ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಗೆ ಸಿಗದ ಸಚಿವ ಸ್ಥಾನ; ಬೆಂಬಲಿಗರ ಪ್ರತಿಭಟನೆ

ಯಾದಗಿರಿ, ಬೆಂಗಳೂರಿನಲ್ಲಿ ರಾಜೂಗೌಡ ಅಭಿಮಾನಿಗಳ ಆಕ್ರೋಶ, ಟೈಯರ್‌ಗೆ ಬೆಂಕಿ ಹಚ್ಚಿ ಧಿಕ್ಕಾರ
Last Updated 5 ಆಗಸ್ಟ್ 2021, 1:16 IST
ಅಕ್ಷರ ಗಾತ್ರ

ಯಾದಗಿರಿ: ಸುರಪುರ ಶಾಸಕ ನರಸಿಂಹ ನಾಯಕ (ರಾಜೂಗೌಡ) ಅವರಿಗೆ ಸಚಿವ ಸ್ಥಾನ ಸಿಗದ ಕಾರಣ ಬೆಂಬಲಿಗರು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಸುಭಾಷ ವೃತ್ತದಲ್ಲಿ ಸೇರಿದ ವಾಲ್ಮೀಕಿ ಸಮುದಾಯದ ಯುವಕರು ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

‘ಸಮುದಾಯಕ್ಕೆ ಬಿಜೆಪಿಯಿಂದ ಅನ್ಯಾಯವಾಗಿದೆ. ರಾಜೂಗೌಡ ಅವರಿಗೆ ಸಚಿವ ಸ್ಥಾನ ಕೊಡದೆ ಬಿಜೆಪಿ ಹೈಕಮಾಂಡ್‌ ಮೋಸ ಮಾಡಿದೆ’ ಎಂದು ಆರೋಪಿಸಿ ಯುವಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲೆಗಷ್ಟೇ ಅಲ್ಲದೇ ಇಡೀಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದ್ದು, ನಂಜುಂಡಪ್ಪ ವರದಿ, 371ಜೆ ಅಡಿಯಲ್ಲಿಯೂಸೌಲಭ್ಯನೀಡದೇ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರವಿ ನಾಯಕ ಜಮ್ಮಾರ, ಬಸವರಾಜ ನಾಯಕ, ಬಂಗಾರೆಪ್ಪ, ಕಾಶಿನಾಥ ನಾನೇಕ, ಸಾಬಣ್ಣ ನಾಯಕ, ತಿಮ್ಮಣ್ಣ ಪರಸನಾಯಕ, ನಾಗು ಬಿಲ್ಲಿ, ರವಿ ಗಡ್ಡೆಸುಗೂರು, ಮಲ್ಲು ಪೂಜಾರಿ, ಅಜರ್, ಜೀವನ್, ಮರೆಪ್ಪ ಕಡ್ಡಿ, ಸಾಬು ಕಡ್ಡಿ, ಯಲ್ಲಪ್ಪ ನಾನೇಕ, ಅಂಬ್ರೇಶ್, ವಿಶ್ವಾ, ಶಿವು, ದೇವು ಇದ್ದರು.

ಬೆಂಗಳೂರಿನಲ್ಲಿ ಪ್ರತಿಭಟನೆ: ಬೆಂಗಳೂರಿನ ಗಾಂಧಿನಗರದಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು, ರಾಜೂಗೌಡ ಅಭಿಮಾನಿಗಳು ಬಿಜೆಪಿ ಸರ್ಕಾರದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜೂಗೌಡ ಭಾವಚಿತ್ರ ಹಿಡಿದು ನ್ಯಾಯಕ್ಕಾಗಿ ಹೋರಾಟ, ಬೇಕು ಬೇಕು ಸಚಿವ ಸ್ಥಾನ ಎಂದು ಆಗ್ರಹಿಸಿದರು.

ಪ್ರತಿಭಟನೆಯಿಂದ ರಸ್ತೆ ಸಂಚಾರಕ್ಕೆ ತೊಡಕಾಯಿತು. ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ಕಕ್ಕೇರಾ ವರದಿ: ಪಟ್ಟಣದ ಮಹರ್ಷಿ ವಾಲ್ಮೀಕಿ ಸಂಘಟನೆ ಅಧ್ಯಕ್ಷ ಪರಮಣ್ಣ ವಡಿಕೇರಿ ಹಾಗೂ ಪದಾಧಿಕಾರಿಗಳು ಶಾಸಕ ರಾಜೂಗೌಡರಿಗೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜೂಗೌಡರು ಕೊರೊನಾ ಸಮಯದಲ್ಲಿ ಅತ್ಯುತ್ತಮ ಸೇವೆ ಹಾಗೂ ಪ್ರಸ್ತುತ ಪ್ರವಾಹದ ಸಮಯದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಹೀಗಿದ್ದರೂ ಅವರಿಗೆ ಸಚಿವ ಸ್ಥಾನ ನೀಡದಿರುವುದರಿಂದ ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ ಎಂದು ವಲಯ ಅಧ್ಯಕ್ಷ ಪರಮಣ್ಣ ವಡಿಕೇರಿ, ಹಣಮಂತ ಸಗರ್, ಹಣಮಂತ ದೇಸಾಯಿ ಸೇರಿದಂತೆ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

***

‘‌ಭಿಕ್ಷೆ ಬೇಡಿ ಮಂತ್ರಿ ಸ್ಥಾನ ಪಡೆಯಲ್ಲ’

ಯಾದಗಿರಿ: ‘ಭಿಕ್ಷೆ ಬೇಡಿ ಮಂತ್ರಿ ಸ್ಥಾನ ಪಡೆಯುವಂಥ ಪರಿಸ್ಥಿತಿ ನನಗೆ ಬಂದಿಲ್ಲ. ಬಕೆಟ್ ಹಿಡಿದು ಸಚಿವ ಆಗುವ ಅವಶ್ಯಕತೆ ನನಗಿಲ್ಲ’ ಎಂದು ಸುರಪುರ ಶಾಸಕ ನರಸಿಂಹ ನಾಯಕ (ರಾಜೂಗೌಡ) ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯಿಂದ ಕರೆ ಬಂದಿದ್ದು ನಿಜ. ಆದರೆ, ಅಧಿವೇಶನ ಮುಗಿದ ಮೇಲೆ ಸಚಿವನನ್ನಾಗಿ ಮಾಡುತ್ತೇವೆ ಎಂದು ಹೇಳಿದರು. ಈ ಸರ್ಕಾರದಲ್ಲಿ ಸಚಿವನಾದರೆ ಅಭಿಮಾನಿಗಳಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ. ಜನ ಸೇವೆ ಮಾಡಲು ನನ್ನನ್ನು ಗೆಲ್ಲಿಸಿದ್ದಾರೆ. ಅವರ ಸೇವೆ ಮಾಡುತ್ತೇನೆ’ ಎಂದರು.

‘ಇನ್ನು ಸ್ವಲ್ಪ ದಿನ ಬಿಟ್ಟು ನನಗೆ ಮಂತ್ರಿ ಮಾಡಿದರೆ ಇತ್ತ ಅಗಸನ ನಾಯಿ ಹಳ್ಳನೂ ಕಾಯಲಿಲ್ಲ ಅತ್ತ ಹಳ್ಳನೂ ಕಾಯಲಿಲ್ಲ ಅಂದಂಗೆ ಆಗುತ್ತದೆ. ಇಲ್ಲಿ ಎಂಜಲು ತಿನ್ನೋದು ಬೇಡ. ಮುಂದೆ ಹೊಸ ಸರ್ಕಾರದಲ್ಲಿ ಮಂತ್ರಿ ಆಗುತ್ತೇನೆ. ದಯವಿಟ್ಟು ಯಾರೂ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಬೇಡಿ. ಪ್ರತಿಭಟನೆ ಬಿಟ್ಟು ಊರಿಗೆ ಹೋಗಿ’ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.

ಬಿಎಸ್‌ವೈ ಕಣ್ಣೀರು ಹಾಕಿದರು: ‘ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಣ್ಣೀರು ಹಾಕಿದರು. ಇದು ನನಗೆ ಬೇಸರ ತರಿಸಿದೆ. ಪಕ್ಷದ ಕೆಲಸ ಮಾಡುತ್ತೇನೆ. 2023ರಲ್ಲಿ ಮತ್ತೆ ಗೆದ್ದು ಸರ್ಕಾರದಲ್ಲಿ ಸಚಿವನಾಗುತ್ತೇನೆ’ ಎಂದರು.

‘ಸುರಪುರದಿಂದ ನಾನು ಗೆದ್ದು ಬಂದಿದ್ದೇನೆ. ನಾವು ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಗೆದ್ದವರು, ಔರಂಗಜೇಬ್‌ನನ್ನು ಸೋಲಿಸಿದವರು. ಸಿಪಾಯಿ ದಂಗೆ ಮೊದಲು ಆರಂಭ ಮಾಡಿದವರು ನಾವು. ಸಿಎಂ ಮಂತ್ರಿ ಸ್ಥಾನ ಕರೆದು ಕೊಟ್ಟರೂ ಬೇಡ ಎಂದು ಹೇಳಿ ಬಂದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT