ಬುಧವಾರ, ಜುಲೈ 6, 2022
23 °C
ಕಾಸಿಂಸಾಬ್ ಕೊಲೆ ಪ್ರಕರಣದಲ್ಲಿ ಇನ್ನಿಬ್ಬರು ಭಾಗಿ

ಡಿಎನ್‌ಎ ವರದಿಗಾಗಿ ಕಾಯುತ್ತಿರುವ ಪೊಲೀಸರು

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಮೂರು ತಿಂಗಳ ಹಿಂದೆ ಕಾಸಿಂಸಾಬ್ ಚೌದ್ರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ಕೃತ್ಯ ಮಾಡಿದ ಬಗ್ಗೆ ವೈಜ್ಞಾನಿಕವಾಗಿ ನಿರ್ಧರಿಸಲು ಪೊಲೀಸರು ಡಿ.ಎನ್.ಎ ಪ್ರೋಪೈಲಿಂಗ್ ಪರೀಕ್ಷೆಯ ವರದಿ ವಿಧಿ ವಿಜ್ಞಾನ ಪ್ರಯೋಗಾಲಯ ಬೆಂಗಳೂರಿಗೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಗೋಗಿ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣಾ ಪತ್ರದಲ್ಲಿ ನಮೂದಿಸಿದ್ದಾರೆ.

‘ಮೃತ ಕಾಸಿಂಸಾಬ್ ಚೌದ್ರಿ ಅವರ ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ(ಪಿ.ಎಂ.ಇ) ಕಾಲಕ್ಕೆ ಮೃತನ ಬಲಗೈ ಅಂಗೈಯಲ್ಲಿ ಕಂಡು ಬಂದಿರುವ ಕೂದಲಿನ ಮಾದರಿ ಶವ ಪರೀಕ್ಷೆ ಕಾಲಕ್ಕೆ ನೀಡಲು ವಿನಂತಿಸಿಕೊಂಡ ಮೇರೆಗೆ ವೈದ್ಯರು ನೀಡಿದ್ದು ಅದರಂತೆ ರಾಸಾಯನಿಕ ತಜ್ಞರ ಪರೀಕ್ಷೆಗೆ ನೀಡಲಾಗಿದೆ. ಮೃತ ಕಾಸಿಂಸಾಬ್ ಅವರ ಬಲಗೈ ಅಂಗೈಯಲ್ಲಿರುವ ಶ್ಯಾಂಪಲ್ ಕೂದಲುಗಳನ್ನು ಆರೋಪಿ ಹನೀಫ್ ಚೌದ್ರಿ ಅವರ ರಕ್ತ ಮಾದರಿಯೊಂದಿಗೆ ಹೋಲಿಕೆ ಮಾಡುವ ಕುರಿತು ಪ್ರಕರಣದಲ್ಲಿನ ಆರೋಪಿಯು ಒಪ್ಪಿಗೆ ಪತ್ರವನ್ನು ನೀಡಿದ್ದು ಅದರಂತೆ ಡಿ.ಎನ್.ಎ ಪ್ರೋಪೈಲಿಂಗ್ ಪರೀಕ್ಷೆ ಕುರಿತು ರಕ್ತ ಸಂಗ್ರಹಿಸಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ನ್ಯಾಯಾಲಯವು ಒಪ್ಪಿಗೆ ನೀಡಿತ್ತು. ಆರೋಪಿಯ ರಕ್ತ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ' ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣಾ ಪತ್ರದಲ್ಲಿ ನಮೂದಿಸಿದ್ದಾರೆ.

ಏನಿದು ಕೊಲೆ: ಶಹಾಪುರ ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಕಾಸಿಂಸಾಬ್ ಚೌದ್ರಿ ಅವರು 2021 ಜುಲೈ 21ರಂದು ಬಕ್ರೀದ್ ಹಬ್ಬದ ಪ್ರಯುಕ್ತ ನಮಾಜಗೆ ಹೋಗುವುದನ್ನು ಖಾತರಿಪಡಿಸಿಕೊಂಡ ಆರೋಪಿ ಹನೀಫ್ ಚೌದ್ರಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಪೊಲೀಸರು ಜು.22ರಂದು ಹನೀಫ್ ಚೌದ್ರಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ತನಿಖೆಯನ್ನು ಮುಂದುವರೆಸಿದ ಪೊಲೀಸರು ಹನೀಫ್ ಹಾಗೂ ಮೃತ ಕಾಸಿಂಸಾಬ್(ಚಿಕ್ಕಪ್ಪ) ರಕ್ತ ಸಂಬಂಧಿಕರಾಗಬೇಕು. ಮದುವೆ ವಿಷಯವಾಗಿ ಇಬ್ಬರ ನಡುವೆ ದ್ವೇಷ ಉಂಟಾಗಿತ್ತು. ಆರೋಪಿ ಹನೀಫ್ ಚೌದ್ರಿ ಅವರಿಗೆ ಮುದ್ದೆಬಿಹಾಳ ತಾಲ್ಲೂಕಿನ ನಾಲತವಾಡದ ಅಬ್ದುಲ ಕರೀಂ ಹಾಗೂ ಗೋಗಿ(ಕೆ) ಗ್ರಾಮದ ಚಾಂದಪಾಶ ಅವರು ಕೊಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಪೊಲೀಸರು ದೋಷಾರೋಪಣಾ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.

ಅದರಂತೆ ಹನೀಫ್ ವಿರುದ್ಧ ಕಲಂ 302 ಐಪಿಸಿ ಹಾಗೂ ಅಬ್ದುಲ ಕರೀಂ ಮತ್ತು ಚಾಂದಪಾಶ ವಿರುದ್ಧ ಕಲಂ 109 ಸಂಗಡ 34 ಐಪಿಸಿ ಪ್ರಕಾರ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪತ್ರದಲ್ಲಿ ತಿಳಿದ್ದಾರೆ.

***

ಕಾಸಿಂಸಾಬ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಎನ್.ಎ ಪರೀಕ್ಷೆ ವರದಿಗಾಗಿ ಎದುರು ನೋಡಲಾಗುತ್ತಿದೆ. ಈಗಾಗಲೇ ನ್ಯಾಯಾಲಯಕ್ಕೆ ಮೂವರು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಲಾಗಿದೆ

- ಶ್ರೀನಿವಾಸ ಅಲ್ಲಾಪುರೆ, ಸಿಪಿಐ, ಶಹಾಪುರ (ತನಿಖಾಧಿಕಾರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು