತ್ತ ಸದಾ ಜನಜಂಗುಳಿಯಿಂದ ತುಂಬಿರುತ್ತಿತ್ತು. ವಾಹನ ಸಂಚಾರವೂ ದಟ್ಟವಾಗಿರುತ್ತಿತ್ತು. ಪೊಲೀಸರು ಜನರನ್ನು ಮತ್ತು ಸಂಚಾರವನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು.

ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್‍ಡೌನ್ ಹೇರಿದ ಮೇಲೆ ಗಾಂಧಿವೃತ್ತ ಬಿಕೋ ಎನ್ನುತ್ತಿದೆ. ಅದರಲ್ಲೂ ಬೆಳಿಗ್ಗೆ 10 ಗಂಟೆಯ ನಂತರ ಸ್ಮಶಾನ ಮೌನ ಆವರಿಸಿ ಬಿಡುತ್ತದೆ. ಗಾಂಧಿವೃತ್ತ ವಿವಿಧ ಚಟುವಟಿಕೆಗಳ ಸ್ಥಳವಾಗಿತ್ತು. ವೃತ್ತದ ಐದು ಕಡೆ ಮಳಿಗೆಗಳು ತೆರೆದಿರುತ್ತಿದ್ದವು. ಮಳಿಗೆಗಳ ಮುಂದೆ ತಳ್ಳುಗಾಡಿಗಳು, ಅಕ್ಕಪಕ್ಕ ತರಕಾರಿ, ಹಣ್ಣು ಮಾರಾಟ ನಡೆಯುತ್ತಿತ್ತು. ನಗರದ ಎಲ್ಲೆಡೆ ಈ ವೃತ್ತವೇ ಸಂಪರ್ಕ ಕಲ್ಪಿಸುವುದರಿಂದ ಜನಜಂಗುಳಿ ಇರುತ್ತಿತ್ತು.

ದಿನಾಲೂ ಒಂದಿಲ್ಲೊಂದು ಪ್ರತಿಭಟನೆ, ಮುಷ್ಕರ, ವಿವಿಧ ಕಾರ್ಯಕ್ರಮಗಳು ವೃತ್ತದಲ್ಲಿ ನಡೆಯುತ್ತಿದ್ದವು. ಸರ್ಕಾರಿ ಯೋಜನೆಯ ಜಾಗೃತಿ ಮೂಡಿಸುವ ಸಮಾರಂಭಗಳು ಅಯೋಜನೆಯಾಗುತ್ತಿದ್ದವು. ಸಾರಿಗೆ ಬಸ್‍ಗಳು ಇದೇ ವೃತದ ಮೂಲಕ ಹಾದು ಹೋಗುತ್ತಿದ್ದವು. ಬಸ್‍ನಿಲ್ದಾಣ ಅನತಿ ದೂರದಲ್ಲಿರುವುದರಿಂದ, ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು, ಶಾಲಾ, ಕಾಲೇಜುಗಳು ಇದೇ ಮಾರ್ಗದ ಮೂಲಕವೇ ಹೋಗಬೇಕು. ಜನರು ತಮ್ಮ ಕೆಲಸ, ಕಾರ್ಯಗಳಿಗೆ ಗೆಳೆಯರಿಗೆ, ಇತರರಿಗೆ ಕಾಯಲು ಇದೇ ವೃತ್ತ ಆರಿಸಿಕೊಳ್ಳುತ್ತಿದ್ದರು.

ಸದಾ ಪೊಲೀಸರ ಜಂಜಾಟ, ವಾಹನಗಳ ದಟ್ಟಣೆ, ಬಿಡಾಡಿ ದನಗಳ ಹಾವಳಿ ಗಾಂಧಿವೃತ್ತವನ್ನು ದಿನದ 24 ಗಂಟೆಯೂ ಲವಲವಿಕೆಯಿಂದ ಇರುವಂತೆ ಮಾಡುತ್ತಿದ್ದವು.ಜೊಂದು ರೀತಿಯಲ್ಲಿ ಗಾಂಧಿವೃತ್ತ ಎಲ್ಲರ ಹಾಟ್‍ಸ್ಪಾಟ್ ಆಗಿತ್ತು. ಈಗ ಈ ವೈಭವ ಮಸುಕಾಗಿದೆ. ಜನರು 10 ಗಂಟೆಯ ನಂತರ ಈ ಸ್ಥಳಕ್ಕೆ ಕಾಲಿಟ್ಟರೆ ಪೊಲೀಸರ ಬೆತ್ತದ ರುಚಿ ತಿನ್ನುವಂತಾಗಿದೆ. ವಾಹನಗಳ ತಿರುಗಾಟ ನಿಂತು ಬಿಟ್ಟಿದೆ. ಮಳಿಗೆಗಳು ಬೆಳಿಗ್ಗೆ 10 ಗಂಟೆಯ ನಂತರ ಬಂದ್ ಆಗಿ ಬಿಡುತ್ತವೆ.

ವಾಣಿಜ್ಯ ಚಟುವಟಿಕೆಗಳ ಆಶ್ರಯ ತಾಣವೂ ಆಗಿದ್ದ ವೃತ್ತ ಈಗ ಭಣಗುಡುತ್ತಿದೆ. ಕೊರೊನಾ ಸೋಂಕು ತೀವ್ರವಾಗಿ ಹರಡಿ ಈ ಸ್ಥಿತಿಗೆ ಕಾರಣವಾಗಿದೆ. ಜನ ಸುರಕ್ಷಿತ ಅಂತರ ಮರೆತಿರುವುದು, ಮಾಸ್ಕ್ ಹಾಕದಿರುವುದು, ಕೋವಿಡ್ ನಿಯಮಗಳನ್ನು ಪಾಲನೆ ಮಾಡದಿರುವುದಕ್ಕೆ ಈ ಪರಿಸ್ಥಿತಿ ಬಂದೊದಗಿದೆ.

ನಗರದ ಗಾಂಧಿವೃತ್ತ ಮತ್ತೆ ತನ್ನ ಗತವೈಭಕ್ಕೆ ಮರಳ ಬೇಕಾದರೆ ಜನರು ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಈ ಮೂಲಕ ಸೋಂಕು ನಿಯಂತ್ರಣಕ್ಕೆ ಬಂದು ಲಾಕ್‍ಡೌನ್ ತೆರವುಗೊಳ್ಳುತ್ತದೆ. ಮತ್ತೆ ಚಟುವಟಿಕೆಗಳು ಗರಿಗೆದರುತ್ತವೆ ಎನ್ನುತ್ತಾರೆ ಅಧಿಕಾರಿಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.