ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ ಕುಸಿಯುತ್ತಿರುವ ಅಂತರ್ಜಲಮಟ್ಟ, ಬಾಡಿಗೆ ಮನೆಗಳು ಖಾಲಿ

Published 26 ಫೆಬ್ರುವರಿ 2024, 7:21 IST
Last Updated 26 ಫೆಬ್ರುವರಿ 2024, 7:21 IST
ಅಕ್ಷರ ಗಾತ್ರ

ಯಾದಗಿರಿ: ಸರ್ಕಾರ ಜಿಲ್ಲೆಯ ಆರು ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಈ ಬಾರಿ ಹಿಂದೆಂದಿಗಿಂತಲೂ ನೀರಿನ ಭೀಕರತೆ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ನಗರ ಪ್ರದೇಶದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ನೀರಿಗಾಗಿ ಪರದಾಟ ಶುರುವಾಗಿದೆ. ಇನ್ನೂ ಕೆಲವು ಕಡೆ ಮನೆ ಮಾಲೀಕರು ನೀರಿನ ಕೊರತೆಯಿಂದಾಗಿ ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿಕೊಂಡು ನಗರ ನಿವಾಸಿಗಳು ಜೀವನ ಸಾಗಿಸುವ ಪರಿಸ್ಥಿತಿ ಏರ್ಪಟ್ಟಿದೆ.

ನೀರಿನ ಸಮಸ್ಯೆ ಇರುವ ಕಾರಣ ಬಾಡಿಗೆ ಹೆಚ್ಚಿಸುತ್ತಿದ್ದು, ಈ ಮೂಲಕ ನೀರು ಸರಬರಾಜಿಗೆ ಮನೆ ಮಾಲಿಕರು ಹೊಂದಾಣಿಕೆಗೆ ಮುಂದಾಗಿದ್ದಾರೆ.

ನಗರದಲ್ಲಿ ಭೀಮಾ ನದಿಗೆ ನಿರ್ಮಿಸಿರುವ ಜಾಕ್‌ವೆಲ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಸದ್ಯಕ್ಕೆ ಒಂದು ದಿನ ಬಿಟ್ಟು ನೀರು ಹರಿಸಲಾಗುತ್ತಿದೆ. ಬೇಸಿಗೆ ಕಾಲವಾಗಿದ್ದರಿಂದ ಅಲ್ಲಲ್ಲಿ ನೀರಿಗಾಗಿ ಕೊಡ ಹಿಡಿದು ಅಲೆದಾಡುವ ಪರಿಸ್ಥಿತಿ ಏರ್ಪಟ್ಟಿದೆ.

‘ಭೀಮಾ ನದಿ ಕೆಳಗಡೆ ಜಾಕ್‌ವೆಲ್‌ ಇದ್ದು, ಬ್ರಿಜ್‌ ಕಂ ಬ್ಯಾರೇಜ್‌ನಿಂದ ನೀರು ಹರಿಸಿದರೆ ನದಿಗೆ ಹೋಗುತ್ತದೆ. ಹೀಗಾಗಿ ಮರಳು ಮೂಟೆ ಅಡ್ಡಲಾಗಿ ಕಟ್ಟಲು ಈಗಾಗಲೇ ಸಭೆ ಮಾಡಿ ಟೆಂಡರ್‌ ಕರೆಯಲಾಗಿದೆ. ಯಾದಗಿರಿ ನಗರಕ್ಕೆ ಪ್ರತಿದಿನ 8 ಎಂಎಲ್‌ಡಿ ನೀರಿನ ಅವಶ್ಯವಿದೆ. ಅಲ್ಲಲ್ಲಿ ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೊಗಿರುವ ಬಗ್ಗೆ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಿಸಲು ನಗರಸಭೆ ಸನ್ನದ್ಧವಾಗಿದೆ’ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ.

ಮಾರ್ಚ್‌ ತಿಂಗಳಿಂದ ಸಣ್ಣಗೆ ಕುಡಿಯುವ ನೀರಿನ ಸಮಸ್ಯೆ ಕಾಣಿಸುತ್ತದೆ. ಕಾಲುವೆಯಲ್ಲಿ ನೀರು ಹರಿಸಿದರೆ ಬೇಸಿಗೆ ಕಾಲ ಪಾರು ಮಾಡುತ್ತೇವೆ. ಕುಡಿಯುವ ಉದ್ದೇಶಕ್ಕಾಗಿ ಹೆಚ್ಚಿನ ನೀರಿನ ಸಂಗ್ರಹವು ಜಲಾಶಯದಲ್ಲಿ ಇರುವುದರಿಂದ ಮಾರ್ಚ್ ತಿಂಗಳಲ್ಲಿ ಒಮ್ಮೆ ಕಾಲುವೆಗೆ ನೀರು ಹರಿಸಬೇಕು ಎನ್ನುತ್ತಾರೆ ಗ್ರಾಮೀಣ ಪ್ರದೇಶದ ಜನತೆ.

‘ಈಗಾಗಲೇ ನಗರ ಮತ್ತು ಗ್ರಾಮೀಣ ಭಾಗದ ಕೆಲವೆಡೆ ಕೊರೆದ ಖಾಸಗಿ ಮತ್ತು ಸರ್ಕಾರಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ನೀರು ಸರಬರಾಜಿಗೆ ಸಮಸ್ಯೆಯಾಗುವ ಸಾಧ್ಯೆತಗಳಿವೆ. ಆದ್ದರಿಂದ ತಾಲ್ಲೂಕು ಆಡಳಿತ ಈಗಿನ ಸ್ಥಿತಯನ್ನು ಮಾತ್ರ ಗಮನಿಸದೆ ಬೇಸಿಗೆಯಲ್ಲಿ ಉಂಟಾಗಬಹುದಾದ ಅಭಾವವನ್ನು ಗಮನದಲ್ಲಿಟ್ಟುಕೊಂಡು ತಯಾರಿ ಮಾಡಿಕೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮಹಾದೇವ ಅಭಿಪ್ರಾಯಪಟ್ಟರು.

ಮೈಮರೆಯದಿರಲು ಕೋರಿದ ಜನತೆ

ಗುರುಮಠಕಲ್: ಬೇಸಿಗೆ ಅವಧಿಯಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ಸಂಬಂಧಿತ ಅಧಿಕಾರಿಗಳು ಸಿದ್ಧತೆಯಲ್ಲಿ ತೊಡಗಿರುವುದಾಗಿ ಹೇಳಿದ್ದಾರೆ.

ಆದರೆ, ಅಧಿಕಾರಿಗಳ ಮೈಮರೆವಿನಿಂದ ನೀರಿನ ಸಮಸ್ಯೆ ಉಲ್ಬಣಗೊಂಡು ಜನ ಹೈರಾಣಾಗುವ ಸ್ಥಿತಿ ಬಾರದಿರಲಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ತಾಲ್ಲೂಕಿನ ಯಂಪಾಡ, ಸುಭಾಷನಗರ, ವಂಕಸಂಬ್ರ, ಗಾಜರಕೋಟ, ಪುಟಪಾಕ ಗ್ರಾಮಗಳಲ್ಲಿ ಪ್ರತಿ ವರ್ಷದ ಬೇಸಿಗೆಯಲ್ಲೂ ನೀರಿಗಾಗಿ ಪರದಾಡುವಂತಾಗುತ್ತದೆ. ಜತೆಗೆ ಕೆಲ ಗ್ರಾಮಗಳಲ್ಲಿ ನೀರಿನ ಮೂಲಗಳೂ ಲಭ್ಯವಿಲ್ಲ. ಆದ್ದರಿಂದ ಖಾಸಗಿ ಬೋರ್ ಬಾಡಿಗೆ ಪಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಿದ್ದಾರೆ.

‘ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಇದೆ. ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ, ಪುರಸಭೆ ಸಿಒ, ತೋಟಗಾರಿಕೆ, ಕೃಷಿ, ಪಶುಪಾಲನೆ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಕಂದಾಯ, ಪಂಚಾಯತ್ ರಾಜ್ ಸಿಬ್ಬಂದಿಯನ್ನು ಒಳಗೊಂಡ ತಂಡವು ವಾರಕ್ಕೊಮ್ಮೆ ಸಮಸ್ಯೆಯ ಕುರಿತು ಮಾಹಿತಿ ಕಲೆಹಾಕಿ, ಅಗತ್ಯ ಮುಂಜಾಗ್ರತೆಗಳನ್ನು ಮತ್ತು ಸಮಸ್ಯೆ ನಿವಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಪಟ್ಟಣಕ್ಕೆ ಪ್ರತಿ ದಿನಕ್ಕೆ 3 ಮಿಲಿಯನ್ ಲೀಟರ್ ನೀರಿನ ಅಗತ್ಯತೆಯಿರುವ ಕುರಿತು ಜಿಲ್ಲಾಡಳಿತಕ್ಕೆ ತಿಳಿಸಲಾಗಿದ್ದು, ಯಾದಗಿರಿ ನಗರದ ಭೀಮಾ ನದಿಯಿಂದ ನೀರು ಸರಬರಾಜು ಯೋಜನೆಗೆ ಅಗತ್ಯ ನೀರು ಪೂರೈಕೆಗಾಗಿ ಕೆಬಿಜೆಎನ್‌ಎಲ್‌ಗೆ ಕೋರಲಾಗಿದೆ. ಜತೆಗೆ ಸ್ಥಳೀಯವಾಗಿ ಲಭ್ಯವಿರುವ ಜಲಮೂಲಗಳನ್ನೂ ಸಿದ್ಧವಾಗಿರಿಸಿಕೊಂಡಿದ್ದು, ಯಾವುದೇ ಸಮಸ್ಯೆಯಾಗದಂತೆ ಸಮರ್ಪಕವಾಗಿ ನಿಭಾಯಿಸಲು ಸನ್ನದ್ಧವಾಗಿದ್ದೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ ಮಾಹಿತಿ ನೀಡಿದರು.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ

ಕೈಕಂಪು ಕೊಳವೆ ಬಾವಿ ಅಂತರ್ಜಲ ಕುಸಿದಿರುವ
ಕೈಕಂಪು ಕೊಳವೆ ಬಾವಿ ಅಂತರ್ಜಲ ಕುಸಿದಿರುವ
ಸುರಪುರ ತಾಲ್ಲೂಕಿನ ಕಂಪಾಪುರದಲ್ಲಿರುವ ಪಂಪ್‌ಹೌಸ್ ಹತ್ತಿರ ನೀರಿನ ಸಂಗ್ರಹ ಕಡಿಮೆಯಾಗಿರುವುದು
ಸುರಪುರ ತಾಲ್ಲೂಕಿನ ಕಂಪಾಪುರದಲ್ಲಿರುವ ಪಂಪ್‌ಹೌಸ್ ಹತ್ತಿರ ನೀರಿನ ಸಂಗ್ರಹ ಕಡಿಮೆಯಾಗಿರುವುದು
ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಕಾಣಿಸಿಲ್ಲ. ಮುಂದಿನ ತಿಂಗಳಿಂದ ಸಮಸ್ಯೆ ಕಾಣಿಸಿಕೊಂಡರೆ ಅಗತ್ಯ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದೆ. ಕುಡಿಯುವ ನೀರಿಗಾಗಿ ಸಾಕಷ್ಟು ಅನುದಾನವಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ
–ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ಮುಂದಿನ ದಿನಗಳಲ್ಲಿ ಯಾದಗಿರಿ ನಗರದಲ್ಲಿ 8–10 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ನೀರು ಮಿತವಾಗಿ ಬಳಸಬೇಕು
–ಲಕ್ಷ್ಮೀಕಾಂತ, ನಗರಸಭೆ ಪೌರಾಯುಕ್ತ ಯಾದಗಿರಿ
ಪ್ರತಿ ವರ್ಷವೂ ಬೇಸಿಗೆಗೂ ಮುಂಚೆಯೇ ನಮ್ಮ ಗ್ರಾಮದಲ್ಲಿ ಸಮಸ್ಯೆಯಿರುತ್ತದೆ. ಇದು ಎಲ್ಲಾ ಅಧಿಕಾರಿಗಳಿಗೂ ಗೊತ್ತಿರುವ ವಿಷಯ. ಸಮಸ್ಯೆಯ ತೀವ್ರತೆಯ ವಿರುದ್ಧ ಗ್ರಾಮಸ್ಥರು ಕೇಳಿದಾಗ ಅಥವಾ ಪತ್ರಿಕೆಯಲ್ಲಿ ಬಂದಾಗ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಾರೆ
–ಸಾಬಣ್ಣ ಬೋಯಿನ್, ಯಂಪಾಡ ಗ್ರಾಮಸ್ಥ
ಬೇಸಿಗೆ ಸಮಯದಲ್ಲಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಸಮಸ್ಯೆಯಾಗದಂತೆ ಬೇಕಾದ ಸಿದ್ಧತೆಗಳಲ್ಲಿ ತೊಡಗಿದ್ದೇವೆ. ಭೀಮಾ ನದಿಯಿಂದ ಬರುವ ನೀರಿನ ಜಾಕ್‌ವೆಲ್ ಅರಕೇರಾ ಮತ್ತು ಧರಂಪುರ ಗ್ರಾಮಗಳಲ್ಲಿನ ಪಂಪಿಂಗ್ ಮೋಟಾರ್‌ಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕ ಕ್ರಮವಾಗಿ ದುರಸ್ತಿ ಮಾಡಿಕೊಳ್ಳಲಾಗುತ್ತಿದೆ
–ಭಾರತಿ ಸಿ.ದಂಡೋತಿ ಪುರಸಭೆ ಮುಖ್ಯಾಧಿಕಾರಿ ಗುರುಮಠಕಲ್‌

ಸದ್ಯಕ್ಕೆ ನೀರಿನ ಕೊರತೆ ಕಂಡಿಲ್ಲ

ಶಹಾಪುರ: ಬೇಸಿಗೆಯ ಬಿಸಿ ಶುರುವಾಗಿದ್ದು ನೀರಿನ ಬಿಸಿ ಹಾಗೂ ಕೊರತೆ ಸದ್ಯಕ್ಕೆ ಕಂಡಿಲ್ಲ. ಮಾರ್ಚ್ ಕೊನೆಯ ವಾರದಿಂದ ಕುಡಿಯುವ ನೀರಿನ ಬಿಸಿ ಆರಂಭವಾಗುತ್ತದೆ. ಸದ್ಯಕ್ಕೆ ಕೊಳವೆಬಾವಿಯಲ್ಲಿ ಅಂತರ್ಜಲಮಟ್ಟ ಕುಸಿತವಾಗಿಲ್ಲ. ನೀರಿನ ಬರ ಎದುರಾಗಿಲ್ಲ ಎನ್ನುತ್ತಾರೆ ನಗರದ ಜನತೆ. ‘ನಗರದ ಜನತೆಗೆ ಆಸರೆಯಾಗಿರುವುದು ಫಿಲ್ಟರ್ ಬೆಡ್ ಕೆರೆಯಲ್ಲಿ ಸಂಗ್ರಹವಾದ ನೀರು. ಸದ್ಯಕ್ಕೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡುತ್ತಿದ್ದಾರೆ. ಮುಂದೆ ನೀರಿನ ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ನೀರನ್ನು ಮಿತವಾಗಿ ಬಳಸುವುದು ಮುಖ್ಯವಾಗಿದೆ’ ಎನ್ನುತ್ತಾರೆ ಪೌರಾಯುಕ್ತ ರಮೇಶ ಬಡಿಗೇರ.

‘ಮೂರು ತಿಂಗಳ ಕಾಲ ಹೆಚ್ಚು ಜಾಗೃತರಾಗಿರಬೇಕು. ನೀರಿನ ಸಮಸ್ಯೆ ಕಾಣಿಸದಂತೆ ನೋಡಿಕೊಳ್ಳಬೇಕು. ಎಲ್ಲಿ ನೀರಿನ ಲಭ್ಯತೆ ಇದೆ ಎಂಬುವುದು ಪತ್ತೆ ಹಚ್ಚಿ. ಖಾಸಗಿ ಕೊಳವೆಬಾವಿಯಿಂದ ನೀರು ತೆಗೆದುಕೊಳ್ಳುವ ಬಗ್ಗೆ ಚಿಂತನೆ ಇರಲಿ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಂದರೆ ಆಯಾ ಪಿಡಿಒ ಅವರು ತಕ್ಷಣ ತಾ.ಪಂ. ಇಒ ಗಮನಕ್ಕೆ ತರಬೇಕು. ಈಗಾಗಲೇ ತಾಲ್ಲೂಕಿನ ಚಾಮನಾಳ ಹೊಸಕೇರಾ ಮುಡಬೂಳ ಮುಂತಾದ ಗ್ರಾ.ಪಂ.ಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ಅದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ. ಕುಡಿಯುವ ನೀರಿನ ಸಲುವಾಗಿ ಸಾಕಷ್ಟು ಅನುದಾನವಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಜತೆ ನಾವು ಇದ್ದು ಕೆಲಸ ಮಾಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಜನತೆಗೆ ಅಭಯ ನೀಡಿದ್ದಾರೆ.

ನಿರಂತರ ನೀರಿಗೆ ಕುತ್ತು?

ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ನದಿಯ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ನಿರಂತರ ನೀರಿಗೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ. ನಗರಸಭೆಯ ಎಲ್ಲಾ ವಾರ್ಡ್‌ಗಳ ಮನೆಗಳಿಗೆ ವಾಣಿಜ್ಯ ಕೇಂದ್ರಗಳಿಗೆ ಅಂಗಡಿಗಳು ಸೇರಿದಂತೆ ಇದುವರೆಗೆ ನಿರಂತರ ನೀರು ಯೋಜನೆಯ 11700 ನಲ್ಲಿ ಸಂಪರ್ಕ ನೀಡಲಾಗಿದೆ. ಪಂಪ್‌ಹೌಸ್ ನಿರ್ಮಿಸಿರುವ ನದಿ ಹರಿಯುವ ಸ್ಥಳದಲ್ಲಿ ನೈಸರ್ಗಿಕ ದೊಡ್ಡ ಹೊಂಡವಿದೆ. ಈ ಹೊಂಡ ತುಂಬಿದರೆ ನಗರಕ್ಕೆ ಒಂದು ತಿಂಗಳು ನೀರು ಪೂರೈಸಬಹುದು. ನದಿಯ ಹರಿವು ಈಗ ಇಲ್ಲ. ಹೊಂಡದಲ್ಲಿ 4 ಮೀಟರ್‌ ನೀರು ಸಂಗ್ರಹವಿದೆ.

‘ಮಾರ್ಚ್ ತಿಂಗಳವರೆಗೆ ನೀರು ಪೂರೈಸಲು ಯಾವುದೇ ಸಮಸ್ಯೆ ಇಲ್ಲ. ಏಪ್ರಿಲ್ ಮೇ ತಿಂಗಳು ನೀರಿನ ಸಮಸ್ಯೆ ಎದುರಾಗಬಹುದು. ಈ ಕುರಿತು ಜಿಲ್ಲಾಧಿಕಾರಿಯ ಜೊತೆ ಚರ್ಚೆ ಮಾಡಲಾಗಿದೆ’ ಎನ್ನುತ್ತಾರೆ ಪೌರಾಯುಕ್ತ ಜೀವನ ಕಟ್ಟಿಮನಿ.

‘ನಗರದಲ್ಲಿ 5 ವಲಯಗಳು ಇವೆ. ಏಪ್ರಿಲ್ ಮೇ ತಿಂಗಳು ನಿರಂತರ ನೀರು ಬದಲಿಗೆ ದಿನ ಬಿಟ್ಟು ದಿನ 3 ಗಂಟೆ ನೀರು ಪೂರೈಸುವ ಆಲೋಚನೆ ಇದೆ. ಪ್ರತಿ ವಲಯಕ್ಕೆ ನೀರು ಬಿಡುವ ಸಮಯ ನಿಗದಿ ಮಾಡಲು ಯೋಚಿಸಲಾಗಿದೆ. ನಾರಾಯಣಪುರ ಜಲಾಶಯದಿಂದ ಕುಡಿಯುವ ಸಲುವಾಗಿ ನದಿಗೆ ನೀರು ಹರಿಸಲು ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು. ನಗರ ನೀರು ಸರಬರಾಜು ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆಯ ಮಾಹಿತಿ ಪ್ರಕಾರ ಕಾಲುವೆಗೆ ನೀರು ಹರಿಯುತ್ತಿಲ್ಲವಾದ್ದರಿಂದ ಹಳ್ಳ ಕೊಳ್ಳಗಳು ಬರಿದಾಗಿವೆ. ಮಳೆ ಇಲ್ಲದೆ ಬಾವಿಯಲ್ಲೂ ನೀರಿಲ್ಲ. ಹೀಗಾಗಿ ಅಂತರ್ಜಲ ಮಟ್ಟ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT