ಭಾನುವಾರ, ಅಕ್ಟೋಬರ್ 20, 2019
22 °C
ಕೃಷಿ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ, ಬಿತ್ತನೆ ಬೀಜ ಕೊರತೆ

ಶೇಂಗಾ ಬೀಜಕ್ಕಾಗಿ ರಾತ್ರಿಯೀಡಿ ಜಾಗರಣೆ

Published:
Updated:
Prajavani

ಯಾದಗಿರಿ: ಹಿಂಗಾರು ಹಂಗಾಮಿನ ಶೇಂಗಾ ಬಿತ್ತನೆಗೆ ಇದು ಸಕಾಲಿಕವಾಗಿದ್ದು, ಬಿತ್ತನೆ ಬೀಜ ಕೊರತೆಯಿಂದ ರೈತರು ಪರದಾಡುತ್ತಿದ್ದಾರೆ.

ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಕಳೆದ ಮೂರು ದಿನಗಳಿಂದಲೂ ಬೀಜಕ್ಕಾಗಿ ರೈತರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ರಜೆ ಇದ್ದರೂ ಅದನ್ನು ಲೆಕ್ಕಿಸದೆ ಮಳೆ, ಬಿಸಿಲಲ್ಲಿಯೂ ಬೀಜಕ್ಕಾಗಿ ಜಾಗರಣೆ ಮಾಡುತ್ತಿದ್ದಾರೆ.

ಹಿಂಗಾರು ಹಂಗಾಮಿಗೆ ರೈತರು ಹೊಲವನ್ನು ಹದ ಮಾಡಿಕೊಂಡಿದ್ದಾರೆ. ಕಳೆದ 15 ದಿನಗಳಿಂದ ರೈತರು ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಕೃಷಿ ಇಲಾಖೆ ನಿರ್ಲಕ್ಷ್ಯದಿಂದ ರೈತರು ಪರದಾಡುತ್ತಿದ್ದಾರೆ.

‘ರೈತ ಸಂಪರ್ಕ ಕೇಂದ್ರಗಳಲ್ಲಿ ಲಂಚ ಕೊಟ್ಟವರಿಗೆ ಮಾತ್ರ ಚೀಟಿಯಲ್ಲಿ ಹೆಸರು ಬರೆದುಕೊಡುತ್ತಾರೆ. ಸಾಲಿನಲ್ಲಿ ನಿಂತವರು ಹಾಗೇಯೇ ನಿಂತುಕೊಳ್ಳಬೇಕು. ಬೇರೆ ಕಡೆ ಹೆಸರು ಬರೆದುಕೊಟ್ಟವರಿಗೆ ಇಲ್ಲಿ ಬೀಜ ವಿತರಣೆ ಮಾಡುತ್ತಿದ್ದಾರೆ. ಇದರಿಂದ ನಮಗೆ ಸಮಸ್ಯೆ ಆಗುತ್ತದೆ’ ಎಂದು ರೈತರು ಆರೋಪಿಸಿದರು.

‘ಚೀಟಿ ಪಡೆಯದವರು ಕೂಡ ಸಾಲಿನಲ್ಲಿ ನಿಂತು ಬೀಜ ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿ, ಅಧ್ಯಕ್ಷರ ಹೆಸರು ಬಳಸಿಕೊಂಡು ಬೀಜ ಪಡೆಯುತ್ತಿದ್ದಾರೆ. ಆದರೆ, ನಮ್ಮನ್ನು ಇಲ್ಲಿ ಸಾಲಿನಲ್ಲಿಯೇ ನಿಲ್ಲಿಸುತ್ತಾರೆ’ ಎಂದು ಕರಕೇರಾ ತಾಂಡಾದ ನಿವಾಸಿ ಶಾಂತಿ ಬಾಯಿ ಆರೋಪಿಸುತ್ತಾರೆ.

ಮಂಗಳವಾರ ರಾತ್ರಿಯಿಂದಲೂ ಮಹಿಳೆಯರು, ಮಕ್ಕಳು ರೈತ ಸಂಪರ್ಕ ಕೇಂದ್ರದಲ್ಲಿ ಬೀಡು ಬಿಟ್ಟಿದ್ದಾರೆ. ಹಲವಾರು ಜನರು ಊಟ ಕಟ್ಟಿಕೊಂಡು ಬಂದು ಅಲ್ಲಿಯೇ ಮಲಗಿದ್ದು, ಬೀಜ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ.

‘ಒಂದು ಎಕರೆಗೆ 1 ಪ್ಯಾಕೇಟ್ ವಿತರಣೆ ಮಾಡಲಾಗುತ್ತಿದೆ. ಹತ್ತಿಕುಣಿ ವ್ಯಾಪ್ತಿಯಲ್ಲಿ 2000 ಎಕರೆ ಶೇಂಗಾ ಬಿತ್ತನೆ ಮಾಡುವ ಅಂದಾಜಿದೆ. ಒಬ್ಬ ರೈತರಿಗೆ ಕನಿಷ್ಠ 2 ಕ್ವಿಂಟಲ್ ಕೊಡಬಹುದು. ರಿಯಾಯ್ತಿ ದರದಲ್ಲಿ ಬೀಜಕ್ಕೆ ಪಹಣಿ, ಪಡಿತರ ಚೀಟಿ, ಫೋಟೋ, ನೀರು ಬಳಕೆ ಪ್ರಮಾಣ ಪತ್ರ, ಆಧಾರ್ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌, ಹೊಲದ ಹೊ‌ಲ್ಡಿಂಗ್‌ ರೈತರು ನೀಡುತ್ತಿದ್ದಾರೆ’ ಎಂದು ಹತ್ತಿಕುಣಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಲ್ಲಿಕಾರ್ಜುನ ಕಂದಾರ್ ಹೇಳುತ್ತಾರೆ.

ನಗರದ ರೈತ ಸಂಪರ್ಕ ಕೇಂದ್ರದ ಬಲಿ ಯರಗೋಳ, ಹತ್ತಿಕುಣಿ, ಅಲ್ಲಿಪುರ ಮುಂತಾದ ಕಡೆಯಿಂದ ರೈತರು ಆಗಮಿಸಿದ್ದರು. ಬೆಳಗಿನಿಂದ ನಿಂತ ನಂತರ ಕೇಂದ್ರದೊಳಗೆ ಹೋದ ನಂತರ ನಿಮ್ಮ ವ್ಯಾಪ್ತಿಯ ರೈತರಿಗೆ ಇಲ್ಲಿ ಶೇಂಗಾ ವಿತರಿಸುವುದಿಲ್ಲ. ನಿಮ್ಮ ವ್ಯಾಪ್ತಿಯ ಹೋಬಳಿಗಳಲ್ಲಿ ಬೀಜ ವಿತರಣೆ ಮಾಡುಲಾಗುತ್ತಿದೆ ಎಂದು ಅಧಿಕಾರಿಗಳು ರೈತರನ್ನು ಸಾಗಹಾಕಿದರು. ಇದರಿಂದ ಜಾಗರಣೆ ಮಾಡಿದರೂ ರೈತರು ಬರಿಗೈಲಿ ತೆರಳುವ ಸ್ಥಿತಿ ನಿರ್ಮಾಣವಾಗಿತ್ತು.

ನೂಕು ನುಗ್ಗಲು: ರೈತರಿಂದ ಶೇಂಗಾ ಬಿತ್ತನೆ ಬೀಜ ಬೇಡಿಕೆ ಹೆಚ್ಚಿದ್ದು, ರೈತ ಸಂಪರ್ಕ ಕೇಂದ್ರದ ಎದುರು ಬಿತ್ತನೆ ಬೀಜ ಪಡೆಯುವುದಕ್ಕೆ ರೈತರಿಂದ ನೂಕುನುಗ್ಗಲು ಉಂಟಾಗಿತ್ತು. ಇದರಿಂದ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಈ ವೇಳೆ ಸಾಲಿನಲ್ಲಿ ಇರುವ ರೈತರಿಗೆ ಲಾಠಿ ರುಚಿ ತೋರಿಸಲಾಗಿದೆ. ಇಲ್ಲಿಯೂ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

***

ಶೇಂಗಾ ಬೀಜ ಪೂರೈಕೆ ಕೊರತೆಯಿಂದ ರೈತರು ಪರದಾಡುತ್ತಿದ್ದಾರೆ. ಪ್ರತಿ ದಿನ 100ದಿಂದ 150 ಕ್ವಿಂಟಲ್ ಮಾತ್ರ ಜಿಲ್ಲೆಗೆ ಬರುತ್ತಿದ್ದು, ಇದರಿಂದ ರೈತರಿಗೆ ವಿತರಣೆಯಲ್ಲಿ ಸಮಸ್ಯೆಯಾಗಿದೆ
-ದೇವಿಕಾ ಆರ್‌., ಜಂಟಿ ಕೃಷಿ ನಿರ್ದೇಶಕಿ

ಶೇಂಗಾ ಬಿತ್ತನೆಗೆ ಈಗ ಒಳ್ಳೆಯ ಸಮಯ. ಆದರೆ, ಬಿತ್ತನೆ ಬೀಜಗಳು ಇಲ್ಲ. ಹೊರಗಡೆ ತೆಗೆದುಕೊಂಡರೆ ₹1200 ಸಾವಿರ ತನಕ ಇದೆ. ಇಲ್ಲಿ ರಿಯಾಯ್ತಿ ಸಿಗುತ್ತದೆ. ಆದರೆ, ಸಾಲುಗಟ್ಟಿ ನಿಂತರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ
-ದಶರಥ ರಾಠೋಡ, ಅಲ್ಲಿಪುರ

Post Comments (+)