ಜೆಡಿಎಸ್ ಬಿಡುವ ಚಿಂತನೆಯೇ ಇಲ್ಲ: ಶಾಸಕ ನಾಗನಗೌಡ ಕಂದಕೂರ ಸ್ಪಷ್ಟನೆ

ಗುರುಮಠಕಲ್: ‘ನಮ್ಮ ಅಣ್ಣ ಸದಾಶಿವರೆಡ್ಡಿಗೌಡ ಕಂದಕೂರ ಅವರ ಮಾರ್ಗದಲ್ಲಿಯೇ ನಾವು ರಾಜಕೀಯ ಜೀವನವನ್ನು ಆರಂಭಿಸಿದ್ದು, ಜೆಡಿಎಸ್ ಮೂಲಕ ರಾಜಕೀಯವಾಗಿ ಬೆಳೆದಿದ್ದೇವೆ ಹಾಗೂ ದೇವೇಗೌಡರ ಕುಟುಂಬದ ಜೊತೆಗೆ ನಮಗೆ ಆತ್ಮೀಯ ಸಂಬಂಧವಿದ್ದು, ಪಕ್ಷ ತೊರೆಯುವ ಯಾವ ಚಿಂತನೆಯೂ ಇಲ್ಲ’ ಎಂದು ಶಾಸಕ ನಾಗನಗೌಡ ಕಂದಕೂರ ಸ್ಪಷ್ಟನೆ ನೀಡಿದ್ದಾರೆ.
ಈಚೆಗೆ ಶಾಸಕರ ಮಗ ಶರಣಗೌಡ ಕಂದಕೂರ ಪಕ್ಷದ ವರಿಷ್ಠರೊಡನೆ ಅಂತರ ಕಾಯ್ದುಕೊಂಡಿದ್ದು, ಪಕ್ಷ ತೊರೆಯುವ ಚಿಂತನೆಯಲ್ಲಿದ್ದಾರೆ. ಆದ್ದರಿಂದಲೇ ಜೆಡಿಎಸ್ ಯುವ ಘಟಕದಲ್ಲಿದ್ದ ತಮ್ಮ ಸ್ಥಾನ ತೊರೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದ ಕಾರಣ ಶಾಸಕರು ಸ್ಪಷ್ಟನೆ ನೀಡಿದ್ದಾರೆ.
‘ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರು ಶರಣಗೌಡ ಅವರನ್ನು ಪ್ರೀತಿಯಿಂದ ಕಾಣುತ್ತಾರೆ. ಆಸೆ, ಆಮಿಷಗಳಿಗಾಗಿ ಪಕ್ಷಾಂತರ ಮಾಡುವುದಾದರೆ ದೇವದುರ್ಗದಲ್ಲಿಯೇ ಮಾತುಕತೆ ಮುಗಿಸಿ ಪಕ್ಷಾಂತರಗೊಳ್ಳುವುದನ್ನು ಬಿಟ್ಟು, ಕುಮಾರಸ್ವಾಮಿಯವರ ಸರ್ಕಾರವನ್ನು ಉಳಿಸುವ ಕೆಲಸ ನನ್ನ ಮಗ ಮಾಡಿದ್ದೇಕೆ. ನಾವು ಎಂತಹ ಕಠಿಣ ಸಮಯದಲ್ಲಿಯೂ ಪಕ್ಷ ತೊರೆಯುವುದಿಲ್ಲ’ ಎಂದು ತಿಳಿಸಿದ್ದಾರೆ.
‘ನಾನು ರಾಜಕೀಯಕ್ಕೆ ಕಾಲಿಟ್ಟಿದ್ದ ಪಕ್ಷದಲ್ಲೆ ಉಸಿರು ಇರುವವರೆಗೂ ಮುಂದುವರೆಯುತ್ತೇನೆ. ಜೆಡಿಎಸ್ ತೊರೆಯುವ ಯಾವ ಕಾರಣವೂ ನಮಗಿಲ್ಲ. ಯಾರೋ ವದಂತಿ ಹಬ್ಬಿಸಿರಬಹುದು. ಆದರೆ, ಅದು ಅಸಾಧ್ಯದ ಮಾತು. ಇಂತಹ ಸುಳ್ಳು ಸುದ್ದಿಗೆ ಕಾರ್ಯಕರ್ತರು ಕಿವಿಗೊಡುವ ಅವಶ್ಯಕತೆಯಿಲ್ಲ’ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.