ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಗೆ ರೆಡ್‌ ಸಿಗ್ನಲ್‌ ತೋರಿದ ರೈಲ್ವೆ ಇಲಾಖೆ! ಜನರಲ್ಲಿ ನಿರಾಶೆ

ಜಿಲ್ಲಾ ಕೇಂದ್ರವಾದರೂ ಹಲವು ರೈಲುಗಳ ನಿಲುಗಡೆ ಇಲ್ಲ, ವಂದೇ ಭಾರತ್‌ ಹೊಸ ಸೇರ್ಪಡೆ
Published 12 ಮಾರ್ಚ್ 2024, 5:51 IST
Last Updated 12 ಮಾರ್ಚ್ 2024, 5:51 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಕೇಂದ್ರವಾದ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲುಗಳು ಹಲವು ವರ್ಷಗಳಿಂದ ನಿಲುಗಡೆಯಾಗುತ್ತಿಲ್ಲ. ಇದರಿಂದ ಜಿಲ್ಲೆಯ ಜನ ರಾಯಚೂರು, ಸೇಡಂಗೆ ತೆರಳಿ ರೈಲು ಹತ್ತುವ ಸ್ಥಿತಿ ಏರ್ಪಟ್ಟಿದೆ.

ಮಾರ್ಚ್‌ 12ರಿಂದ ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್‌ ರೈಲಿಗೆ ವರ್ಚುವಲ್‌ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡುವರು. ಆದರೆ, ಪಕ್ಕದ ವಾಡಿಯಲ್ಲಿ ರೈಲು ನಿಲುಗಡೆಯಾಗುತ್ತಿದ್ದು, ಜಿಲ್ಲಾ ಕೇಂದ್ರವಾದ ಯಾದಗಿರಿಯಲ್ಲಿ ನಿಲುಗಡೆಯಾಗುತ್ತಿಲ್ಲ. ಇದರಿಂದ ಜಿಲ್ಲೆಯ ಜನರಿಗೆ ನಿರಾಶೆಯಾಗಿದೆ.

ಕಲಬುರಗಿಯಿಂದ ಬೆಳಿಗ್ಗೆ 5 .15ಕ್ಕೆ ಹೊರಡುವ ರೈಲು ಹೊರಟು ವಾಡಿಗೆ 5.40, ರಾಯಚೂರಿಗೆ 6.53, ಮಂತ್ರಾಲಯಂ ರೋಡ್ 7.08, ಗುಂತಕಲ್ 8.25, ಅನಂತಪುರ 9.28, ಧರ್ಮಾವರಂ 10.50, ಯಲಹಂಕ 12.45, ಬೈಯಪ್ಪನಹಳ್ಳಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ.

ಬೈಯ್ಯಪ್ಪನಹಳ್ಳಿಯಿಂದ ಮಧ್ಯಾಹ್ನ 2.40ಕ್ಕೆ ಹೊರಟು ಯಲಹಂಕಕ್ಕೆ 3.08, ಧರ್ಮಾವರಂ 5:45, ಅನಂತಪುರ, 5.58, ಗುಂತಕಲ್ 7, ಮಂತ್ರಾಲಯಂ ರೋಡ್ ರಾತ್ರಿ 8.15, ರಾಯಚೂರು 8.45, ವಾಡಿ 11.05 ಮತ್ತು ಕಲಬುರಗಿಗೆ ರಾತ್ರಿ 11.30ಕ್ಕೆ ತಲುಪಲಿದೆ.

ಹಲವು ರೈಲು ನಿಲುಗಡೆಯಾಗುತ್ತಿಲ್ಲ: ಕೇಂದ್ರ ಸರ್ಕಾರದ ನೀತಿ ಅಯೋಗದ ಮಹತ್ವಾಕಾಂಕ್ಷಿ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ ಹಲವು ರೈಲುಗಳು ನಿಲುಗಡೆಯಾಗುತ್ತಿಲ್ಲ. ಹಲವು ರೈಲುಗಳು ರಾಯಚೂರು ಮತ್ತು ವಾಡಿ, ಸೇಡಂನಲ್ಲಿ ನಿಲುಗಡೆಯಾಗುತ್ತವೆ. ಆದರೆ, ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿಲ್ಲ. ಇದರಿಂದ ಜಿಲ್ಲೆಯ ಪ್ರಯಾಣಿಕರು ದೆಹಲಿಗೆ ತೆರಳಲು ಸೇಡಂ ಅಥವಾ ರಾಯಚೂರಿಗೆ ಪ್ರಯಾಣಿಸಿ ಅಲ್ಲಿಂದ ರೈಲು ಹತ್ತಬೇಕಿದೆ.

