ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಜಿಲ್ಲೆಯ 352 ಕೆರೆಗಳು ಬಹುತೇಕ ಖಾಲಿ

ಬಿಸಿಲಿನ ಪ್ರಖರತೆಗೆ ಬತ್ತಿದ ಕೆರೆ, ಸುತ್ತಲಿನ ಅಂತರ್ಜಲ ಮಟ್ಟವೂ ಕುಸಿತ: ಜಲಚರಗಳಿಗೆ ಕಂಟಕ
Published 11 ಮಾರ್ಚ್ 2024, 5:26 IST
Last Updated 11 ಮಾರ್ಚ್ 2024, 5:26 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 352 ಕೆರೆಗಳಿದ್ದು, ಭೀಕರ ಬರಗಾಲದ ಪರಿಣಾಮ ಅವು ಬರಿದಾಗಿವೆ. ಮುಂಗಾರು, ಹಿಂಗಾರು ಸಮರ್ಪಕವಾಗಿ ಸುರಿಯದ ಕಾರಣ ನೀರಿಲ್ಲದೇ ಬಣಗುಡುತ್ತಿವೆ. ಕೆಲವು ಕಡೆ ಕೆರೆಯ ಒಡಲು ಬತ್ತಿ ಬಾಯ್ದೆರೆದಿದೆ. 

ಮಳೆಯ ಅಭಾವ, ಕಾಲುವೆಗೆ ನೀರು ಸ್ಥಗಿತಗೊಳಿಸಿರುವುದರಿಂದ ಅರ್ಧಕ್ಕೂ ಹೆಚ್ಚು ಕೆರೆಗಳು ಬತ್ತಿ ಹೋಗಿವೆ. ಕೆರೆಯ ಸುತ್ತಲಿನ ಅಂತರ್ಜಲ ಮಟ್ಟವೂ ಕುಸಿದಿದೆ. ಕೆರೆಯಲ್ಲಿ ಆಶ್ರಯ ಪಡೆದಿದ್ದ ಮೀನು, ಕಪ್ಪೆ, ಹಾವು ಹಾಗೂ ಇತರ ಜಲಚರ ಪ್ರಾಣಿಗಳಿಗೆ ಕಂಟಕ ಎದುರಾಗಿದೆ.

ಕೆರೆಗಳಿಗೂ ಬಹುತೇಕ ಕಡೆ ನಾಮಫಲಕ ಹಾಕಿಲ್ಲ. ಗಡಿ ಗುರುತಿಸಿಲ್ಲ. ಇದರಿಂದ ಎಲ್ಲೆಡೆ ಒತ್ತುವರಿ ನಡೆದಿದೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಯ ಹೆಚ್ಚುವರಿ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತದೆ. ಆದರೆ, ಈ ಬಾರಿ ಕಾಲುವೆ ನೀರನ್ನು ಡಿಸೆಂಬರ್‌ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಮುಂಗಾರು ಕೈಕೊಟ್ಟಿದ್ದರಿಂದ ಬಿಸಿಲಿನ ಪ್ರಖರತೆಗೆ ಕೆರೆಯಲ್ಲಿ ಸಂಗ್ರಹವಾಗಿದ್ದ ನೀರು ಬರಿದಾಗುತ್ತಲಿದೆ.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆಯಲ್ಲಿ 100 ರಿಂದ 300 ಎಕರೆ ತನಕ ವಿಶಾಲ ವ್ಯಾಪ್ತಿ ಹೊಂದಿದ ಕೆರೆಗಳಿವೆ. ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 71 ಕೆರೆಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ನೀರಾವರಿಗೆ ಮಾತ್ರ ಬಳಸಬಹುದಾಗಿದೆ.

ಈ ಹಿಂದೆ ಜಿಲ್ಲೆಯಲ್ಲಿ ಭಾರತೀಯ ಜೈನ್‌ ಸಂಘಟನಾ (ಬಿಜೆಎಸ್‌), ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆಯಡಿ ಕೆಲವು ಗ್ರಾಮಗಳ ಕೆರೆಗಳ ಹೂಳೆತ್ತುವ ಕಾಮಗಾರಿ ಮಾಡಲಾಗಿದೆ.

‘ಜಿಲ್ಲೆಯ ಕೆರೆಗಳ ಸಂರಕ್ಷಣೆ ಮಾಡಿಲ್ಲ. ಕೆರೆಯಲ್ಲಿ ಜಾಲಿ ಗಿಡ, ಅನುಪಯುಕ್ತ ತ್ಯಾಜ್ಯ ಸಂಗ್ರಹವಾಗಿ ಹುಲ್ಲು ಬೆಳೆದು ನಿಂತಿದೆ. ನರೇಗಾ ಯೋಜನೆ ಅಡಿಯಲ್ಲಿ ಸ್ವಚ್ಛಗೊಳಿಸಿದರೆ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ’ ಎನ್ನುವ ಸಲಹೆಯನ್ನು ರೈತ ಮಲ್ಲಪ್ಪ ನೀಡುತ್ತಾರೆ.

ನಿಜಾಮರ ಕಾಲದಲ್ಲಿ ಪ್ರತಿಯೊಂದು ಗ್ರಾಮಕ್ಕೆ ಹೊಂದಿಕೊಂಡು ಒಂದು ಕೆರೆ ನಿರ್ಮಿಸಲಾಗಿತ್ತು. ಸಂಗ್ರಹವಾಗುವ ಕೆರೆ ನೀರು ಬಳಸಿಕೊಂಡು ವ್ಯವಸಾಯ ಮಾಡುತ್ತಿದ್ದರು. ಈಗ ಅವೆಲ್ಲ ಮಾಯವಾಗಿವೆ. ಅಂಥ ಕೆರೆಗಳನ್ನು ಪತ್ತೆ ಹಚ್ಚಿ ಬರುವ ದಿನಗಳಲ್ಲಿ ನೀರು ತುಂಬಿಸುವ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ನಿರ್ವಹಣೆ ಇಲ್ಲದೆ ಹಾಳು ಬಿದ್ದ ಕೆರೆಗಳಿಗೆ ಸೂಕ್ತ ರಕ್ಷಣೆ ಒದಗಿಸಿ ಜೀವ ಜಲ ಉಳಿಸಿ ಬೆಳೆಸಬೇಕು ಎನ್ನುವುದು ಜನರ ಮನವಿಯಾಗಿದೆ.

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ನಾಮದೇವ ವಾಟ್ಕರ್‌, ಭೀಮಶೇನರಾವ ಕುಲಕರ್ಣಿಕೆರೆಗಳಲ್ಲಿ ನೀರು ಕಡಿಮೆಯಾದ ಕಾರಣ ಅಂರ್ಜಲಮಟ್ಟ ಕಡಿಮೆಯಾಗಿದೆ. ಯಂಪಾಡ ಮಧಾವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರು ಪಡೆದು ಪೂರೈಕೆ ಮಾಡಲಾಗುತ್ತಿದೆ

-ಬಸವರಾಜ ಶರಭೈ ಇಒ ತಾಲ್ಲೂಕು ಪಂಚಾಯಿತಿ ಯಾದಗಿರಿ

ಯಾದಗಿರಿ ನಗರದ ದೊಡ್ಡ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು            ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ
ಯಾದಗಿರಿ ನಗರದ ದೊಡ್ಡ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು            ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ
ಶಹಾಪುರ ತಾಲ್ಲೂಕಿನ ಹೊಸಕೇರಾ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದು
ಶಹಾಪುರ ತಾಲ್ಲೂಕಿನ ಹೊಸಕೇರಾ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದು
ವಡಗೇರಾ ಪಟ್ಟಣದಿಂದ ಅನತಿ ದೂರದಲ್ಲಿರುವ ಹೊಸ ಕೆರೆ ಬತ್ತಿರುವುದು
ವಡಗೇರಾ ಪಟ್ಟಣದಿಂದ ಅನತಿ ದೂರದಲ್ಲಿರುವ ಹೊಸ ಕೆರೆ ಬತ್ತಿರುವುದು
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 71 ಕೆರೆಗಳಿದ್ದು ಈ ಬಾರಿ 4 ಕೆರೆಗಳು ಭರ್ತಿಯೇ ಆಗಿಲ್ಲ. ಶೇ 1 ರಿಂದ 30 ರಷ್ಟು 65 ಕೆರೆಗಳು ಶೇ 31 ರಿಂದ 50 ರಷ್ಟು 2 ಕೆರೆಗಳು ಭರ್ತಿಯಾಗಿವೆ
- ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ
ಕೆರೆಗಳಲ್ಲಿ ನೀರು ಕಡಿಮೆಯಾದ ಕಾರಣ ಅಂರ್ಜಲಮಟ್ಟ ಕಡಿಮೆಯಾಗಿದೆ. ಯಂಪಾಡ ಮಧಾವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರು ಪಡೆದು ಪೂರೈಕೆ ಮಾಡಲಾಗುತ್ತಿದೆ
-ಬಸವರಾಜ ಶರಭೈ ಇಒ ತಾಲ್ಲೂಕು ಪಂಚಾಯಿತಿ ಯಾದಗಿರಿ
ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 40 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ 5 ಕೆರೆಗಳಿವೆ. ಇಲ್ಲಿ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ ಜಲಚರಗಳಿಗೆ ಅಪಾಯವಿಲ್ಲ
- ಉಮೇಶ ಭೋವಿ ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ
ಸರ್ಕಾರ ಬರಗಾಲ ಕಾಮಗಾರಿ ಅಡಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಒತ್ತುವರಿ ತಡೆಯಬೇಕು. ಜಲಚರಗಳನ್ನು ರಕ್ಷಿಸಬೇಕು
- ವೆಂಕಟರೆಡ್ಡಿ ಭೋವಿ ಸಾಮಾಜಿಕ ಕಾರ್ಯಕರ್ತ
ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅವಶ್ಯಕತೆ ಇರುವ ಕಡೆ ನೀರಿನ ತೊಟ್ಟಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು
- ಮಲ್ಲಿಕಾರ್ಜುನ ಸಂಗ್ವಾರ್ ತಾ.ಪಂ. ಇಒ ವಡಗೇರಾ
ತಾಲ್ಲೂಕು ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಡೆದರೆ ಜಾನುವಾರುಗಳಿಗೆ ಹಾಗೂ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಅನುಕೂಲವಾಗಲಿದೆ
- ಯಂಕಣ್ಣ ಬಸಂತಪುರ ರೈತ ವಡಗೇರಾ
ಕೆರೆಯ ಒಡಲು ಬರಿದಾಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿತವಾಗಿ ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ. ಕೆರೆಯಲ್ಲಿನ ತ್ಯಾಜ್ಯ ವಸ್ತುಗಳನ್ನು ತೆಗೆಯಬೇಕು
- ಮಲ್ಲಪ್ಪ ರೈತ

ಜಿಲ್ಲೆಯ ಕೆರೆಗಳ ವಿವರ ಸಣ್ಣ ನೀರಾವರಿ ಇಲಾಖೆಯ ಕೆರೆಗಳು ಯಾದಗಿರಿ;31 ಗುರುಮಠಕಲ್‌;25 ಶಹಾಪುರ;6 ವಡಗೇರಾ;3 ಸುರಪುರ;4 ಹುಣಸಗಿ;2 ಒಟ್ಟು;71 ತಾಲ್ಲೂಕು; ಪಂಚಾಯತ್‌ ರಾಜ್‌ ಇಲಾಖೆಯ ಎಂಜಿನಿಯರಿಂಗ್ ವಿಭಾಗ;ಸಣ್ಣ ನಿರಾವರಿ ಇಲಾಖೆ;ಒಟ್ಟು ಯಾದಗಿರಿ;190;56;246 ಶಹಾಪುರ;60;09;69 ಸುರಪುರ;31;06;37 ಒಟ್ಟು;281;71;352

ಬರಿದಾದ ಕೆರೆಗಳು ಸುರಪುರ: ಸುರಪುರದ ಅರಸರು ಪ್ರಜೆಗಳ ಉಪಯೋಗಕ್ಕೆ ಅನೇಕ ಕೆರೆಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ನಗರ ಪ್ರದೇಶದ ಹಲವು ಕೆರೆಗಳನ್ನು ಜನರು ಒತ್ತುವರಿ ಮಾಡಿಕೊಂಡಿದ್ದಾರೆ. ಮಾಚಗುಂಡಾಳ ಭೈರಿಮರಡಿ ಕಕ್ಕೇರಾ ಬೊಮ್ಮನಳ್ಳಿ ಖಾನಾಪುರ ಎಸ್.ಕೆ. ರಾಯಗೇರಾ ದೇವಿಕೇರಾ ಹಾಲಗೇರಾ ಗುಡಿಹಾಳ ಹಸನಾಪುರ ಮಾವಿನಮಟ್ಟಿ ಜಾಲಿಬೆಂಚಿ ಪೇಠ ಅಮ್ಮಾಪುರ ಬೋನ್ಹಾಳ ತಳವಾರಗೇರಾ ರುಕ್ಮಾಪುರ ದೇವರಗೋನಾಲ ಏವೂರ ಯಕ್ತಾಪುರ ಬಾದ್ಯಾಪುರ ಸೇರಿದಂತೆ ಇತರ ಕೆಲ ಗ್ರಾಮಗಳಲ್ಲಿ ಒಟ್ಟು 50ಕ್ಕೂ ಹೆಚ್ಚು ಕೆರೆಗಳು ದಾಖಲೆಯಲ್ಲಿವೆ. ಕಳೆದ ವರ್ಷ ಅಮೃತ ಸರೋವರ ಯೋಜನೆಯಲ್ಲಿ ಬಾದ್ಯಾಪುರ ಪೇಠ ಅಮ್ಮಾಪುರ ಏವೂರ ಯಕ್ತಾಪುರ ಕೆರೆಗಳನ್ನು ನರೇಗಾ ಕಾಮಗಾರಿಯಡಿ ಅಭಿವೃದ್ಧಿ ಪಡಿಸಲಾಗಿತ್ತು. ಹೂಳೆತ್ತಿ ಕೆರೆಯ ಒಡ್ಡನ್ನು ಭದ್ರಪಡಿಸಲಾಗಿತ್ತು.

ಹೊಸ ಕೆರೆ: ನೀರಿಲ್ಲದೆ ಭಣ ಭಣ ವಡಗೇರಾ: ಪಟ್ಟಣದಲ್ಲಿರುವ ಹೊಸ ಕೆರೆ ತಾಲ್ಲೂಕು ವ್ಯಾಪ್ತಿಯ ಕೆರೆಗಳಿಗೆ ಕಿರೀಟವಿದ್ದಂತೆ ಈ ಕೆರೆಯು ಸುಮಾರು 80 ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆಯಿಂದ ಸುಮಾರು 100 ಎಕರೆಗಿಂತಲೂ ಹೆಚ್ಚು ಜಮೀನಿಗೆ ಕಾಲುವೆಗಳ ಮುಖಾಂತರ ನೀರು ಸರಬರಾಜು ಆಗುತಿತ್ತು. ಆದರೆ ಈ ವರ್ಷ ಮಳೆಯಾಗದೆ ಇರುವುದರಿಂದ ಕೆರೆ ಸಂಪೂರ್ಣವಾಗಿ ಖಾಲಿಯಾಗಿದೆ. ಇದರಿಂದಾಗಿ ರೈತರು ಜಮೀನುಗಳಲ್ಲಿ ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಬೆಳೆಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದಾರೆ. ರೈತರು ನೀರು ಕುಡಿಸಲು ಜಾನುವಾರುಗಳನ್ನು ಈ ಕೆರೆಗೆ ಹಿಡಿದುಕೊಂಡು ಬರುತ್ತಿದ್ದರು. ಆದರೆ ಈ ವರ್ಷ ಕೆರೆಯಲ್ಲಿ ನೀರಿಲ್ಲದೆ ಇರುವುದರಿಂದ ರೈತರು ಜಾನುವಾರುಗಳಿಗೆ ಹೇಗೆ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಆತಂಕ ವ್ಯಕ್ತಪಡಿಸುತ್ತಾರೆ. ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರದ ಅಧೀನಕ್ಕೆ ಒಳಪಟ್ಟ 12 ಕೆರೆಗಳಿವೆ. ಬಹುತೇಕ ಕೆರೆಗಳು ಖಾಲಿಯಾಗಿರುವುದರಿಂದ ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗುತ್ತದೆ ಎಂದು ಅನೇಕ ರೈತರು ಹೇಳುತ್ತಾರೆ.

ಜಲಮೂಲಗಳ ರಕ್ಷಣೆಗೆ ಬೇಕಿದೆ ಆಸಕ್ತಿ ಹುಣಸಗಿ: ತಾಲ್ಲೂಕಿನ ಕೊಡೇಕಲ್ಲ ಬಲಶೆಟ್ಟಿಹಾಳ ಗ್ರಾಮಗಳಲ್ಲಿರುವ ಕೆರೆಗಳನ್ನು ಹೊರತುಪಡಿಸಿದರೆ ಕೋಳಿಹಾಳ ತೀರ್ಥರಾಯನಪಾಳ ಸೇರಿದಂತೆ ಇತರ ಗ್ರಾಮಗಳಲ್ಲಿರುವ ಕೆರೆಗಳು ನೀರಿಲ್ಲದೆ ಖಾಲಿಯಾಗಿವೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು ಹೋಗಿದ್ದು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ‘ಬಲಶೆಟ್ಟಿಹಾಳ ಗ್ರಾಮದಲ್ಲಿರುವ ಕೆರೆ ಒತ್ತುವರಿಯಾಗಿದ್ದು ಕೆಲ ಜನರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಕುರಿತು ಈಗಾಗಲೇ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ’ ಎಂದು ಭ್ರಷ್ಟಾಚಾರ ನಿಗ್ರಹ ದಳ ಸಂಘಟನೆಯ ಜಿಲ್ಲಾ ಪ್ರಮುಖ ಕಾಶಿನಾಥ ಹಾದಿಮನಿ ಅಸಮಾಧಾನ ವ್ಯಕ್ತಪಡಿಸಿದರು. ‘ಕೆರೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಇರುವುದರಿಂದ ಸುತ್ತಮುತ್ತಲಿನ ಕುಪ್ಪಿ ದ್ಯಾಮನಾಳ ಬಲಶೆಟ್ಟಿಹಾಳ ಗ್ರಾಮಗಳು ಅಂತರ್ಜಲ ಮಟ್ಟ ಕಾಪಾಡಿಕೊಂಡಿವೆ’ ಎಂದು ಗ್ರಾಮಸ್ಥರು ಹೇಳಿದರು. ‘ಗ್ರಾಮೀಣ ಭಾಗದ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು. ಹಳ್ಳ–ಕೊಳ್ಳ ಕೆರೆ–ಕಟ್ಟೆಗಳಲ್ಲಿ ನೀರು ನಿಲ್ಲುವಂತೆ ನೋಡಿಕೊಂಡು ಅಂತರ್ಜಲ ಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆಯಾಗಲಿದೆ’ ಎಂದು ಭಾರತೀಯ ಕಿಸಾನ್ ಸಂಘದ ಪ್ರಮುಖ ಪ್ರಾಣೇಶ ಕುಲಕರ್ಣಿ ಹೇಳಿದರು.

ಬರಿದಾಗುತ್ತಿರುವ ಕೆರೆಯ ಒಡಲು ಶಹಾಪುರ: ತಾಲ್ಲೂಕಿನಲ್ಲಿ ಹಲವಾರು ಕೆರೆಗಳು ಭತ್ತದ ಗದ್ದೆಗಳಾಗಿ ಮಾರ್ಪಟ್ಟಿವೆ. ‘ಕೆರೆಯ ಸ್ವಾಧೀನತೆ ಹಾಗೂ ಕಬ್ಜಾ ಮಾಲೀಕನದ್ದಾಗಿದ್ದರೂ ಕೆರೆ ನೀರು ಖಾಲಿ ಮಾಡುವ ಅಧಿಕಾರ ಇಲ್ಲ. ಆದರೂ ಗ್ರಾಮಕ್ಕೆ ಹೊಂದಿಕೊಂಡ ಹಲವಾರು ಕೆರೆಗಳನ್ನು ಮಾಯ ಮಾಡಿ ಭತ್ತ ನಾಟಿ ಮಾಡಿದ ಕಾರಣ ಅಂತರ್ಜಲ ಮಟ್ಟ ಕುಸಿದಿದೆ. ಗ್ರಾಮಸ್ಥರಿಗೆ ಈಗ ಅದರ ಬಿಸಿ ತಟ್ಟುತ್ತಿದೆ’ ಎನ್ನುತ್ತಾರೆ ಹಿರಿಯ ವಕೀಲ ಆರ್.ಚೆನ್ನಬಸ್ಸು ವನದುರ್ಗ. ತಾಲ್ಲೂಕಿನಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ನಿರೀಕ್ಷಿಸಿದಷ್ಟು ಯಶಸ್ವಿಯಾಗಿಲ್ಲ. ತಾಲ್ಲೂಕಿನ ನಡಿಹಾಳ ಕೆರೆಗೆ ಜೆಬಿಸಿ ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆ ಇದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ ಕೆರೆ ಹಾಳು ಬಿದ್ದಿದೆ. ಆದರೆ ಹೊಸಕೇರಾ ಕೆರೆಗೆ ನೀರು ತುಂಬಿಸುವ ಯೋಜನೆ ಕಾರ್ಯಗತವಾಗಿರುವುದು ಸಮಾಧಾನ ತಂದಿದೆ. ‘ನಗರದ ಮಾವಿನಕೆರೆ ಹಾಗೂ ನಾಗರಕೆರೆಗೆ ಕೆಬಿಜೆಎನ್‌ಎಲ್ ನಿಗಮದಡಿಯಲ್ಲಿ ₹4.80 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಕಾಮಗಾರಿ ಭರದಿಂದ ಸಾಗಿದೆ. ಅಲ್ಲದೆ ಸದ್ಯಕ್ಕೆ ಎರಡು ಕೆರೆಯಲ್ಲಿ ಅಲ್ಪ ಪ್ರಮಾಣದ ನೀರಿನ ಸಂಗ್ರಹವಿದೆ’ ಎನ್ನುತ್ತಾರೆ ನಗರದ ನಿವಾಸಿ ಉಮೇಶ ಕುಲಕರ್ಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT