ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ | ಸಂಸತ್ ಸದಸ್ಯರ ನಿಧಿ ದುರ್ಬಳಕೆ: ಆರೋಪ

₹ 2.50 ಕೋಟಿ ವೆಚ್ಚದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿ
Published 25 ಫೆಬ್ರುವರಿ 2024, 5:44 IST
Last Updated 25 ಫೆಬ್ರುವರಿ 2024, 5:44 IST
ಅಕ್ಷರ ಗಾತ್ರ

ಶಹಾಪುರ: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಜಿಲ್ಲೆಯ 50 ಕಡೆ ಹೈಮಾಸ್ಟ್ ದೀಪ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕಾಮಗಾರಿ ಅನುಷ್ಠಾನದಲ್ಲಿ ಸಂಸತ್ ಸದಸ್ಯರ ನಿಧಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ.

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರ ಶಿಫಾರಸಿನಂತೆ 2023ರ ಸೆಪ್ಟೆಂಬರ್ 3ರಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಅದರಂತೆ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ 2022-2023 ಸಾಲಿನ 1 ಮತ್ತು 2ನೇ ಕಂತಿನ ಅನುದಾನದಲ್ಲಿ ಜಿಲ್ಲೆಯಲ್ಲಿ ₹ 2.50 ಕೋಟಿ ವೆಚ್ಚದಲ್ಲಿ 50 ಕಡೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಇದಕ್ಕೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಅನುಷ್ಠಾನಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.

ಅದರಂತೆ ಯಾದಗಿರಿ ತಾಲ್ಲೂಕಿನಲ್ಲಿ 7, ಶಹಾಪುರ 18, ಸುರಪುರ ಹಾಗೂ ಹುಣಸಗಿ ತಾಲ್ಲೂಕುಗಳಲ್ಲಿ ತಲಾ 10, ವಡಗೇರಾ ತಾಲ್ಲೂಕಿನಲ್ಲಿ 5 ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ವಾಸ್ತವವಾಗಿ ಅಂದಾಜು ಪತ್ರಿಕೆಯಲ್ಲಿ ಉಲ್ಲೇಖಿಸಿದ ಸ್ಥಳದಲ್ಲಿ ಹೈಮಾಸ್ಟ್‌ ದೀಪ ಅಳವಡಿಸಿಲ್ಲ ಎನ್ನುವುದಕ್ಕೆ ತಾಲ್ಲೂಕಿನ ಮದ್ರಿಕಿ ಗ್ರಾಮ ಉತ್ತಮ ಉದಾಹರಣೆ. ಇಲ್ಲಿನ ವಾಲ್ಮೀಕಿ ವೃತ್ತದ ಬಳಿ ಹೈಮಾಸ್ಟ್ ದೀಪ ಅಳವಡಿಸಬೇಕಾಗಿತ್ತು. ಆದರೆ ಅನುಷ್ಠಾನಾಧಿಕಾರಿ ನಿಗದಿಪಡಿಸಿದ ಸ್ಥಳದಿಂದ ಬೇರೆ ಕಡೆ ಅಳವಡಿಸಿದ್ದಾರೆ ಎಂದು ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ ಆರೋಪಿಸಿದರು.

‘ತಾಲ್ಲೂಕಿನ ರಸ್ತಾಪುರ ಗ್ರಾಮದ ಪರಿಶಿಷ್ಟ ಪಂಗಡದವರ ಬಡಾವಣೆಯಲ್ಲಿ ಹೈಮಾಸ್ಟ್ ದೀಪ ಅಳವಡಿಕೆ ಕಾರ್ಯ ನಡೆದಿದೆ. ರಸ್ತಾಪುರ ಗ್ರಾಮದಲ್ಲಿ ಎಸ್ಟಿ ಸಮುದಾಯದವರಿಲ್ಲ. ಅನುದಾನ ದುರ್ಬಳಕೆಯಾಗಿದೆ. ಅಲ್ಲದೆ ಒಂದು ಹೈಮಾಸ್ಟ್ ದೀಪಕ್ಕೆ ₹5 ಲಕ್ಷ ಬೇಕಾಗಿಲ್ಲ. ಸಮಗ್ರವಾಗಿ ತನಿಖೆ ಮಾಡಬೇಕು' ಎಂದು ಒತ್ತಾಯಿಸುತ್ತಾರೆ ಅವರು.

ಸಂಸದರ ನಿಧಿಯನ್ನು ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಭವನ, ಶಾಲಾ ಕಟ್ಟಡ ನಿರ್ಮಾಣ, ಚರಂಡಿ, ಕುಡಿಯುವ ನೀರು ಸೇರಿದಂತೆ ಇತರ ಮೂಲ ಸೌಕರ್ಯ ಒದಗಿಸಲು ಬಳಕೆ ಮಾಡುವುದನ್ನು ಬಿಟ್ಟು ಜನರಿಗೆ ಬೇಡವಾದ ಕಾಮಗಾರಿ ಕೈಗೆತ್ತಿಕೊಂಡಿರುವುದು ಸರಿಯಲ್ಲ. ಹೈಮಾಸ್ಟ್ ದೀಪ ನಿರ್ವಹಣೆ ಯಾರು ಮಾಡಬೇಕು. ಕೆಟ್ಟು ನಿಂತರೆ ದುರಸ್ತಿ ಮಾಡುವುದು ಯಾರು ಎಂಬುದು ಗೊತ್ತಿಲ್ಲ. ಸಂಸತ್ ಸದಸ್ಯರ ಅನುದಾನ ಮೇಲ್ನೋಟಕ್ಕೆ ಹಣ ದುರ್ಬಳಕೆಯಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಜಿಲ್ಲಾಧಿಕಾರಿ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಸಿಪಿಐ (ಎಂ) ಮುಖಂಡ ಚೆನ್ನಪ್ಪ ಆನೆಗೊಂದಿ ಮನವಿ ಮಾಡಿದ್ದಾರೆ.

ಇದರ ಬಗ್ಗೆ ಸ್ಪಷ್ಟನೆ ಪಡೆಯಲು ‘ಪ್ರಜಾವಾಣಿ’ ರಾಯಚೂರು ಸಂಸದರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಸಂಪರ್ಕಕಕ್ಕೆ ಸಿಗಲಿಲ್ಲ.

ತಾಲ್ಲೂಕಿನ ಮದ್ರಕಿ ಗ್ರಾಮದಲ್ಲಿ ವಾಲ್ಮೀಕಿ ವೃತ್ತದ ಹತ್ತಿರ ₹ 5 ಲಕ್ಷ ವೆಚ್ಚದ ಹೈಮಾಸ್ಟ್ ದೀಪ ಅಳವಡಿಸಿದೆ. ಜಾಗದ ಬಗ್ಗೆ ತಕರಾರು ಬಂದಾಗ ಗ್ರಾ.ಪಂ ಸದಸ್ಯರ ಜತೆ ಸಮಾಲೋಚಿಸಿ ಕ್ರಮ ತೆಗೆದುಕೊಳ್ಳಲಾಗಿದೆ.

-ಕಾಳಿಕಯ್ಯ ಸ್ವಾಮಿ ಜಿ.ಪಂ.ಎಂಜಿನಿಯರ್ ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT