ಭಾನುವಾರ, ಜನವರಿ 26, 2020
21 °C
ಕೆಂಭಾವಿ: ಮರಳಿ ಕುಟುಂಬ ಸೇರಿದ ವೃದ್ಧೆ ಹೊನ್ನಮ್ಮ

ತಾಯಿಯನ್ನೇ ಹೊರದಬ್ಬಿದ್ದ ಮಗ!

 ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಹೆತ್ತ ಮಕ್ಕಳಿಗೆ ಬೇಡವಾಗಿ ಮೂರು ತಿಂಗಳಿಂದ ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಅನಾಥಳಾಗಿ ಕಾಲ ಕಳೆಯುತ್ತಿದ್ದ ಹೊನ್ನಮ್ಮ (70) ಎಂಬುವವರು ಅಧಿಕಾರಿಗಳ ಸತತ ಪ್ರಯತ್ನದಿಂದ ಮತ್ತೆ ಮಕ್ಕಳ ಬಳಿಗೆ ತೆರಳಿದ ಘಟನೆ ಗುರುವಾರ ನಡೆದಿದೆ.

ಘಟನೆ ಹಿನ್ನೆಲೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರತಿ ಸೋಮವಾರ ದನದ ಸಂತೆ ನಡೆಯುತ್ತದೆ. ಮಾರುಕಟ್ಟೆ ಆವರಣದಲ್ಲಿರುವ ಶೆಡ್ಡಿನಲ್ಲಿ ನಿರ್ಗತಿಕಳಾಗಿ ಉಪಜೀವನ ನಡೆಸುತ್ತಿದ್ದ ವೃದ್ಧೆಯನ್ನು ಹಲವರು ಗಮನಿಸಿದ್ದರು. ಆದರೆ ವಿವಿಧ ವ್ಯಾಪಾರದ ಉದ್ದೇಶದಿಂದ ಬಂದಿರಬಹುದು ಎಂದು ಅನೇಕರು ತಿಳಿದು ಸುಮ್ಮನಾಗಿದ್ದರು.

ಅನ್ನ,ನೀರಿಲ್ಲದೆ ಹಗಲು ರಾತ್ರಿ ಕಾಲ ಕಳೆದ ವೃದ್ಧೆಯನ್ನು ಗಮನಿಸಿದ ಪಟ್ಟಣದ ಹಲವರು ಈ ಬಗ್ಗೆ ಕಂದಾಯ ಹಾಗೂ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಅಧಿಕಾರಿಗಳು ಸತತ ಪ್ರಯತ್ನ ನಡೆಸಿ ಈಕೆಯ ಮಗ, ಗ್ರಾಮದಿಂದ ಗ್ರಾಮಕ್ಕೆ ಪಾತ್ರೆ ಮತ್ತು ಪ್ಲಾಸ್ಟಿಕ್ ಸಾಮಾನುಗಳನ್ನು ವ್ಯಾಪಾರ ಮಾಡುತ್ತಿದ್ದ ಜೇವರ್ಗಿ ತಾಲ್ಲೂಕಿನ ಕಲ್ಲೂರ (ಕೆ) ಗ್ರಾಮದ ಪಾಂಡು ಎಂಬುವರನ್ನು ಪತ್ತೆ ಹಚ್ಚಿದ್ದಾರೆ.ಕೆಂಭಾವಿ ಪಟ್ಟಣದ ಬನಶಂಕರಿ ನಗರ ಬಡಾವಣೆಯಲ್ಲಿ ತಾನು ಪತ್ನಿ ಯೊಂದಿಗೆ ವಾಸ ಮಾಡುತ್ತಿದ್ದು, ತಾಯಿ ಯನ್ನು ಇಲ್ಲಿ ತಂದು
ಬಿಟ್ಟಿರುವುದಾಗಿ ಪಾಂಡು ತಪ್ಪೊಪ್ಪಿ ಕೊಂಡಿದ್ದಾನೆ. ತಾಯಿಯನ್ನು ಜತೆಯಲ್ಲಿ ಕರೆದು ಕೊಂಡು ಹೋಗಿ ಸಾಕುವಂತೆ ಪೊಲೀಸರ ಸಮ್ಮುಖದಲ್ಲಿ ಅಧಿಕಾ ರಿಗಳು ಪಾಂಡುವಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ನಂತರ ಪಟ್ಟಣದ ಸಮುದಾಯ ಕೇಂದ್ರದಲ್ಲಿ ಹೊನ್ನಮ್ಮಳ ಆರೋಗ್ಯ ತಪಾಸಣೆಯ ಬಳಿಕ ಮಗ ಮತ್ತು ಸೊಸೆಯ ಜತೆ ಕಳಿಸಿಕೊಟ್ಟು ಕುಟುಂಬಕ್ಕೆ ಸರ್ಕಾರಿಂದ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಅಂಗವಿಕಲ ಕಲ್ಯಾಣ ಮತ್ತು ಹಿರಿಯ ನಾಗರಿಕ ಇಲಾಖೆಯ ಉಪನಿರ್ದೇಶಕ ಶರಣಗೌಡ ಪಾಟೀಲ, ಗ್ರಾಮ ಲೆಕ್ಕಿಗ ಲಕ್ಷ್ಮಣ ತಳವಾರ ಮತ್ತು ಪುರಸಭೆ ಸಿಬ್ಬಂದಿ ಬೀರಪ್ಪ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು