ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮಳೆಗೆ ಸಂಪರ್ಕ ಕಳೆದುಕೊಂಡ ಗ್ರಾಮೀಣ ರಸ್ತೆಗಳು

ಕೆರೆ, ಕಟ್ಟೆಗಳಿಗೆ ಹರಿದು ಬಂದ ಅಪಾರ ಪ್ರಮಾಣದ ನೀರು
Last Updated 18 ಸೆಪ್ಟೆಂಬರ್ 2020, 9:28 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ರಸ್ತೆಗಳು ಸಂಪರ್ಕ ಕಳೆದುಕೊಂಡು ಸಾರ್ವಜನಿಕರು ಪರದಾಡುತ್ತಿದ್ದಾರೆ.

ಅಲ್ಲಲ್ಲಿ ಹಳೆ ಮನೆಗಳು ಕುಸಿದು ಬಿದ್ದಿವೆ. ಧವಸ ಧಾನ್ಯಗಳು ಹಾಳಾಗಿವೆ. ಕೆರೆ, ಕಟ್ಟೆಗಳಿಗೆಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಇದರಿಂದ ಕೋಡಿ ಬಿದ್ದು, ನೀರು ಹೊರ ಬರುತ್ತಿದೆ. ಇದರಿಂದ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳ ಮೇಲೆ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಜನರು ಬೇರೆ ಗ್ರಾಮಗಳ ಸಂಪರ್ಕ ಕಳೆದುಕೊಂಡಿದ್ದಾರೆ.

ಈ ವರ್ಷ ವಾಡಿಕೆಗಿಂತ ಅತಿಹೆಚ್ಚು ಮಳೆ ಸುರಿದಿದ್ದರಿಂದ ಈಗಾಗಲೇ ಗ್ರಾಮೀಣ ಭಾಗದ ರಸ್ತೆಗಳು ಕೊಚ್ಚಿಹೋಗಿವೆ. ರೈತರ ಬೆಳೆಯೂ ನಷ್ಟವಾಗಿದೆ.ಕೊರೊನಾಸೋಂಕುನಿಂದತತ್ತರಿಸಿರುವ ಗ್ರಾಮೀಣರು ಈಗ ಮಳೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ,ಜಿಲ್ಲಾಡಳಿತ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ.

ಡ್ಯಾಂನಿಂದ ನೀರು ಬಿಡುಗಡೆ; ರಸ್ತೆ ಸಂಪರ್ಕ ಬಂದ್

ತಾಲ್ಲೂಕಿನ ಯರಗೋಳ ಸಮೀಪದ ಬಾಚವಾರ ಗ್ರಾಮದಲ್ಲಿ ಶುಕ್ರವಾರಬೆಳಗಿನಜಾವ ಸುರಿದ ಗುಡುಗು, ಸಿಡಿಲುಸಹಿತ ಜೋರಾದ ಮಳೆಗೆ ಯಾದಗಿರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಮೇಲೆ, ಹಳ್ಳದ ನೀರು ಹರಿಯುತ್ತಿದೆ.ಇದರಿಂದ ಸಾರ್ವಜನಿಕ ಸಂಚಾರ ಸ್ಥಗಿತಗೊಂಡಿದೆ.ಹೊಲಗಳಲ್ಲಿ ಮಳೆ ನೀರು ನುಗ್ಗಿ ನೂರಾರು ಎಕರೆ ಬೆಳೆ ನಷ್ಟವಾಗಿದೆ ಎಂದು ಗ್ರಾಮದ ಯುವಕ ವಿನೋದಕುಮಾರ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಹತ್ತಿಕುಣಿ ಜಲಾಶಯದಿಂದ ಶುಕ್ರವಾರ ಬೆಳಿಗ್ಗೆಯಿಂದ 300 ಕ್ಯುಸೆಕ್‌ನೀರು ಹೊರ ಬಿಡಲಾಗುತ್ತಿದೆ. ಚಾಮನಳ್ಳಿಯಿಂದ- ಯಾದಗಿರಿ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಾರ್ವಜನಿಕ ಸಂಚಾರ ಸ್ಥಗಿತಗೊಂಡಿದೆ.

‘ಯರಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಥಾನುನಾಯಕ ತಾಂಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಮೇಲೆ 3 ಅಡಿಯಷ್ಟು ಎತ್ತರ ಹಳ್ಳದ ನೀರು ಹರಿಯುತ್ತಿದೆ’ ಎಂದು ಪ್ರತ್ಯಕ್ಷದರ್ಶಿ ಶಿಕ್ಷಕ ಸಣ್ಣಮೀರ ಚಿಕ್ಕಬಾನರ ತಿಳಿಸಿದ್ದಾರೆ.

ಗ್ರಾಮದ 202 ಹೆಕ್ಟೇರ್ ವಿಸ್ತೀರ್ಣದ ದೊಡ್ಡ ಕೆರೆಗೆ ಮಳೆ ನೀರು ಹರಿದು ಬರುತ್ತಿದ್ದು, ಕೆರೆ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ.

ಅರಿಕೇರ(ಬಿ) ಗ್ರಾಮದಲ್ಲಿ ಸಾಬಣ್ಣ ನಾಲತ್ವಾಡ ಎನ್ನುವವರ ಮನೆ ಗೋಡೆ ಕುಸಿದಿದೆ. ನಂದಪ್ಪ ಪೂಜಾರಿ ಜಲಾಲಿ ರೈತನ ಮೆಣಸಿನಕಾಯಿ ಬೆಳೆ ನಷ್ಟವಾಗಿದೆ.

ಖಾನಳ್ಳಿ ಗ್ರಾಮದಲ್ಲಿ ಸುರಿದ ಮಳೆಗೆ ಈರಪ್ಪ ಟಣಕೆದಾರ ಎನ್ನುವವರ ಮನೆ ಗೋಡೆ ಕುಸಿದಿದೆ.ದವಸ ಧಾನ್ಯಗಳು ನಷ್ಟವಾಗಿದ್ದು, ಕೆರೆಯ ಒಡ್ಡು ಬಿರುಕು ಬಿಟ್ಟಿದೆ ಎಂದು ಗ್ರಾಮಸ್ಥರು ತಿಳಿಸಿದರು.

***

ಇನ್ನು ಮಳೆ ಮುಂದುವರೆಯುವ ಲಕ್ಷಣಗಳಿದ್ದು, ಹತ್ತಿಕುಣಿ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಡಲಾಗುವುದು.
ಸುತ್ತಲಿನ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು

ಕೈಲಾಸನಾಥ ಅನ್ವಾರ,ಹತ್ತಿಕುಣಿ ಯೋಜನೆ ಪ್ರಭಾರಿ ಸಹಾಯಕ ಅಭಿಯಂತರ

***

ಗ್ರಾಮೀಣ ಭಾಗದಲ್ಲಿ ಮಳೆ ಸುರಿದ ಕಾರಣ ರಸ್ತೆ ಕೊಚ್ಚಿಕೊಂಡ ಹೋದ ಮಾಹಿತಿ ಬಂದಿದೆ. ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ರಸ್ತೆ ದುರಸ್ತಿ ಪಡಿಸಲಾಗುವುದು

ಚನ್ನಮಲ್ಲಪ್ಪ ಘಂಟಿ, ತಹಶೀಲ್ದಾರ್, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT