ಬುಧವಾರ, ಆಗಸ್ಟ್ 12, 2020
27 °C
ಕೆಲಸ ನೀಡಲು ಸುರಪುರ ತಾಲ್ಲೂಕು ಆಡಳಿತ ಹರಸಾಹಸ

ನೆರವಿಗೆ ಬಾರದ ನರೇಗಾ: ನಿಲ್ಲದ ಕಾರ್ಮಿಕರ ವಲಸೆ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ತಾಲ್ಲೂಕಿನಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಅಧಿಕವಾಗಿದೆ. ಕಾರ್ಮಿಕರ ವಲಸೆ ತಪ್ಪಿಸಲು ನರೇಗಾ ಯೋಜನೆ ನೆರವಿಗೆ ಬರುತ್ತಿಲ್ಲ. ವಲಸೆ ಕಾರ್ಮಿಕರ ಮನವೊಲಿಸಲು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ.

ಅಂದಾಜಿನ ಪ್ರಕಾರ ತಾಲ್ಲೂಕಿನಲ್ಲಿ 20 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ . ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದ ಪ್ರಯುಕ್ತ ವಲಸೆ ಕಾರ್ಮಿಕರಿಗೆ ಕೆಲಸವಿಲ್ಲದಾಯಿತು. ಇನ್ನೊಂದೆಡೆ ಕೊರೊನಾ ವೈರಸ್ ಭೀತಿ. ಹೀಗಾಗಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದರು.

ಕ್ವಾರಂಟೈನ್‍ಗೆ ಒಳಗಾಗಿ ಅವಲೋಕನ ಅವಧಿ ಮುಗಿಸಿದ ಮತ್ತು ಸೋಂಕಿಗೆ ತುತ್ತಾಗಿ ಗುಣಮುಖರಾದ ವಲಸೆ ಕಾರ್ಮಿಕರು ಮತ್ತೆ ದೊಡ್ಡ ನಗರಗಳತ್ತ ಮುಖ ಮಾಡಿರುವುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ದೊಡ್ಡ ನಗರಗಳಲ್ಲಿ ವರ್ಷವಿಡಿ ಕೆಲಸ. ದಿನಕ್ಕೆ ₹ 600 ರಿಂದ 800 ಕೂಲಿ, ಕೆಲವೆಡೆ ಊಟ, ವಸತಿ ವ್ಯವಸ್ಥೆ, ಲಕ್ಷಕ್ಕೂ ಹೆಚ್ಚು ಮುಂಗಡ ಹಣ ಇವೆಲ್ಲವೂ ವಲಸೆ ಕಾರ್ಮಿಕರನ್ನು ಆಕರ್ಷಿಸುತ್ತಿವೆ.

‘ನರೇಗಾ ಯೋಜನೆಯಲ್ಲಿ ದಿನಕ್ಕೆ ₹ 275 ಮಾತ್ರ ಕೂಲಿ ದೊರಕುತ್ತದೆ. ಅದೂ 100 ದಿನ ಮಾತ್ರ ಕೆಲಸ. ಹೀಗಾಗಿ  ನರೇಗಾ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ’ ಎಂಬುದು  ಜನರ ಅನಿಸಿಕೆ.

‘ವಲಸೆ ಹೋಗುವುದರಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಬಸ್‍ನಿಲ್ದಾಣ, ಕ್ವಾರಂಟೈನ್ ಕೇಂದ್ರ ಇತರ ಕಾರ್ಮಿಕರು ಇರುವ ಪ್ರದೇಶದಲ್ಲಿ ಪ್ರಚಾರ ಮಾಡಲಾಗಿದೆ. ನರೇಗಾ ಯೋಜನೆಯಲ್ಲಿ ಎಲ್ಲರಿಗೂ ಕೆಲಸ ಕೊಡಲಾಗುವುದು ಎಂದು ತಿಳಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಹೇಳಿದರು.

‘ತಾಲ್ಲೂಕಿನಲ್ಲಿ 23 ಗ್ರಾಮ ಪಂಚಾಯಿತಿಗಳಿವೆ. ಬದು ನಿರ್ಮಾಣ, ಕೆರೆ ಹೂಳು ಎತ್ತುವುದು, ಕೃಷಿ ಹೊಂಡ, ಮಳೆ ನೀರು ಕೊಯ್ಲು ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಯಂತ್ರೋಪಕರಣಗಳ ಬಳಕೆ ಮಾಡುತ್ತಿಲ್ಲ’ ಎನ್ನುತ್ತಾರೆ ಅವರು.

‘ದೊಡ್ಡ ನಗರಗಳಲ್ಲಿ ಹೆಚ್ಚು ಸಮಯ ಕೆಲಸ ತೆಗೆದುಕೊಳ್ಳುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ, ಮಕ್ಕಳಿಗೆ ಶಿಕ್ಷಣ ಸಮಸ್ಯೆ ಉಂಟಾಗುತ್ತದೆ. ತಮ್ಮ ಹೊಲಗಳಲ್ಲಿಯೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಈಗ ಸರಾಸರಿ ಪ್ರತಿ ದಿನ 5 ಸಾವಿರ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತಿದೆ’ ಎಂದು ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ವಿಶ್ವನಾಥ ಯಾದಗಿರಿಕರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು