ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಹಂತದ ಗ್ರಾ.ಪಂ ಚುನಾವಣೆಗೆ ಅಧಿಸೂಚನೆ

ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ 22 ರಂದು ನಡೆಯುವ ಚುನಾವಣೆ
Last Updated 7 ಡಿಸೆಂಬರ್ 2020, 16:44 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ 6 ತಾಲ್ಲೂಕುಗಳ ಪೈಕಿ ಮೂರು ತಾಲ್ಲೂಕುಗಳಲ್ಲಿ ಮೊದಲ ಹಂತದ ಚುನಾವಣೆ ಡಿ. 22ರಂದು ನಡೆಯಲಿದ್ದು, 1,247 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌., ಅಧಿಸೂಚನೆ ಹೊರಡಿಸಿದ್ದಾರೆ.

ಮೊದಲನೇ ಹಂತದಲ್ಲಿ ಚುನಾವಣೆ ನಡೆಯುವ ಶಹಾಪುರ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ 495 ಸದಸ್ಯ ಸ್ಥಾನ, ಸುರಪುರ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳ 383 ಸದಸ್ಯ ಸ್ಥಾನ ಹಾಗೂ ಹುಣಸಗಿ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳಲ್ಲಿ 369 ಸದಸ್ಯರ ಸೇರಿ ಜಿಲ್ಲೆಯಲ್ಲಿ 1,247 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ.

ಚುನಾವಣೆ ನಡೆಯುವ ತಾಲ್ಲೂಕುಗಳಲ್ಲಿ ಚುನಾವಣೆ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ಶಹಾಪುರ ತಾಲ್ಲೂಕಿಗೆ 3 ಕ್ಷಿಪ್ರ ಸಂಚಾರಿ ದಳ (ಎಫ್‌ಎಸ್‌ಟಿ) ತಂಡ ಹಾಗೂ 12 ಸೆಕ್ಟರ್ ಆಫೀಸರ್ಸ್ ತಂಡ ರಚಿಸಲಾಗಿದೆ.

ಸುರಪುರ ತಾಲ್ಲೂಕಿನಲ್ಲಿ 3 ಕ್ಷಿಪ್ರ ಸಂಚಾರಿ ದಳ (ಎಫ್ಎಸ್‌ಟಿ) ತಂಡ ಹಾಗೂ 10 ಸೆಕ್ಟರ್ ಆಫೀಸರ್ಸ್ ತಂಡ ಹಾಗೂ ಹುಣಸಗಿ ತಾಲ್ಲೂಕಿಗೆ 3 ಕ್ಷಿಪ್ರ ಸಂಚಾರಿ ದಳ (ಎಫ್‌ಎಸ್‌ಟಿ) ತಂಡ 9 ಸೆಕ್ಟರ್ ಆಫೀಸರ್ಸ್ ತಂಡಗಳನ್ನು ರಚಿಸಲಾಗಿದೆ. ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಶಾಂತಿಯುತವಾಗಿ ಮತ್ತು ಸರಳವಾಗಿ ಮತದಾನ ಮಾಡಲು ಮತದಾರರಲ್ಲಿ ಜಿಲ್ಲಾಧಿಕಾರಿ ಕೋರಿದ್ದಾರೆ.

ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ರ ಪ್ರಕಾರ ಜಿಲ್ಲೆಯ ಒಟ್ಟು 6 ತಾಲ್ಲೂಕಿಗಳಲ್ಲಿ ಅವಧಿ ಮುಕ್ತಾಯವಾಗಿರುವ 119 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಚುನಾವಣಾ ವೇಳಾ ಪಟ್ಟಿ ಹೊರಡಿಸಲಾಗಿದೆ.

ಚುನಾವಣಾ ವೇಳಾಪಟ್ಟಿ: ಡಿ.11 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಡಿ.22ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರುಮತದಾನ ಇದ್ದಲ್ಲಿ ಡಿ.24ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿ.30ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ಮತ ಏಣಿಕೆ ಪ್ರಕ್ರಿಯೆ ನಡೆಯಲಿದೆ.

ಜಿಲ್ಲೆಯಲ್ಲಿ ಮೊದಲನೇ ಹಂತದ ಚುನಾವಣೆ ನಡೆಯುವ ತಾಲ್ಲೂಕುಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದೆ ರೀತಿಯಲ್ಲಿ ಚುನಾವಣೆ ಜರುಗಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರ ನೇತೃತ್ವದಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದೆ.

ಶಹಾಪುರ ತಾಲ್ಲೂಕಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರಾಜು, ಹುಣಸಗಿ ತಾಲ್ಲೂಕಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಭು ದೋರೆ, ಸುರಪುರ ತಾಲ್ಲೂಕಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಭಾಕರ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಶಹಾಪುರ ತಾಲ್ಲೂಕಿಗೆ 26 ಜನ ಚುನಾವಣಾಧಿಕಾರಿಗಳು ಹಾಗೂ 28 ಸಹಾಯಕ ಚುನಾವಣಾಧಿಕಾರಿಗಳು, ಸುರಪುರ ತಾಲ್ಲೂಕಿಗೆ 21 ಚುನಾವಣಾಧಿಕಾರಿಗಳು, 23 ಜನ ಸಹಾಯಕ ಚುನಾವಣಾಧಿಕಾರಿ, ಹುಣಸಗಿ ತಾಲ್ಲೂಕಿಗೆ 18 ಚುನಾವಣಾಧಿಕಾರಿಗಳು, 20 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 63 ಗ್ರಾಮ ಪಂಚಾಯಿತಿಗಳಿಗೆ ಚುನಾವಣಾ ಪ್ರಕ್ರಿಯೆ ನಡೆಸಲಾಗುತ್ತದೆ.ಡಿ. 7ರಿಂದ ಡಿ.11 ರವರೆಗೆ ಆಯಾ ಗ್ರಾಮ ಪಂಚಾಯಿತಿಯಲ್ಲಿ ಚುನಾವಣಾಧಿಕಾರಿಯವರಿಗೆ ನಾಮಪತ್ರ ಸಲ್ಲಿಸಬಹುದಾಗಿದೆ.

***

‘ಪಾರದರ್ಶಕವಾಗಿ ಚುನಾವಣೆ ನಡೆಸಲು ಕ್ರಮ’

ಯಾದಗಿರಿ: ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಪಂಚಾಯಿತಿಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಶಾಂತಿಯುತ, ಸರಳವಾಗಿ ಮತದಾನ ಮಾಡಲು ಮತದಾರರಲ್ಲಿ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ ನಡೆಯಲಿರುವ 119 ಗ್ರಾಮ ಪಂಚಾಯಿತಿಗಳಲ್ಲಿ 2,291 ಸದಸ್ಯ ಸ್ಥಾನಗಳಿಗೆ 1,049 ಮತಗಟ್ಟೆಗಳಲ್ಲಿ ಮತದಾನ ಜರುಗಲಿದ್ದು, ಇದಕ್ಕೆ ಸಂಬಂದಿಸಿದಂತೆ ಎಲ್ಲ ಪೂರ್ವ ಸಿದ್ದತೆಯನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ.

ಮತಪತ್ರಗಳ ಮುದ್ರಣಕ್ಕಾಗಿ ಆಯಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮತಪತ್ರ ಮುದ್ರಣಾಲಯಗಳನ್ನು ಗುರುತಿಸಲು ಎಲ್ಲ ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ. ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ಆಯಾ ತಾಲ್ಲೂಕುಗಳಲ್ಲಿ 3 ಕ್ಷಿಪ್ರ ಸಂಚಾರಿ ದಳ (ಎಫ್‌ಎಸ್‌ಟಿ) ಗಳಂತೆ ಒಟ್ಟು ಜಿಲ್ಲೆಯಲ್ಲಿ 18 ಕ್ಷಿಪ್ರ ಸಂಚಾರಿ ದಳಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

***

ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕುಗಳಲ್ಲಿ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ನಿಗದಿಪಡಿಸಿದಂತೆ ಚುನಾವಣೆ ನಡೆಯಲಿದೆ

-ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT