ಸೋಮವಾರ, ಸೆಪ್ಟೆಂಬರ್ 16, 2019
26 °C

ಬೇಸಿಗೆ ಕಳೆಯುತ್ತಾ ಬಂದರೂ ಮುಗಿಯದ ಕಾಮಗಾರಿ; ಶುದ್ಧ ನೀರಿಗೆ ಕಾಯುತ್ತಿರುವ ಜನ

Published:
Updated:
Prajavani

ಕೆಂಭಾವಿ: ಸಮೀಪದ ಜೈನಾಪುರ ಗ್ರಾಮದ ಬಳಿ ಎರಡು ವರ್ಷಗಳಿಂದ ನಡೆದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆಮೆಗತಿಯಲ್ಲಿ ಸಾಗಿದ್ದು, 14 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಇನ್ನೂ ಮರೀಚಿಕೆಯಾಗಿದೆ.

ಈ ಬಾರಿ ಬೇಸಿಗೆ ಪ್ರಾರಂಭದಲ್ಲಿ ಕಾಮಗಾರಿ ಪೂರ್ಣಗೊಂದು ಗ್ರಾಮಗಳಿಗೆ ನೀರು ಪುರೈಕೆಯಾಗಬೇಕಿದ್ದ ಕಾಮಗಾರಿಯು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಅಪೂರ್ಣಗೊಂಡಿದ್ದು ಈ ಭಾಗದ ಜನತೆ ನೀರಿಗಾಗಿ ಪರದಾಡುವಂತಾಗಿದೆ.

ಜೈನಾಪುರ, ಕಿರದಳ್ಳಿ, ಕಿರದಳ್ಳಿ ತಾಂಡಾ, ಕರಡಕಲ್ ಸೇರಿ 14 ಗ್ರಾಮಗಳ ಕುಡಿಯುವ ನೀರಿನಲ್ಲಿ ಅಧಿಕ ಪ್ರಮಾಣದ ರಾಸಾಯನಿಕ ವಸ್ತು ಇದ್ದ ಕಾರಣ ಈ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಹಿಂದಿನ ಕಾಂಗ್ರೆಸ್‌ ಸರ್ಕಾರ ₹ 14.5 ಕೋಟಿ ರೂಪಾಯಿಗೆ ಟೆಂಡರ್ ಕರೆದು ಗುತ್ತಿಗೆ ನೀಡಿದೆ. ಕಾಮಗಾರಿಗಾಗಿ 3.5 ಎಕರೆ ಸ್ಥಳ ನೀಡಲಾಗಿದ್ದು, ಟ್ಯಾಂಕ್, ಸಂಪು, ಪಂಪ್ ಹೌಸ್, ನೀರು ಶುದ್ಧೀಕರಣ ಘಟಕ ಕಾಮಗಾರಿ ಪೂರ್ಣಗೊಂಡಿದ್ದು, ಪೈಪ್ ಲೈನ್ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಮಾಲಗತ್ತಿ ಕೆರೆಯಿಂದ ನೀರು ಪೂರೈಕೆ ಮಾಡಲು ಪೈಪ್ ಲೈನ್ ಕಾಮಗಾರಿ ಇನ್ನೂ ಎರಡು ಕಿ.ಮೀ. ಬಾಕಿ ಇದ್ದು, ಗ್ರಾಮಗಳಲ್ಲಿ ನೀರಿನ ಟ್ಯಾಂಕುಗಳಿಗೆ ಪೈಪ್ ಅಳವಡಿಸಬೇಕಾಗಿದೆ.

ಅಲ್ಲದೇ ನೀರು ಸರಬರಾಜು ಮಾಡುವ ಮೋಟಾರ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯ ಇನ್ನೂ ಪ್ರಾರಂಭವಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಿರದಳ್ಳಿ ತಾಂಡಾ ಸೇರಿ ಹಲವು ಗ್ರಾಮಗಳ ಕುಡಿಯುವ ನೀರಿನಲ್ಲಿ ಆರ್ಸೆನಿಕ್ ರಾಸಾಯನಿಕ ಹೆಚ್ಚು ಪ್ರಮಾಣದಲ್ಲಿದ್ದು ಈ ನೀರನ್ನು ಬಳಸದಂತೆ ತಜ್ಞರು ಸಲಹೆ ನೀಡಿದ್ದರು. ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದು, ಅದು ಕುಡಿಯಲು ಮಾತ್ರ ಉಪಯೋಗಿಸಲಾಗುತ್ತದೆ. ಆದರೆ ದಿನಬಳಕೆಗೆ ವಿಷಕಾರಿ ನೀರನ್ನು ಬಳಸುವುದು ಅನಿವಾರ್ಯವಾಗಿದೆ. ಈಗ ಬೇಸಿಗೆಯಲ್ಲಿ ಆ ನೀರೂ ಕೂಡಾ ಸರಿಯಾಗಿ ಸಿಗದೇ ಜನ ನೀರಿಗಾಗಿ ಅಲೆದಾಡುವಂತಾಗಿದೆ ಎನ್ನುತ್ತಾರೆ ಗ್ರಾಮದ ಜನತೆ.

ನವೆಂಬರ್ 2016 ರಲ್ಲಿ ಸ್ಥಳ ಗುರುತಿಸಿ ಗುತ್ತಿಗೆದಾರರಿಗೆ ಟೆಂಡರ್‌ ನೀಡಲಾಗಿದ್ದರೂ ಇದುವರೆಗೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅಲ್ಲದೇ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಗುತ್ತಿಗೆದಾರರ ಕೆಲಸಗಾರರಾಗಲಿ, ಅಧಿಕಾರಿಗಳಾಗಲಿ ಯಾರೊಬ್ಬರೂ ಕಾಣಿಸುತ್ತಿಲ್ಲ. ಕಾವಲುಗಾರನೊಬ್ಬನನ್ನು ನೇಮಕ ಮಾಡಲಾಗಿದ್ದು ಸದ್ಯ ಕಾಮಗಾರಿ ಸ್ಥಗಿತಗೊಂಡಿದೆ ಎನ್ನುತ್ತಾರೆ ದಲಿತ ಮುಖಂಡ ವಿರುಪಾಕ್ಷಿ ಕರಡಕಲ್.

ಆರು ತಿಂಗಳ ಹಿಂದೆ ಜಮೀನಿನಲ್ಲಿ ಬೆಳೆ ಇದೆ. ಬೆಳೆ ಕಟಾವು ಆದ ನಂತರ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದ ಅಧಿಕಾರಿಗಳು ಇದೀಗ ಕೈಗೆ ಸಿಗುತ್ತಿಲ್ಲ.

ಇತ್ತೀಚೆಗೆಷ್ಟೆ ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

Post Comments (+)