ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿ ಮುಗಿಯದ ಮೂರು ಗ್ರಾಪಂಗಳಿಗಿಲ್ಲ ಚುನಾವಣೆ!

ಸುರಪುರ ತಾಲ್ಲೂಕಿನಲ್ಲಿ ಎರಡು, ಗುರುಮಠಕಲ್‌ ತಾಲ್ಲೂಕಿನ ಒಂದು ಪಂಚಾಯಿತಿ
Last Updated 2 ಡಿಸೆಂಬರ್ 2020, 16:48 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 122 ಗ್ರಾಮ ಪಂಚಾಯಿತಿಗಳಿದ್ದು, ಇವುಗಳಲ್ಲಿ 119 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ಡಿಸೆಂಬರ್ 22, 27ರಂದು ಚುನಾವಣೆ ನಡೆಯುತ್ತದೆ. ಇನ್ನುಳಿದ ಮೂರು ಗ್ರಾಮ ಪಂಚಾಯಿತಿಗಳಿಗೆ ಅವಧಿ ಮುಗಿಯದ ಕಾರಣ ಮೂರು ವರ್ಷದ ನಂತರ ಚುನಾವಣೆ ನಿಗದಿಯಾಗಿದೆ.

ಸುರಪುರ ತಾಲ್ಲೂಕಿನ ಎರಡು ಗ್ರಾಮ ಪಂಚಾಯಿತಿ., ಗುರುಮಠಕಲ್‌ ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿಯಲ್ಲಿ ಈ ವರ್ಷ ಚುನಾವಣೆ ನಡೆಯುವುದಿಲ್ಲ.

ಸುರಪುರ ತಾಲ್ಲೂಕಿನ ಕರಡಕಲ್‌, ಕಿರದಳ್ಳಿ, ಗುರುಮಠಕಲ್‌ ತಾಲ್ಲೂಕಿನ ಅನಪುರ ಗ್ರಾಮ ಪಂಚಾಯಿತಿಗೆ ಮೂರು ವರ್ಷದ ನಂತರ ಚುನಾವಣೆನಡೆಯಲಿದೆ.

ಕಿರದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 11 ಸದಸ್ಯರಿದ್ದು, 6 ವಾರ್ಡ್‌ಗಳಿವೆ. ಕಿರದಳ್ಳಿಯಲ್ಲಿ ನಾಲ್ಕು ವಾರ್ಡ್‌, ಮಾಲಹಳ್ಳಿಯಲ್ಲಿ 2 ವಾರ್ಡ್‌ಗಳಿವೆ. ಕಿರದಳ್ಳಿಯಲ್ಲಿ 8 ಸದಸ್ಯರು, ಮಾಲಹಳ್ಳಿಯಲ್ಲಿ 3 ಸದಸ್ಯರು ಆಯ್ಕೆಯಾಗಿದ್ದಾರೆ.

ಕರಡಕಲ್‌ ಗ್ರಾಮ ಪಂಚಾಯಿತಿಗೆ ಎರಡು ಗ್ರಾಮಗಳು ಒಳಪಡುತ್ತವೆ. ಕರಡಕಲ್‌, ನಡಕೂರ ಗ್ರಾಮಗಳ ವ್ಯಾಪ್ತಿ ಹೊಂದಿದೆ.

10 ಸದಸ್ಯರನ್ನು ಹೊಂದಿದ್ದು, ನಾಲ್ಕು ವಾರ್ಡ್‌ಗಳಿವೆ. ಕರಡಕಲ್‌ ಗ್ರಾಮದ 8 ಸದಸ್ಯರು, ಮೂರು ವಾರ್ಡ್‌, ನಡಕೂರ ಗ್ರಾಮದ ಇಬ್ಬರು ಸದಸ್ಯರು, 1 ವಾರ್ಡ್‌ ಇದೆ.

ಕರಡಕಲ್‌, ಕಿರದಳ್ಳಿ ಗ್ರಾಮ ಪಂಚಾಯಿತಿಗಳು ಏಕಕಾಲಕ್ಕೆ ಒಂದೇ ಬಾರಿ ಚುನಾವಣೆ ಎದುರಿಸಿವೆ.ಕರಡಕಲ್‌ನಿಂದ ಕೆಂಭಾವಿ 7 ಕಿ ಮಿ., ಸುರಪುರ 26 ಕಿ.ಮಿ ಅಂತರದಲ್ಲಿದೆ.

ಗುರುಮಠಕಲ್‌ ತಾಲ್ಲೂಕಿನ ಅನಪುರ 2018ರಲ್ಲಿ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದಿತ್ತು. ಅಧಿಕಾರಾವಧಿ ಇನ್ನೂ ಮೂರು ವರ್ಷ ಇದೆ. ಅನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅನಪುರ, ಯಡೆಪಲ್ಲಿ, ನಸಲವಾಯಿ ಗ್ರಾಮಗಳು ಒಳಪಡುತ್ತಿವೆ. 16 ವಾರ್ಡ್‌ಗಳಿದ್ದು, 14 ಸದಸ್ಯರಿದ್ದಾರೆ. ಅನಪುರ, ಯಡೆಪಲ್ಲಿ ವ್ಯಾಪ್ತಿಗೆ 8, ನಸಲವಾಯಿ ವ್ಯಾಪ್ತಿಗೆ 6 ಸದಸ್ಯರಿದ್ದಾರೆ. ಅನಪುರ ಗ್ರಾಮ ಪಂಚಾಯಿತಿ ಯಾದಗಿರಿಯಿಂದ 40, ಗುರುಮಠಕಲ್‌ನಿಂದ 20 ಕಿ.ಮಿ ವ್ಯಾಪ್ತಿಯಲ್ಲಿದೆ. ಜಿಲ್ಲೆಯಲ್ಲಿ ನಿಧಾನವಾಗಿ ಹಳ್ಳಿ ರಾಜಕೀಯ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆ ಆರಂಭವಾದರೆ ಮತ್ತಷ್ಟು ಬಿರುಸುಗೊಳ್ಳಲಿದೆ.

ಎರಡು ವರ್ಷ ಚುನಾವಣೆ ಬಹಿಷ್ಕಾರ

ಗುರುಮಠಕಲ್‌ ತಾಲ್ಲೂಕಿನ ಅನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಕಾಲ ಚುನಾವಣೆ ಬಹಿಷ್ಕರಿಸಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಸಲವಾಯಿ ಗ್ರಾಮಕ್ಕೆ ಈ ಹಿಂದೆ 8 ಸದಸ್ಯರಿದ್ದರು. ಕಳೆದ ಬಾರಿ ಚುನಾವಣೆಗೆ 6 ಸ್ಥಾನ ನಿಗದಿ ಮಾಡಲಾಗಿತ್ತು. ಇದರಿಂದ ಸದಸ್ಯತ್ವ ಕಡಿತಗೊಳಿಸಿದ್ದರಿಂದ ಗ್ರಾಮಸ್ಥರು ಆಕ್ಷೇಪಿಸಿದ್ದರು. ಎರಡು ವರ್ಷಗಳ ಕಾಲ ಚುನಾವಣೆ ನಡೆದಿರಲಿಲ್ಲ. ನಂತರ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಮನವೊಲಿಸಿ ಚುನಾವಣೆ ನಡೆಸಲಾಗಿತ್ತು. 2018 ಜನವರಿ 30ರಿಂದ ಜನವರಿ 30, 2023ರ ವರೆಗೆ ಅಧಿಕಾರದ ಅವಧಿ ಇದೆ.

ಚುನಾವಣೆಗಾಗಿ ನಡೆದಿತ್ತು ಗೋಲಿಬಾರ್!

ಸುಮಾರು 20–25 ವರ್ಷಗಳ ಹಿಂದೆ ಕರಡಕಲ್‌, ನಡಕೂರ ಕಿರದಳ್ಳಿ ಗ್ರಾಮಗಳ ವ್ಯಾಪ್ತಿಯ ಚುನಾವಣೆ ಸಂಬಂಧ ಗೋಲಿಬಾರ್‌ ನಡೆದಿತ್ತು. ಇದರಲ್ಲಿ ಇಬ್ಬರು ಅಸುನಿಗಿ 4–5 ಜನಕ್ಕೆ ಗಾಯವಾಗಿತ್ತು ಎಂದು ಸ್ಮರಿಸುತ್ತಾರೆ ಗ್ರಾಮಸ್ಥರು.

‘ಚುನಾವಣೆ ವಿಷಯವಾಗಿ ಗ್ರಾಮಗಳ ನಡುವೆ ವಿರೋಧವಿತ್ತು. ಹೀಗಾಗಿ ಇದು ಚುನಾವಣೆಯಲ್ಲಿ ಹೊರಗೆ ಬಂತು. ಈ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದರು. ಆ ವೇಳೆ ಪಿಎಸ್‌ಐ ಅವರ ಮೇಲೆ ಕಲ್ಲು ತೂರಾಟ ನಡೆದಿತ್ತು. ಅವರು ಗಾಯಗೊಂಡಿದ್ದರು. ಇದರಿಂದ ಪಿಎಸ್‌ಐ ಅವರು ಮೇಲೆ ಗೋಲಿಬಾರ್‌ ಮಾಡಿದ್ದರು’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮನಗೌಡ ಶಾಂತಗೌಡ ಪೊಲೀಸ್‌ ಪಾಟೀಲ ನಡಕೂರ ಹೇಳುತ್ತಾರೆ.

‘ಗಂಭೀರ ಗಾಯಗೊಂಡವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಿತ್ತು. ನಂತರ ಚೇತರಿಸಿಕೊಂಡಿದ್ದರು. ಅಂದಿನ ಗೋಲಿಬಾರ್‌ ವೇಳೆ ಗಾಯಗೊಂಡಿದ್ದವರು ಕೆಲ ವರ್ಷಗಳ ಕಾಲ ಇದ್ದರು. ನಂತರ ತೀರಿ ಹೋದರು’ ಎನ್ನುತ್ತಾರೆ ಅವರು.

‘ಈ ಘಟನೆಯಿಂದ 2 ವರ್ಷ ಚುನಾವಣೆ ಮುಂದೂಡಲಾಗಿತ್ತು. ಆನಂತರ ಚುನಾವಣೆ ನಡೆದಿದ್ದರಿಂದ ನಮ್ಮ ಗ್ರಾಮ ಪಂಚಾಯಿತಿಗೆ ಜಿಲ್ಲೆಯಲ್ಲಿ ಚುನಾವಣೆ ನಡೆದರೂ ಮೂರು ವರ್ಷದ ನಂತರ ನಡೆಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT