ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲ: ಮಾರುಕಟ್ಟೆ, ರಸ್ತೆಗಳಲ್ಲಿ ಜನಜಂಗುಳಿ

ಕೋವಿಡ್ ಅನ್‌ಲಾಕ್; ಹೆಚ್ಚಿದ ಜನ ಸಂಚಾರ, ಮಾಸ್ಕ್‌, ಇಲ್ಲ, ಅಂತರ ಮರೆತ ಜನ
Last Updated 14 ಜೂನ್ 2021, 17:18 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರದಿಂದ ಕೋವಿಡ್ ಅನ್‌ಲಾಕ್ ಮಾಡಿದ್ದು, ಮಾರುಕಟ್ಟೆ, ರಸ್ತೆಯಲ್ಲಿ ಜನಜಂಗುಳಿ ಇತ್ತು.

ಸೋಮವಾರದಿಂದ ಲಾಕ್‍ಡೌನ್ ಸಡಿಲಗೊಳಿಸಿದ್ದರಿಂದ ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಜನ ಜಂಗುಳಿಯಿಂದ ತುಂಬಿದ್ದವು.

ಒಂದೂವರೆ ತಿಂಗಳಿಗಿಂತ ಹೆಚ್ಚು ದಿನ ಲಾಕ್‌ಡೌನ್‌, ಸಂಪೂರ್ಣ ಲಾಕ್‌ಡೌನ್‌ ಮಾಡಿದ್ದರಿಂದ ಹೆಚ್ಚಿನ ವಾಹನಗಳು ರಸ್ತೆಗೆ ಇಳಿದಿರಲಿಲ್ಲ. ಸಡಿಲಿಕೆ ಮಾಡಿದ್ದರಿಂದ ಗ್ರಾಮೀಣ ಭಾಗದಿಂದಲೂ ಹೆಚ್ಚಿನ ಜನ ನಗರ ಪ್ರದೇಶಕ್ಕೆ ಬಂದಿದ್ದರು.

ನಗರದ ಸುಭಾಷ ವೃತ್ತ, ಶಾಸ್ತ್ರಿ ವೃತ್ತ, ಗಾಂಧಿ ವೃತ್ತ, ಗಂಜ್‌ ವೃತ್ತ, ರೈಲ್ವೆ ಸ್ಟೇಷನ್‌ ಮಾರುಕಟ್ಟೆ, ಹತ್ತಿಕುಣಿ ಕ್ರಾಸ್‌, ಹೊಸಳ್ಳಿ ಕ್ರಾಸ್‌ ಸೇರಿದಂತೆ ಹೊಸ, ಹಳೆ ಬಸ್‌ ನಿಲ್ದಾಣ ಸಮೀಪ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಟ್ಯಾಕ್ಸಿ, ಆಟೊಗಳಲ್ಲಿ ಕೇವಲ ಇಬ್ಬರಿಗೆ ಮಾತ್ರ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ, ನಾಲ್ಕೈದು ಜನ ಪ್ರಯಾಣ ಮಾಡುವುದು ಸಾಮಾನ್ಯವಾಗಿತ್ತು.

ಅಂತರವೂ ಇಲ್ಲ: ಖರೀದಿಗೆ ಮಾರುಕಟ್ಟೆಗೆ ಬಂದಿದ್ದ ಜನ ಮಾಸ್ಕ್‌ ಹಾಕಿಕೊಳ್ಳದೇ ರಾಜಾರೋಷವಾಗಿ ಸಂಚಾರ ಮಾಡುವುದು ಕಂಡು ಬಂತು. ಸಂಪೂರ್ಣ ಲಾಕ್‌ಡೌನ್‌ ವೇಳೆ ಮಾಸ್ಕ್‌ ಧರಿಸದ ಪ್ರತಿಯೊಬ್ಬರಿಂದ ₹100 ವಸೂಲಿ ಮಾಡಲಾಗುತ್ತಿತ್ತು. ಆದರೂ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಕರವಸ್ತ್ರವೇ ಮಾಸ್ಕ್‌ನಂತೆ ಮುಖಕ್ಕೆ ಕಟ್ಟಿಕೊಂಡಿರುವುದು ಎಲ್ಲೆಡೆ ಕಂಡು ಬಂತು. ಇನ್ನೂ ಗ್ರಾಮೀಣ ಭಾಗದಿಂದ ಬಂದವರಂತೂ ಮಾಸ್ಕ್‌ ಬಗ್ಗೆ ಅರಿವೇ ಇಲ್ಲದಂತೆ ಮಾರುಕಟ್ಟೆ ತುಂಬಾ ಓಡಾಟ ನಡೆಸಿದ್ದರು.

ಬ್ಯಾಂಕ್‌ಗಳಲ್ಲಿಯೂ ನೂಕುನುಗ್ಗಲು: ಬ್ಯಾಂಕ್‌ಗಳಲ್ಲಿಯೂ ಹಣ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರು. ಕೆಲಕಡೆ ಅಂತರ ಮರೆತು ಬ್ಯಾಂಕ್‌ಗಳ ಮುಂದೆ ನಿಂತುಕೊಂಡಿರುವುದು ಕಂಡು ಬಂತು.

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ವೇಳೆ ಕೋವಿಡ್‌ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗಿತ್ತು. ಸೋಮವಾರ ಲಾಕ್‌ಡೌನ್‌ ಸಡಿಲಿಕೆ ಇದ್ದರೂ ಅಧಿಕಾರಿಗಳು ಇತ್ತ ಗಮನಹರಿಸದೇ ಜನರನ್ನು ಗುಂಪುಗೂಡಲು ಬಿಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತು.

ಗ್ರಾಮೀಣ ಭಾಗದವರಿಗೆ ತಿಳಿವಳಿಕೆ ಕೊರತೆ: ಇನ್ನೂ ಗ್ರಾಮಾಂತರ ಪ್ರದೇಶದಿಂದ ನಗರ, ಪಟ್ಟಣಗಳಿಗೆ ಬಂದ ಜನ ಮಾರುಕಟ್ಟೆಗಳು ತುಂಬಿದ್ದವು. ಬಹುತೇಕ ಜನರು ಮಾಸ್ಕ್‌ ಧರಿಸದೇ ಹಾಗೇ ಓಡಾಟ ನಡೆಸುತ್ತಿದ್ದರು. ಇವರಿಗೆ ತಿಳಿವಳಿಕೆ ಮೂಡಿಸುವವರಿಲ್ಲದೆ
ಕಂಡು ಬಂತು.

ಪ್ರಮುಖ ವೃತ್ತ, ರಸ್ತೆಗಳು ಜನಸಂದಣಿ: ನಗರದ ಪ್ರಮುಖ ವೃತ್ತ, ರಸ್ತೆಗಳು ಲಾಕ್‌ಡೌನ್‌ ಸಡಿಲಿಕೆ ಕಾರಣದಿಂದ ಜನಸಂದಣಿ ಹೆಚ್ಚಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಿದ್ದು, ಜನತೆ ಹೆಚ್ಚು ಓಡಾಟ ಕಂಡು ಬಂತು.

ಗಾಂಧಿ ವೃತ್ತದ ನಗರ ಪೊಲೀಸ್‌ ಠಾಣೆಯ ಮುಂಭಾಗದ ರಸ್ತೆಯಲ್ಲಿ ಹೆಚ್ಚು ವಾಹನಗಳ ಓಡಾಟದಿಂದ ಕೆಲವೊತ್ತು ಟ್ರಾಫಿಕ್‌ ಜಾಂ ಉಂಟಾಗಿತ್ತು. ಹಲವಾರು ವಾಹನಗಳು ಒಂದೇ ಬಾರಿ ಬಂದಿದ್ದರಿಂದ ವಾಹನಗಳು ನಿಂತುಕೊಂಡಿದ್ದವು. ಪೊಲೀಸರು ಹರಸಹಾಸ ಪಟ್ಟರು.

ಸಗಟು ವ್ಯಾಪಾರ ಜೋರು: ದಿನಸಿ ಅಂಗಡಿಗಳಲ್ಲಿ ಹೆಚ್ಚು ಜನರು ಕಂಡು ಬರಲಿಲ್ಲ. ಆದರೆ, ಸಗಟು ಅಂಗಡಿಗಳಲ್ಲಿ ಗ್ರಾಮಾಂತರ ಪ್ರದೇಶದಿಂದ ಬಂತ ಜನ ಹೆಚ್ಚು ಬಂದಿದ್ದರಿಂದ ವ್ಯಾಪಾರ ಜೋರು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT