ಗುರುವಾರ , ಮಾರ್ಚ್ 23, 2023
31 °C

ಭಾಷಣದುದ್ದಕ್ಕೂ ಕನ್ನಡ ತಪ್ಪು ಉಚ್ಚರಿಸಿದ ಸಚಿವರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ರಾಷ್ಟ್ರ ಧ್ವಜರೋಹರಣ ನೆರವೇರಿಸಿದ ನಂತರ ಭಾಷಣ ಮಾಡಿದರು

ಯಾದಗಿರಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ನಗರದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರ ಧ್ವಜಾರೋಹರಣ ನೆರವೇರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಭಾಷಣದುದ್ದಕ್ಕೂ ಕನ್ನಡ ಭಾಷೆಯನ್ನು ತಪ್ಪು ತಪ್ಪಾಗಿ ಉಚ್ಚರಿಸಿದರು.

ಸರ್ದಾರ್ ವಲ್ಲಭಭಾಯ್‌ ಪಟೇಲ್‌ ಎನ್ನುವ ಬದಲು ಸರ್ದಾರ್ ವಲ್ಲಭಭಾಯ್‌ ಪಾಟೀಲರನ್ನು ನೆನಸಿಕೊಳ್ಳಬೇಕು ಎಂದು ತಪ್ಪಾಗಿ ಉಚ್ಚರಿಸಿದರು. 

ಸ್ವಾತಂತ್ರ್ಯ ಬದಲು ಸ್ವಾಸಂತ್ರ ಎಂದು ಉಚ್ಚರಿಸಿದರು. ಕಡಲೆ ಬೇಳೆ ಬದಲಾಗಿ ಬೆಲೆ ವಿತರಿಸಲಾಗಿದೆ ಎಂದರು. ಇದ್ದಾರೆ ಎನ್ನುವ ಬದಲು ಇದ್ದಾರಾ ಎಂದರು. 

ಸರ್ಕಾರವೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಎಂದು ಆಚರಿಸುತ್ತಿದ್ದರೂ ವಿಮೋಚನಾ ದಿನಾಚರಣೆ ಎಂದು ಹಲವಾರು ಬಾರಿ ಉಚ್ಚರಿಸಿದರು. ಪರಿಚಯ ಬದಲಾಗಿ ಪರಿಷಯ ಮಾಡಿಕೊಡಬೇಕು ಎಂದರು.

ಪ್ರತಿಯೊಬ್ಬರ ಬದಲಾಗಿ ಪ್ರತಿಯೊಬ್ಬ ಪಾತ್ರ ಮುಖ್ಯ ಎಂದರು. ಆಚರಣೆ ಮಾಡಿಕೊಳ್ಳುತ್ತಿದ್ದೇವೆ ಎನ್ನುವ ಬದಲಾಗಿ ಕೊಂತಿದಿವಿ, ಹೀಗೆ ಅನೇಕ ತಪ್ಪುತಪ್ಪಾದ ಉಚ್ಚಾರ ಮಾಡಿದರು.

ಕಲ್ಯಾಣ ಕರ್ನಾಟಕ ಕನಸು ನನಸು ಮಾಡಿಕೊಳ್ಳಬೇಕು ಎನ್ನುವ ಬದಲಾಗಿ ನೆನಸು ಆಗಬೇಕು ಎಂದರು.

ಯಾದಗಿರಿ ಜಿಲ್ಲೆ ಆರ್ಥಿಕ ಸಮೀಕ್ಷೆಯಲ್ಲಿ 28–30ನೇ ಸ್ಥಾನದಲ್ಲಿ ಇದೆ ಎಂದರು.

‘ಮನಸ್ಸಲ್ಲಿ ಇದ್ದಿದ್ದೂ ದೇವಿ ಬಳಿ ಬೇಡಿಕೊಂಡಿದ್ದೇನೆ’ 

ಜಿಲ್ಲೆಯ ವಡಗೇರಾ ತಾಲ್ಲೂಕಿನ ಗೋನಾಲ ಗಡೇ ದುರ್ಗಾದೇವಿ ದೇವಸ್ಥಾನದಲ್ಲಿ ‘ಉಪಮುಖ್ಯಮಂತ್ರಿ’ ಮಾಡಿ ಎಂದು ಪತ್ರ ಬರೆದು ದೇವಿಗೆ ಮನವಿ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ದೇವಿ ಶಕ್ತಿ ಬಗ್ಗೆ ತಿಳಿದುಕೊಂಡಿದ್ದೇನೆ. ಹೀಗಾಗಿ ಮನಸ್ಸಿನಲ್ಲಿ ಇರುವುದನ್ನು ಪತ್ರದಲ್ಲಿ ಬರೆದು ದೇವಿ ಪಾದಕ್ಕೆ ಮೊರೆ ಇಟ್ಟಿದ್ದೇನೆ ಎಂದರು.

ದೇವಿ ಬಳಿ ಕೇಳಿಕೊಂಡಿರುವ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಬಾರದು. ದೇವಿ ಶಕ್ತಿ ಬಗ್ಗೆ ಸ್ನೇಹಿತರೊಬ್ಬರು ಹೇಳಿದ್ದರು. ಹೀಗಾಗಿ ದೇವಿ ದರ್ಶನ ಪಡೆದಿದ್ದೇನೆ. ಡಿಎಂಸಿ ಮಾಡೋದು ಬಿಡೋದು ಸಿಎಂ ಅವರ ವಿವೇಚನೆಗೆ ಬಿಟ್ಟ ವಿಚಾರ. ಡಿಸಿಎಂ ಪಟ್ಟದ ಬಗ್ಗೆ ಈಗ ಮಾತನಾಡುವ ಸಂದರ್ಭ ಅಲ್ಲ. ಕೊರೊನಾ ವಿರುದ್ಧ ಹೋರಾಡುವ ಸಂದರ್ಭ ಇದು ಎಂದರು.

ಆಧುನಿಕ ಸೌಲಭ್ಯವುಳ್ಳ ಆ್ಯಂಬುಲೆನ್ಸ್‌ಗಾಗಿ ಟೆಂಡರ್‌ ಆಗಿದೆ. ಜಿಪಿಎಸ್‌, ಆಕ್ಸಿಜನ್‌ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ 2,000 ಸಾವಿರ ಆ್ಯಂಬುಲೆನ್ಸ್‌ಗಳು ಮುಂದಿನ ತಿಂಗಳಿಂದ ಸಿಗಲಿವೆ ಎಂದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು