ಖಾನಾಪುರ (ಯಾದಗಿರಿ): ಶಹಾಪುರ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಅರವಳಿಕೆ ಚಿಕಿತ್ಸಾ ಮದ್ದಿನಿಂದ ಹುಚ್ಚು ಹಿಡಿದ ಮಂಗವನ್ನು ಸೆರೆ ಹಿಡಿಯಲಾಯಿತು. ಇದರಿಂದ ಒಂದು ವಾರದಿಂದ ಆತಂಕದಲ್ಲಿದ್ದ ಜನರು, ನಿಟ್ಟುಸಿರು ಬಿಟ್ಟರು.
25 ಜನರ ಮೇಲೆ ಹಲ್ಲೆ ಮಾಡಿದ್ದ ಮಂಗನನ್ನು ಸೆರೆ ಹಿಡಿಯಲು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.
ಸುರಪುರ ವಲಯಾರಣ್ಯ ಇಲಾಖೆ, ಶಹಾಪುರ ಅರಣ್ಯ ಇಲಾಖೆ ಹಾಗೂ ವಡಗೇರಾ ಪೊಲೀಸ್ ಸಿಬ್ಬಂದಿ ಮಂಗನನ್ನು ಜೀವಂತವಾಗಿ ಸೆರೆ ಹಿಡಿಯಲು ಬಲೆ ಬೀಸಿ, ನಾನಾ ತರಹ ಕಸರತ್ತು ಮಾಡಿದರು. ಇದಕ್ಕೆ ಗ್ರಾಮಸ್ಥರು ನೆರವಾದರು. ಆದರೆ, ಪ್ರಯೋಜನವಾಗಲಿಲ್ಲ. ಕೊನೆಗೆ ಗದಗ ಜಿಲ್ಲೆಯಿಂದ ಕರ್ನಾಟಕ ಮೃಗಾಲಯ ಪ್ರಾಧಿಕಾರ ತಂಡ ಖಾನಾಪುರ ಗ್ರಾಮಕ್ಕೆ ಬಂದು, ಅರವಳಿಕೆ ಚಿಕಿತ್ಸಾ ಮದ್ದಿನಿಂದ ಮಂಗನನ್ನು ಸೆರೆ ಹಿಡಿಯಿತು.
ಗದಗ ಜಿಲ್ಲೆಯ ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಪಶು ವೈದ್ಯಾಧಿಕಾರಿ ಹಾಗೂ ಶೂಟರ್ ನಿಖಿಲ್ ಕುಲಕರ್ಣಿ, ವಡಗೇರಾ ಠಾಣೆ ಪಿಎಸ್‍ಐ ಸಿದ್ಧರಾಯ ಬಳ್ಳೂರ್ಗಿ, ಎಎಸ್‍ಐ ಭೀಮಶೆಟ್ಟಿ, ಪೇದೆ ನೀಲಕಂಠಪ್ಪ, ಸುರಪುರ ವಲಯ ಅರಣ್ಯಾಧಿಕಾರಿ ಮೌಲಾಲಿಸಾಬ್, ಉಪ ಅರಣ್ಯ ಅಧಿಕಾರಿ ಹೂಗಾರ, ಉಪಳಪ್ಪ, ಶರಣಪ್ಪ, ಪರಶುರಾಮ, ಮಾನಪ್ಪ, ದುರ್ಗಪ್ಪ, ಹಣಮಂತಪ್ಪ ಬಿರಾದಾರ, ಪಿಡಿಒ ರಡ್ಡಿ ರಾಠೋಡ್, ತಾಪಂ ಸದಸ್ಯ ಪರಶುರಾಮ ಕುರುಕುಂದಿ, ಖಾನಾಪುರ ಗ್ರಾಮದ ಪ್ರಮುಖರಾದ ದೇವಿಂದ್ರಪ್ಪ ಮುನುಮುಟಿಗಿ, ಗ್ರಾಪಂ ಅಧ್ಯಕ್ಷ ಸೋಮಸಿಂಗ್ ಕಾರ್ಯಾಚರಣೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.