ಜಿಲ್ಲೆಯಾಗಿ 13 ವರ್ಷ: ಬ್ರಿಟಿಷರ ಕಾಲದಿಂದಲೂ ಬಾಂಬೆ–ಮದ್ರಾಸ್‌ ರೈಲ್ವೆ ಹಳಿ ಜಿಲ್ಲೆಯ ಮೂಲಕ ಹಾದು ಹೋಗಿದೆ. ಜಿಲ್ಲೆಯಾಗಿ 13 ವರ್ಷ ಕಳೆದಿದ್ದೂ ಇಲ್ಲಿಯವರೆಗೆ ಹಲವು ರೈಲುಗಳು ನಿಲುಗಡೆಯಾದರೇ ರೈಲ್ವೆ ಇಲಾಖೆ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಜಿಲ್ಲೆಯ ಜನರ ಆರೋಪವಾಗಿದೆ.

ಗುಂತಕಲ್‌ ರೈಲ್ವೆ ವಿಭಾಗದಲ್ಲಿ ತಿರುಪತಿ ನಂತರ ಯಾದಗಿರಿ ರೈಲ್ವೆ ನಿಲ್ದಾಣ ಅತಿ ಹೆಚ್ಚು ಆದಾಯ ನೀಡುವ ನಿಲ್ದಾಣವಾಗಿದೆ. ಆದರೂ ಯಾಕೆ ಈ ನಿರ್ಲಕ್ಷ್ಯ ಎಂದು ಜಿಲ್ಲೆಯ ಜನತೆ ಪ್ರಶ್ನೆಯಾಗಿದೆ. ಮೂರು ಫ್ಲಾಟಂಫಾರಂಗಳಿದ್ದು, ಮೂರು ಕಡೆಯೂ ಅಗತ್ಯ ಸೌಲಭ್ಯಗಳು ಪ್ರಯಾಣಿಕರಿಗೆ ಇಲ್ಲದಂತಾಗಿದೆ. ಸಮರ್ಪಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇರುವ ಶುದ್ಧ ನೀರಿನ ಘಟಕವೂ ದುರಸ್ತಿಗೆ ಬಂದು ನಿಂತಿದೆ.

ರೈಲ್ವೆ ಸಚಿವರಿಗೆ ಸಂಸದರ ಪತ್ರ

ರಾಯಚೂರು ಕಲಬುರಗಿ ಸಂಸದರಾದ ರಾಜಾ ಅಮರೇಶ್ವರ ನಾಯಕ ಡಾ.ಉಮೇಶ ಜಾಧವ್ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರು ಕೇಂದ್ರ ರೈಲ್ವೆ ಅಶ್ವಿನಿ ವೈಷ್ಣವ್‌ ಅವರಿಗೆ ಪತ್ರ ಬರೆದು ವಂದೇ ಭಾರತ್‌ ರೈಲು ಯಾದಗಿರಿಯಲ್ಲಿ ನಿಲುಗಡೆ ಮಾಡಬೇಕು ಎಂದು ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಆದರೆ ಎಲ್ಲ ವೇಳಾಪಟ್ಟಿ ಸಿದ್ದವಾದ ನಂತರ ರಾಜಕೀಯ ಲಾಭ ಪಡೆಯಲು ಪತ್ರ ಬರೆದಿರುವ ನಾಟಕವಾಡುತ್ತಿದ್ದಾರೆ. ಮುಂದಿನ ಚುನಾವಣೆಗೆ ಎರಡು ಲೋಕಸಭೆ ಕ್ಷೇತ್ರದ ಸಂಸದರು ಮತ ಕೇಳಲು ಬರುವಾಗ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಜಿಲ್ಲೆಯ ಜನತೆ ಜನಪ್ರತಿನಿಧಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾದಗಿರಿ ನಗರದ ರೈಲ್ವೆ ನಿಲ್ದಾಣ
ಯಾದಗಿರಿ ನಗರದ ರೈಲ್ವೆ ನಿಲ್ದಾಣ
ಯಾದಗಿರಿ ರೈಲ್ವೆ ನಿಲ್ದಾಣ ಕರ್ನಾಟಕ ನಕ್ಷೆಯಲ್ಲಿ ಇರುವುದರ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ಇದಿಯೋ ಗೊತ್ತಿಲ್ಲ. ಕೂಡಲೇ ಎಲ್ಲ ಏಕ್ಸ್‌ಪ್ರೆಸ್‌ ರೈಲುಗಳನ್ನು ನಿಲುಗಡೆ ಮಾಡಬೇಕು
-ಭಾಸ್ಕರ್‌ರಾವ ಮುಡಬೂಳ, ಹಿರಿಯ ವಕೀಲ
ಯಾದಗಿರಿಯಲ್ಲಿ ವಂದೇ ಭಾರತ್‌ ರೈಲು ನಿಲುಗಡೆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಹಲವು ವರ್ಷಗಳಿಂದ ಕೆಲವು ರೈಲುಗಳು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿಲ್ಲ
-ರಾಜನ್‌ ದಾಸ್‌, ರೈಲ್ವೆ ಸ್ಟೇಷನ್‌ ಮ್ಯಾನೇಜರ್‌ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT