ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಮೇವಿನ ಕೊರತೆ

37 ವಾರಕ್ಕೆ ಆಗುವಷ್ಟು ದಾಸ್ತಾನು * 2,90,774 ಜಾನುವಾರು* 6,93,940 ಕುರಿ, ಮೇಕೆ
Last Updated 26 ಏಪ್ರಿಲ್ 2022, 5:19 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮೇವಿನ ಕೊರತೆ ಸದ್ಯಕ್ಕಿಲ್ಲ. 37 ವಾರಕ್ಕೆ ಆಗುವಷ್ಟು ದಾಸ್ತಾನು ಮಾಡಿಕೊಳ್ಳಲಾಗಿದೆ.

ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳನ್ನು ಒಳಗೊಂಡಂತೆ ಜಿಲ್ಲೆಯಲ್ಲಿ 2,90,774 ಸಾವಿರ ಹಸು, ಎಮ್ಮೆಗಳಿವೆ. 6,93,940 ಕುರಿ ಮತ್ತು ಮೇಕೆಗಳಿವೆ.

ಬೇಸಿಗೆಯಲ್ಲಿ ಜಲಮೂಲ ಬತ್ತುವುದರಿಂದ ಹಸಿ ಮೇವು ಜಾನುವಾರುಗಳಿಗೆ ಸಿಗುವುದು ದುಸ್ತರವಾಗಿದೆ. ಇದರಿಂದ ಅನೇಕ ಕಡೆ ಮೇವುಗಾಗಿ ತಿರುಗಾಟ ತಪ್ಪುವುದಿಲ್ಲ. ಇದನ್ನು ಮನಗಂಡಿರುವ ಸರ್ಕಾರ ಮೇವು ದಾಸ್ತಾನು ಮಾಡಿಕೊಂಡು ಜಾನುವಾರುಗಳಿಗೆ ಬೇಸಿಗೆಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದೆ.

ಸುರಪುರ ತಾಲ್ಲೂಕಿನಲ್ಲಿ 91,434, ಶಹಾಪುರ ತಾಲ್ಲೂಕಿನಲ್ಲಿ 92,158, ಯಾದಗಿರಿ ತಾಲ್ಲೂಕಿನಲ್ಲಿ 1,07,182 ಹಸು ಮತ್ತು ಎಮ್ಮೆಗಳಿವೆ. ಸುರಪುರ ತಾಲ್ಲೂಕಿನಲ್ಲಿ 2,95,031, ಶಹಾಪುರ ತಾಲ್ಲೂಕಿನಲ್ಲಿ 1,56,065, ಯಾದಗಿರಿ ತಾಲ್ಲೂಕಿನಲ್ಲಿ 2,42,844 ಕುರಿ ಮತ್ತು ಮೇಕೆಗಳಿವೆ.

ಜಾನುವಾರುಗಳಿಗೆ ಪ್ರತಿದಿನ 6 ಕೆಜಿ ಮೇವು ಬೇಕಾಗುತ್ತದೆ. ಜಿಲ್ಲೆಯಲ್ಲಿ ಹಸಿ ಮೇವು ಬೆಳೆಯಲು ಮೇವಿನ ಬೀಜ ವಿತರಿಸಲಾಗಿದೆ. 2021–2022ರ ಸಾಲಿನಲ್ಲಿ 920 ಹೆಕ್ಟೇರ್‌ ಪ್ರದೇಶವು ಮೇವು ಅಭಿವೃದ್ಧಿ ಒಳಪಡಿಸುವ ಪ್ರದೇಶವಾಗಿದೆ. ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ಮೇವು ಬೆಳೆಯಲಾಗಿದೆ.

‘ಜಿಲ್ಲೆಯಲ್ಲಿ 1,329 ಮೇವು ಕಿರುಬೀಜ ಪೊಟ್ಟಣಗಳ ವಿತರಣೆ ಮಾಡಲಾಗಿದೆ.ಮುಂದಿನ ಮುಂಗಾರು ಹಂಗಾಮಿನಲ್ಲಿಯೂ ಮೇವು ಕಿಟ್‌ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.ಮೇವು ಸಂಗ್ರಹ ಖಾಲಿಯಾದರೆ, ಮೇವಿನ ಬ್ಯಾಂಕ್ ಮಾಡಬಹುದಾಗಿದೆ. ಸದ್ಯಕ್ಕೆ ನಮ್ಮಲ್ಲಿ ಇನ್ನೂ ಸಮಸ್ಯೆ ಬಿಗಡಾಯಿಸಿಲ್ಲ’ ಎಂದು ಪಶುಪಾಲನಾ ಅಧಿಕಾರಿಗಳು ಹೇಳಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ ಜಾನುವಾರುಗಳು ಅಧಿಕ ಸಂಖ್ಯೆಯಲ್ಲಿವೆ. ಸುರಪುರ ತಾಲ್ಲೂಕಿನಲ್ಲಿ ಕುರಿ ಮತ್ತು ಮೇಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಬೇಸಿಗೆಯಲ್ಲಿ ಜಾನುವಾರುಗಳಿಗೆ ಬರುವ ರೋಗಗಳು: ಬೇಸಿಗೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ, ಕುರಿ ಮತ್ತು ಮೇಕೆಗಳಲ್ಲಿ ಪೆಸ್ಟೆ ಡೆಸ್ ಪೆಟಿಟ್ಸ್ ರೂಮಿನಂಟ್ಸ್ (ಪಿಪಿಆರ್‌) ಜ್ವರ ಬರುವುದು ಸಾಮಾನ್ಯವಾಗಿದೆ.

2,43,355 ಹಸು ಮತ್ತು ಎಮ್ಮೆಗಳಿಗೆ 2021ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಲಾಗಿದೆ. ಆದರಂತೆ 6,20,508 ಕುರಿ ಮತ್ತು ಮೇಕೆಗಳಿಗೆ ಪಿಪಿಆರ್‌ ಲಸಿಕೆ ನೀಡಲಾಗಿದೆ ಎಂದು ಪಶುಪಾಲನಾ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆಯಲ್ಲಿ ಮೇವು ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ
- ಡಾ.ರಾಜು ದೇಶಮುಖ್, ಉಪನಿರ್ದೇಶಕ, ಪಶು ಇಲಾಖೆ ಮತ್ತು ಪಶುಪಾಲನೆ ಸೇವಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT