ಮಕ್ಕಳ ಹಕ್ಕು ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

7
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಚಪ್ಪ ಕೆ.ತಾಳಿಕೋಟಿ ಅಭಿಮತ

ಮಕ್ಕಳ ಹಕ್ಕು ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

Published:
Updated:
Deccan Herald

ಯಾದಗಿರಿ: ‘ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಚಪ್ಪ ಕೆ.ತಾಳಿಕೋಟಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಯುನಿಸೆಫ್ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ರಕ್ಷಣಾ ವ್ಯವಸ್ಥೆಗಳ ಬಲವರ್ಧನೆ ಕುರಿತು ಕಾರ್ಯಾಗಾರ ಹಾಗೂ ಸಮಾಲೋಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳ ರಕ್ಷಣೆಗಾಗಿ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ದುರ್ಘಟನೆಗಳು ಸಂಭವಿಸುತ್ತಿವೆ. ಆದ್ದರಿಂದ, ಮಕ್ಕಳ ರಕ್ಷಣೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಮುಖ್ಯ ಗುರುಗಳು, ಶಿಕ್ಷಕರು, ಜನಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ. ನಮ್ಮ ದೇಶದಲ್ಲಿ ಯಾರದೊ ಮುದ್ದುಮಗು ಕಂಡರೆ ಮುದ್ದು ಮಾಡುತ್ತೇವೆ. ಆದರೆ, ಬೇರೆ ದೇಶಗಳಲ್ಲಿ ಈ ರೀತಿ ಮುದ್ದು ಮಾಡಿದರೆ, ನೋಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯ ಸ್ಪರ್ಶ ಯಾವುದು? ಕೆಟ್ಟ ಸ್ಪರ್ಶ ಯಾವುದು? ಎಂಬುದರ ಬಗ್ಗೆ ಅರಿವು ಮೂಡಿಸಬೇಕಿದೆ’ ಎಂದರು.

‘ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನೊಂದ ಮಗುವಿನ ಪಕ್ಕದಲ್ಲಿ ತಾಯಿ ಅಥವಾ ಹತ್ತಿರದ ಸಂಬಂಧಿಗಳನ್ನು ಕುಳ್ಳಿರಿಸಿ, ಹೇಳಿಕೆ ಪಡೆಯಲಾಗುತ್ತದೆ. ಅಲ್ಲದೆ, ಆರೋಪಿಯ ಎದುರು ನೊಂದ ಮಗು ಭಯಪಡದಂತೆ ಪರದೆ ಕೂಡ ಹಾಕಿರಲಾಗುತ್ತದೆ. ತೀರ್ಪು ಪ್ರಕಟ ಮತ್ತು ಇತರೆ ಯಾವುದೇ ಸಂದರ್ಭಗಳಲ್ಲಿ ಆ ಮಗುವಿನ ಹೆಸರು ಬಳಕೆ ಮಾಡುವಂತಿಲ್ಲ. ಹಾಗಾಗಿ, ಅಧಿಕಾರಿಗಳು ಇಂತಹ ಕಾನೂನು ಅಂಶಗಳನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಮಾತನಾಡಿ, ‘ಮಕ್ಕಳು ಈ ದೇಶದ ಆಸ್ತಿ, ಸಂಪತ್ತು ಆಗಿದ್ದಾರೆ. ಮಾನವ ಹಕ್ಕುಗಳು ದೊಡ್ಡವರಿಗೆ ಮಾತ್ರ ಸೀಮಿತವಲ್ಲ. ಮಕ್ಕಳ ಹಕ್ಕುಗಳು ಕೂಡ ಮಾನವ ಹಕ್ಕುಗಳಲ್ಲಿ ಪರಿಗಣನೆ ಮಾಡಬೇಕು. ಅದರಂತೆ ಇಂದಿನ ಮಕ್ಕಳು ನಾಳೆಯ ಪ್ರಜೆಗಳಲ್ಲ. ಅವರು ಇಂದಿನ ಪ್ರಜೆಗಳು. ಅವರನ್ನು ಬೆಳೆಸುವ ರೀತಿಯಲ್ಲಿ ದೇಶದ ಪ್ರಗತಿ, ಅಭಿವೃದ್ಧಿ ಅಡಗಿದೆ’ ಎಂದರು.

‘ಭಾರತದಲ್ಲಿ ಶೇ 40ರಷ್ಟು ಮಕ್ಕಳಿದ್ದಾರೆ. ಯುರೋಪ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಮಕ್ಕಳ ಸಂಖ್ಯೆ ಬಹಳಷ್ಟು ಕಡಿಮೆ. ಹಾಗಾಗಿ, ಈ ದೇಶಗಳನ್ನು ವಯಸ್ಸಾಗುತ್ತಿರುವ ರಾಷ್ಟ್ರಗಳೆಂದು ಕರೆಯಲಾಗುತ್ತಿದೆ. ಮಕ್ಕಳ ಅಪೌಷ್ಟಿಕತೆ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ಇಲ್ಲದ ದೇಶಗಳು ಅಭಿವೃದ್ಧಿ ಸೂಚ್ಯಂಕದಲ್ಲಿ ಉನ್ನತ ಸ್ಥಾನದಲ್ಲಿವೆ. ಈ ಸಮಸ್ಯೆಗಳಿರುವ ದೇಶಗಳು ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿವೆ’ ಎಂದು ಹೇಳಿದರು.

‘ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಲು ರಾಜ್ಯ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ವಲಯ ನ್ಯಾಯಾಂಗ ಮಂಡಳಿ, ಬಾಲ ನ್ಯಾಯ ಮಂಡಳಿ, ಮಕ್ಕಳ ಸಹಾಯವಾಣಿ-೧೦೯೮, ಪೊಲೀಸ್ ಇಲಾಖೆ ಸೇರಿದಂತೆ ಅನೇಕ ವ್ಯವಸ್ಥೆಗಳಿವೆ. ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಲಾಗಿದೆ. ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿವೆ’ ಎಂದು ವಿಷಾದಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಮಾತನಾಡಿ,‘ಜಿಲ್ಲಾಡಳಿತದ ವತಿಯಿಂದ ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಸಮಿತಿಗಳ ಮೂಲಕ ಪ್ರಚಾರ, ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದಾಗ ದಾಳಿ ನಡೆಸಿ, ಪ್ರಕರಣ ದಾಖಲು ಮಾಡಲಾಗುತ್ತಿದೆ. ಮದುವೆಯ ಆಮಂತ್ರಣ ಪತ್ರಿಕೆ ತಯಾರಿಸುವಾಗ ಮುದ್ರಣ ಮಾಲೀಕರು ಕಡ್ಡಾಯವಾಗಿ ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಲು ಆದೇಶಿಸಲಾಗಿದೆ’ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷಹಣಮಂತರಾಯ ಕರಡ್ಡಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಚಂದ್ರಶೇಖರ ಅಲ್ಲಿಪುರ, ಜಿಲ್ಲಾ ಶಸ್ತ್ರಚಿಕಿತ್ಸಕ ಸಂಜೀವ್‌ಕುಮಾರ ರಾಯಚೂರಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ, ಯುನಿಸೆಫ್ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !