ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್: ಕಾಂಗ್ರೆಸ್ ಚುನಾವಣಾ ಸಮಾವೇಶ ಇಂದು

ಸಿಎಂ ಸಿದ್ದರಾಮಯ್ಯ, ತೆಲಂಗಾಣ ಸಿಎಂರಿಂದ ಪ್ರಚಾರ, 40 ಸಾವಿರ ಜನರು ಸೇರುವ ನಿರೀಕ್ಷೆ
ಎಂ.ಪಿ. ಚಪೆಟ್ಲಾ
Published 29 ಏಪ್ರಿಲ್ 2024, 7:09 IST
Last Updated 29 ಏಪ್ರಿಲ್ 2024, 7:09 IST
ಅಕ್ಷರ ಗಾತ್ರ

ಗುರುಮಠಕಲ್: ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚನೆಗೆ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ಇಲಾಖೆಗಳ ಸಚಿವರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು ಸೇರಿ ಹಾಲಿ ಮತ್ತು ಮಾಜಿಗಳ ಗಣ್ಯರ ದಂಡು ಏ.29ರಂದು ಆಗಮಿಸಲಿದ್ದಾರೆ.

ಪಟ್ಟಣದ ಚಪೆಟ್ಲಾ ರಸ್ತೆಯಲ್ಲಿರುವ ಬಾಬು ತಲಾರಿ ಲೇಔಟ್‌ನಲ್ಲಿ ದೊಡ್ಡ ಪೆಂಡಾಲ್ ಸಿದ್ಧಗೊಳ್ಳತ್ತಿದ್ದು, ಪಟ್ಟಣದಲ್ಲಿ ಜರುಗಲಿರುವ ಬೃಹತ್ ಸಮಾವೇಶಕ್ಕೆ ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳಿಂದ 35 ಸಾವಿರಕ್ಕೂ ಅಧಿಕ ಜನರು ಬರುವ ನಿರೀಕ್ಷೆಯಿದೆ.

ಮತವಾಗಲಿದೆಯೇ ತೆಲುಗು ಪ್ರಭಾವ?: ಸದ್ಯ ಲೋಕಸಭಾ ಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಲು ತೆಲಂಗಾಣ ಸಿಎಂ ಎ.ರೇವಂತರೆಡ್ಡಿ, ನಟಿ ಮತ್ತು ಕಾಂಗ್ರೆಸ್ ನಾಯಕಿ ವಿಜಯಶಾಂತಿ ಸೋಮವಾರ ಬರಲಿದ್ದಾರೆ. ಜತೆಗೆ ಈಗಾಗಲೇ ತೆಲಂಗಾಣದ ಮಕ್ತಲ್ ವಿಧಾನಸಭಾ ಕ್ಷೇತ್ರದ ಶಾಸಕ ವಾಕಿಟಿ ಶ್ರೀಹರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆ ವೇಳೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರ ತೆಲಂಗಾಣ ರಾಜ್ಯದ ನಾರಾಯಣಪೇಟ ಕ್ಷೇತ್ರದ ಅಂದಿನ ಶಾಸಕ ಎಸ್.ಆರ್. ರೆಡ್ಡಿ ಪ್ರಚಾರ ಕೈಗೊಂಡಿದ್ದರು. ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸದ್ಯ ತೆಲಂಗಾಣ ಸಿಎಂ ಆಗಿರುವ ಅಂದಿನ ಟಿಪಿಸಿಸಿ ಅಧ್ಯಕ್ಷ ಎ.ರೇವಂತರೆಡ್ಡಿ ಪ್ರಚಾರ ಮಾಡಿದ್ದರು.

ಗುರುಮಠಕಲ್ ವಿಧಾನಸಭಾ ಕ್ಷೇತ್ರವು ನೆರೆಯ ತೆಲಂಗಾಣ ಗಡಿಯನ್ನು ಹಂಚಿಕೊಂಡಿದೆ. ಜತೆಗೆ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ತೆಲುಗು ಭಾಷೆಯ ಪ್ರಭಾವ ದಟ್ಟವಾಗಿದ್ದು, ತೆಲುಗು ಪ್ರಭಾವವನ್ನು ಮತವಾಗಿ ಬದಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಕಸರತ್ತು ಫಲ ನೀಡಲಿದೆಯೇ ಎನ್ನುವುದು ಕಾದು ನೋಡಬೇಕಿದೆ.

ಬಿಜೆಪಿ ಪರ ಮತಯಾಚಿಸಿದ್ದ ನಟಿ ವಿಜಯಶಾಂತಿ: ರಾಧಾಕೃಷ್ಣ ದೊಡ್ಡಮನಿ ಪರ ಮತಯಾಚಿಸಲು ಬರಲಿರುವ ತೆಲುಗು ಭಾಷೆಯ ಪ್ರಮುಖ ನಟಿಯೂ ಆಗಿರುವ ಕಾಂಗ್ರೆಸ್ ನಾಯಕಿ ವಿಜಯಶಾಂತಿ ಅವರು 2004ರಲ್ಲಿ ಬಿಜೆಪಿ ಅಭ್ಯರ್ಥಿಪರ ಮತ ಯಾಚಿಸಿದ್ದರು.

ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗುರುಮಠಕಲ್ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಕೊನೆಯ ಚುನಾವಣೆ ವೇಳೆ (2004) ಬಿಜೆಪಿಯಲ್ಲಿದ್ದ ವಿಜಯಶಾಂತಿ ಅವರು, 2004ರಲ್ಲಿ ಪಟ್ಟಣದಲ್ಲಿ ನಡೆದ ಬಿಜೆಪಿ ಚುನಾವಣಾ ಸಭೆಯಲ್ಲಿ ಅಂದಿನ ಬಿಜೆಪಿ ಅಭ್ಯರ್ಥಿ ಶಾಮರಾವ ಪ್ಯಾಟಿ ಪರ ಮತಯಾಚಿಸಿದ್ದರು.

ಬಾರದೆ ಹಿಂದಿರುಗಿದ್ದ ಪವನಕಲ್ಯಾಣ: 2014ರ ಲೋಕಸಭಾ ಚುನಾವಣೆ ವೇಳೆ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ರೇವುನಾಯಕ ಬೆಳಮಗಿ ಪರ ಮತಯಾಚಿಸಲು ತೆಲುಗು ಚಿತ್ರರಂಗದ ‘ಪವರ್ ಸ್ಟಾರ್’ ಖ್ಯಾತಿಯ ಪವನಕಲ್ಯಾಣ ಬರುವುದು ಬಹುತೇಕ ಖಚಿತವಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಪವನ ಕಲ್ಯಾಣ ಅವರು ಸಮಯದ ಅಭಾವವೆಂಬ ಕಾರಣ ನೀಡಿ ಗುರುಮಠಕಲ್ ಸಮಾವೇಶಕ್ಕೆ ಬಾರದೆ ಹಿಂದಿರುಗಿದ್ದರು.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಮತಯಾಚನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪಕ್ಷದ ವರಿಷ್ಠರು ಆಗಮಿಸುತ್ತಿದ್ದಾರೆ
ಕೃಷ್ಣ ಚಪೆಟ್ಲಾ,ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT