ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಜೆಐ ವಿರುದ್ಧದ ವಾಗ್ದಂಡನೆ ನೋಟಿಸ್‌ ತಿರಸ್ಕಾರ ಪ್ರಶ್ನಿಸಿ ಅರ್ಜಿ: ಇಂದು ಸಂವಿಧಾನ ಪೀಠದಲ್ಲಿ ವಿಚಾರಣೆ

Last Updated 7 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ವಿರುದ್ಧದ ವಾಗ್ದಂಡನೆ ನೋಟಿಸ್‌ ತಿರಸ್ಕಾರಗೊಂಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಇಬ್ಬರು ಸಂಸದರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಲಿದೆ.

ಪಂಜಾಬ್ ರಾಜ್ಯಸಭಾ ಸಂಸದ ಪ್ರತಾಪ್ ಸಿಂಗ್ ಬಜ್ವಾ ಹಾಗೂ ಗುಜರಾತ್ ರಾಜ್ಯಸಭಾ ಸಂಸದ ಅಮೀ ಹರ್ಷಾದ್ರಿ ಯಾಜ್ಞಿಕ್ ಸಲ್ಲಿಸಿದ ಅರ್ಜಿಯ ತ್ವರಿತ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎಸ್‌.ಎ. ಬೊಬ್ಡೆ, ಎನ್‌.ವಿ. ರಮಣ, ಅರುಣ್ ಮಿಶ್ರಾ, ಆದರ್ಶ್ ಕುಮಾರ್ ಗೋಯಲ್ ಅವರನ್ನೊಳಗೊಂಡ ಪೀಠ ನಡೆಸುವ ವಿಷಯವನ್ನು ಸುಪ್ರೀಂ ಕೋರ್ಟ್‌ ತನ್ನ ವೆಬ್‌ಸೈಟ್‌ನಲ್ಲಿ ಘೋಷಿಸಿದೆ. 

ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರು ವಾಗ್ದಂಡನೆ ನೋಟಿಸ್ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಈ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಹಿರಿಯ ವಕೀಲ ಕ‍‍ಪಿಲ್ ಸಿಬಲ್ ಅವರು ನ್ಯಾಯಮೂರ್ತಿ ಜೆ.ಚೆಲಮೇಶ್ವರ್ ನೇತೃತ್ವದ ನ್ಯಾಯಪೀಠದ ಎದುರು ಸೋಮವಾರ ರಾತ್ರಿ ಮನವಿ ಸಲ್ಲಿಸಿದ್ದರು.

ನವೆಂಬರ್‌ನಲ್ಲಿ ಸಂವಿಧಾನ ಪೀಠ ನೀಡಿದ್ದ ತೀರ್ಪು ಉಲ್ಲೇಖಿಸಿದ ನ್ಯಾಯಪೀಠ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎದುರು ಈ ಅರ್ಜಿ ಸಲ್ಲಿಸಬೇಕು ಎಂದು ಹೇಳಿತು.

‘ಸಂವಿಧಾನ ಪೀಠದ ಆದೇಶ ಕುರಿತು ಮಾಹಿತಿ ಇದೆ. ಆದರೆ ವಾಗ್ದಂಡನೆ ನೋಟಿಸ್ ಪ್ರಕರಣ ಸಿಜೆಐಗೆ ಸಂಬಂಧಿಸಿದ್ದಾಗಿರುವುದರಿಂದ ಅವರೇ ಈ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾಗಲು ಸಾಧ್ಯವಿಲ್ಲ. ನಾವು ಯಾವುದೇ ಮಧ್ಯಂತರ ಆದೇಶ ಕೋರುತ್ತಿಲ್ಲ. ಕೇವಲ ತುರ್ತಾಗಿ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲು ನ್ಯಾಯಪೀಠಕ್ಕೆ ಕೇಳಿಕೊಳ್ಳುತ್ತಿದ್ದೇವೆ’ ಎಂದು ಸಿಬಲ್ ಹೇಳಿದರು.

ವರ್ಗಾವಣೆ ಸಾಧ್ಯವಿಲ್ಲ: ‘ಈ ನ್ಯಾಯಾಲಯದ ನಿಯಮ ಸರಳವಾಗಿದೆ. 45 ವರ್ಷಗಳಿಂದ ನಾನು ಇಲ್ಲಿ ವಕೀಲಿಕೆ ಮಾಡಿದ್ದೇನೆ. ಈ ವಿಷಯದಲ್ಲಿ ರಿಜಿಸ್ಟ್ರಾರ್, ಸಿಜೆಐನಿಂದ ಆದೇಶಗಳನ್ನು ಪಡೆಯಲು ಸಾಧ್ಯವಿಲ್ಲ. ಪ್ರಕರಣವನ್ನು ನ್ಯಾಯಪೀಠಗಳಿಗೆ ಹಂಚಿಕೆ ಮಾಡುವ ತಮ್ಮ ಅಧಿಕಾರವನ್ನು ಸಿಜೆಐ, ರಿಜಿಸ್ಟ್ರಾರ್‌ಗೆ ವರ್ಗಾಯಿಸಲು ಬರುವುದಿಲ್ಲ. ನ್ಯಾಯಮೂರ್ತಿ ಜೆ.ಚೆಲಮೇಶ್ವರ್ ಅವರು ಈ ಅರ್ಜಿ ಪರಿಗಣಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದು ನ್ಯಾಯಪೀಠಕ್ಕೆ ಸಿಬಲ್ ಕೇಳಿಕೊಂಡರು. 

ವಕೀಲ ಪ್ರಶಾಂತ್ ಭೂಷಣ್ ಅವರು ಸಿಬಲ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಸಿಬಲ್ ಮನವಿಗೆ ‘ನಾನು ನಿವೃತ್ತಿಯಾಗುವ ಸಮಯದಲ್ಲಿದ್ದೇನೆ’ ಎಂದು ಚೆಲಮೇಶ್ವರ್ ಪ್ರತಿಕ್ರಿಯಿಸಿದರು.

ಸಭಾಪತಿ ಆದೇಶ ರದ್ದತಿಗೆ ಕೋರಿಕೆ

ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ವಾಗ್ದಂಡನೆ ನೋಟಿಸ್ ತಿರಸ್ಕರಿಸಿ ನೀಡಿದ ಆದೇಶ ರದ್ದುಪಡಿಸಬೇಕೆಂದು ಕಾಂಗ್ರೆಸ್ ಸಂಸದರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ನ್ಯಾಯಮೂರ್ತಿಗಳ (ತನಿಖಾ) ಕಾಯ್ದೆ, 1968ರ 3(1) ಸೆಕ್ಷನ್ ಅನುಸಾರ ತಮ್ಮ ವಿವೇಚನಾ ಸಾಮರ್ಥ್ಯ ಬಳಸಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಘೋಷಿಸಬೇಕು. 64 ಜನರು ಸಹಿ ಹಾಕಿದ್ದ ನೋಟಿಸ್‌ ಸಂಬಂಧ ತನಿಖಾ ಸಮಿತಿ ರಚಿಸುವುದು ಸಭಾಪತಿಗಳ ‘ಕರ್ತವ್ಯವಾಗಿತ್ತು’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

**

ನಾವು ಯಾವುದೇ ಮಧ್ಯಂತರ ಆದೇಶ ಕೋರುತ್ತಿಲ್ಲ. ಕೇವಲ ತುರ್ತಾಗಿ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲು ನ್ಯಾಯಪೀಠಕ್ಕೆ ಕೇಳಿಕೊಳ್ಳುತ್ತಿದ್ದೇವೆ.

– ಕಪಿಲ್ ಸಿಬಲ್, ಅರ್ಜಿದಾರರ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT